ಶೃಂಗೇರಿ ಕ್ಷೇತ್ರದಲ್ಲಿ ತಿರಸ್ಕೃತಗೊಂಡಿದ್ದ 279 ಅಂಚೆ ಮತ ಮರು ಪರಿಶೀಲಿಸಿ, ಫಲಿತಾಂಶ ಪ್ರಕಟಿಸಲು ಹೈಕೋರ್ಟ್‌ ಆದೇಶ

ಶೃಂಗೇರಿ ಶಾಸಕರಾದ ಕಾಂಗ್ರೆಸ್‌ನ ಟಿ ಡಿ ರಾಜೇಗೌಡ ಚುನಾವಣೆ ಪ್ರಶ್ನಿಸಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ ಎನ್‌ ಜೀವರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.
ಶೃಂಗೇರಿ ಕ್ಷೇತ್ರದಲ್ಲಿ ತಿರಸ್ಕೃತಗೊಂಡಿದ್ದ 279 ಅಂಚೆ ಮತ ಮರು ಪರಿಶೀಲಿಸಿ, ಫಲಿತಾಂಶ ಪ್ರಕಟಿಸಲು ಹೈಕೋರ್ಟ್‌ ಆದೇಶ
Published on

ಚಿಕ್ಕಮಗಳೂರಿನ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾಗಿರುವ 1,811 ಅಂಚೆ ಮತಗಳ ಪೈಕಿ ತಿರಸ್ಕೃತಗೊಂಡಿರುವ 279 ಅಂಚೆ ಮತಗಳನ್ನು ಮರು ಪರಿಶೀಲಿಸಿ, ಆನಂತರ ಎಲ್ಲಾ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಮಹತ್ವದ ಆದೇಶ ಮಾಡಿದೆ.

ಶೃಂಗೇರಿ ಶಾಸಕರಾದ ಕಾಂಗ್ರೆಸ್‌ನ ಟಿ ಡಿ ರಾಜೇಗೌಡ ಚುನಾವಣೆ ಪ್ರಶ್ನಿಸಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ ಎನ್‌ ಜೀವರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

Justice R Nataraj
Justice R Nataraj

“ತಿರಸ್ಕೃತಗೊಂಡಿರುವ 279 ಅಂಚೆ ಮತಗಳನ್ನು ಚುನಾವಣಾಧಿಕಾರಿ ಪರಿಶೀಲಿಸಬೇಕು. ಮರು ಪರಿಶೀಲಿಸುವಾಗ ಚುನಾವಣಾ ಅಧಿಕಾರಿಗಳ ಕೈಪಿಡಿ 2023ರ ಮಾರ್ಗಸೂಚಿ 15.14.7 ಅನ್ನು ಅನೂಚನವಾಗಿ ಅನುಪಾಲಿಸಬೇಕು ಮತ್ತು ಅಂಚೆ ಮತಗಳು ಸಮಸ್ಯಾತ್ಮಕವಾಗಿದೆಯೇ ಎಂಬುದನ್ನು ಪತ್ತೆ ಮಾಡಬೇಕು. ಅಂಚೆ ಮತಗಳನ್ನು ಪರಿಶೀಲಿಸಿದ ಬಳಿಕ ಎಲ್ಲಾ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಅರ್ಜಿದಾರರು ಅಥವಾ ಪ್ರತಿವಾದಿಗಳು ಪಡೆದಿರುವ ಮತಗಳ ಫಲಿತಾಂಶ ಪ್ರಕಟಿಸಬೇಕು. ಇದನ್ನು ಎರಡು ವಾರಗಳಲ್ಲಿ ಮಾಡಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಆದೇಶದ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿ ಮತ್ತು ಶೃಂಗೇರಿಯ ಚುನಾವಣಾಧಿಕಾರಿಗೆ ರಿಜಿಸ್ಟ್ರಿ ಸ್ಪೀಡ್‌ ಪೋರ್ಟ್‌ ಅಥವಾ ಈ-ಮೇಲ್‌ ಮೂಲಕ ಕಳುಹಿಸಿಕೊಡಬೇಕು ಎಂದು ನ್ಯಾಯಾಲಯ ಆದೇಶಿಸಿತು.

ಇದರ ಬೆನ್ನಿಗೇ, ರಾಜೇಗೌಡ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಆದೇಶಕ್ಕೆ ಎರಡು-ಮೂರು ವಾರಗಳ ತಡೆ ನೀಡಬೇಕು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದರು. ಇದಕ್ಕೆ ಒಪ್ಪಿದ ನ್ಯಾಯಾಲಯವು ಆದೇಶಕ್ಕೆ ಎರಡು ವಾರಗಳಿಗೆ ತಡೆ ನೀಡಿತು. ಆದೇಶಕ್ಕೆ ತಡೆ ನೀಡುವುದಕ್ಕೆ ಜೀವರಾಜ್‌ ಪರ ವಕೀಲೆ ಪಿ ಎಲ್‌ ವಂದನಾ ಅವರು ವಿರೋಧಿಸಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 1,811 ಅಂಚೆ ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್‌ನ ರಾಜೇಗೌಡ ಅವರು 201 ಮತಗಳಿಂದ ವಿಜೇತರಾಗಿದ್ದರು.

Kannada Bar & Bench
kannada.barandbench.com