
ಆಲಮಟ್ಟಿ ಜಲಾಶಯದ ಅಚ್ಚುಕಟ್ಟು ರೈತರ ಬೆಳೆದ ನಿಂತಿರುವ ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುಕ್ರವಾರದಿಂದ (ಏಪ್ರಿಲ್ 4) ಏಪ್ರಿಲ್ 6ರವರೆಗೆ ಬಸವಸಾಗರ (ನಾರಾಯಣಪುರ) ಜಲಾಶಯದಿಂದ 0.80 ಟಿಎಂಸಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಗುರುವಾರ ಆದೇಶಿಸಿದೆ.
ಯಾದಗಿರಿ ಜಿಲ್ಲೆಯ ಕೊಡೆಕಲ್ಲ ಗ್ರಾಮದ ಮಲ್ಲಪ್ಪ ಬಸಣ್ಣ ನವಲಗುಡ್ಡ ಸೇರಿದಂತೆ ಇತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ ಅವರ ಏಕಸದಸ್ಯ ಪೀಠ ಗುರುವಾರ ಈ ಕುರಿತಂತೆ ಆದೇಶಿಸಿದೆ.
ರಾಜ್ಯ ಸರ್ಕಾರ ಕಳೆದ ತಿಂಗಳ 14ರಂದು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನದ ಅನುಸಾರ, ಬಸವಸಾಗರ ಜಲಾಶಯದಿಂದ ನೀರು ಹರಿಸಲು ಬದ್ಧವಾಗಿರುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದಿಸಿದರು. ಹೈಕೋರ್ಟ್ ವಕೀಲೆ ಮೊನಿಕಾ ಪಾಟೀಲ್ ವಕಾಲತ್ತು ಹಾಕಿದ್ದರು.