
ಕೆನಡಾದಲ್ಲಿ 2017ರ ಆಗಸ್ಟ್‌ನಲ್ಲಿ ನಡೆದ ಏಳನೇ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗೆದ್ದಿರುವ ವಿಕಲಚೇತನ ಕ್ರೀಡಾಪಟುಗಳಿಗೆ 2013ರ ಮಾರ್ಗಸೂಚಿಗಳಂತೆ ನಗದು ಬಹುಮಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.
ಕೆನಡಾದಲ್ಲಿ ನಡೆದಿದ್ದ ಏಳನೇ ವಿಶ್ವ ಕುಬ್ಜ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಸಿ ವಿ ರಾಜಣ್ಣ ಮತ್ತು ಇತರೆ ಆರು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ರಾಜ್ಯ ಸರ್ಕಾರ 2013ರ ನವೆಂಬರ್ 30ರಂದು ಹೊರಡಿಸಿರುವ ಆದೇಶದಂತೆ ವಿಕಲಚೇತನ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಬೇಕು ಎಂದು ಆದೇಶಿಸಿರುವ ನ್ಯಾಯಾಲಯವು ಮುಂದಿನ ಎಂಟು ವಾರಗಳಲ್ಲಿ ಆದೇಶ ಜಾರಿ ಮಾಡಬೇಕು ಎಂದು ನಿರ್ದೇಶಿಸಿದೆ.
2013ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದಂತೆ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದವರಿಗೆ ₹10 ಲಕ್ಷ, ಬೆಳ್ಳಿ ಪದಕ ಗೆದ್ದವರಿಗೆ ₹ 7 ಲಕ್ಷ ಮತ್ತು ಕಂಚು ಗೆದ್ದವರಿಗೆ ₹ 5 ಲಕ್ಷ ನೀಡಬೇಕು. ಸರ್ಕಾರದ ಆದೇಶವು ಅರ್ಜಿದಾರರು ಕ್ರೀಡಾ ಕೂಟಕ್ಕೆ ಆಯ್ಕೆಯಾಗುವ ಸಂದರ್ಭದಲ್ಲಿ ಚಾಲ್ತಿಯಲ್ಲಿತ್ತು. ಆದ್ದರಿಂದ, ಅರ್ಜಿದಾರರ ನಗದು ಬಹುಮಾನಕ್ಕೆ ಅರ್ಹರು ಎಂದು ಪೀಠ ಹೇಳಿದೆ.
“ಅರ್ಜಿದಾರರು ವಿಶ್ವ ಕುಬ್ಜ ಒಕ್ಕೂಟದ ಆಹ್ವಾನದ ಮೇರೆಗೆ ಕ್ರೀಡಾ ಕೂಟದಲ್ಲಿ ಭಾಗಿಯಾಗಿದ್ದಾರೆ. ನಿರಂಜನ್ ಮುಕುಂದನ್ ಪ್ರಕರಣದಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠದ 2022ರ ಆದೇಶಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ನಡೆದುಕೊಳ್ಳಲಾಗದು” ಎಂದು ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಪರ ವಕೀಲರು “ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅರ್ಜಿದಾರರು ಕ್ರೀಡಾ ಕೂಟದಲ್ಲಿ ಭಾಗಿಯಾಗಿಲ್ಲ ಎಂದು ಮನವಿಯನ್ನು ತಿರಸ್ಕರಿಸಲಾಗಿದೆ. ಸರ್ಕಾರವು ಅಭ್ಯರ್ಥಿಗಳನ್ನು ವಿಶ್ವಮಟ್ಟದ ಯಾವುದೇ ಕ್ರೀಡೆಗಳಲ್ಲಿ ಭಾಗಿಯಾಗಲು ಪ್ರಾಯೋಜಕತ್ವ ನೀಡದ ಕಾರಣ ಅವರು ಸ್ವಇಚ್ಛೆಯಿಂದ ಭಾಗವಹಿಸಿದ್ದಾರೆ. ಆದ್ದರಿಂದ, ಅವರು ನಗದು ಬೆಲೆಯನ್ನು ಪರಿಹಾರವಾಗಿ ಕೇಳುವುದಕ್ಕೆ ಸಾಧ್ಯವಿಲ್ಲ” ಎಂದಿದ್ದರು.
“ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ದೈಹಿಕ ಅಶಕ್ತವಾಗಿರುವ ಅರ್ಜಿದಾರರನ್ನು ಶ್ಲಾಘಿಸಿ ಪರಿಹಾರ ನೀಡಿದರೆ ಇದೊಂದು ಪೂರ್ವನಿದರ್ಶನವಾಗಲಿದ್ದು, ಸರ್ಕಾರದ ಗಮನಕ್ಕೆ ಬಾರದೆ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರು ನಗದು ಬಹುಮಾನ ಕೋರಲಿದ್ದಾರೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು” ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ವೈದ್ಯಕೀಯ ಭಾಷೆಯಲ್ಲಿ ಕುಬ್ಜತೆ ಎಂದು ಕರೆಯುವ ದೇಹದ ಬೆಳವಣಿಗೆ ಕುಂಠಿತದಿಂದ ಬಳಲುವ ದೈಹಿಕ ವಿಕಲಚೇತನರಾಗಿದ್ದಾರೆ. ಹಲವಾರು ಕ್ರೀಡಾ ಕೂಟಗಳಲ್ಲಿ ಅದರಲ್ಲಿಯೂ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ವಿಶ್ವ ಕುಬ್ಜ ಕೂಟವು ಪ್ಯಾರಾಲಿಂಪಿಕ್ಸ್‌ಗೆ ಹೋಲಲಿದ್ದು, ಅರ್ಜಿದಾರರು ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗಿಯಾದವರಾಗಿದ್ದಾರೆ.
2017ರಲ್ಲಿ ಕೆನಡಾದಲ್ಲಿ ನಡೆದಿದ್ದ ಏಳನೇ ವಿಶ್ವ ಕುಬ್ಜ ಕ್ರೀಡಾಕೂಟಕ್ಕೆ ಅರ್ಹ ಕ್ರೀಡಾ ಪಟುಗಳನ್ನು ಭಾರತೀಯ ಕುಬ್ಜ ಕ್ರೀಡಾ ಫೆಡರೇಷನ್ ಮತ್ತು ಕರ್ನಾಟಕ ವಿಕಲಚೇತನರ ಕ್ರೀಡಾ ಸಂಘ ಆಯ್ಕೆ ಮಾಡಿದ್ದವು. ಅದರಂತೆ 26 ಅಭ್ಯರ್ಥಿಗಳು ಕೆನಡ ಕ್ರೀಡಾ ಕೂಟದಲ್ಲಿ ಭಾಗಿಯಾಗಿದ್ದರು. ಈ ಪೈಕಿ ಏಳು ಮಂದಿ ಕರ್ನಾಟಕದವರು ಕೆನಡಾ ವಿಶ್ವ ಕ್ರೀಡಾಕೂಟದಲ್ಲಿ ರಾಷ್ಟ್ರ ಪ್ರತಿನಿಧಿಸಿದ್ದರು. ಇಲ್ಲಿ ಪದಕ ಗೆದ್ದ ಅರ್ಜಿದಾರರಿಗೆ ಸರ್ಕಾರ ಯಾವುದೇ ಬಹುಮಾನ ನೀಡಿರಲಿಲ್ಲ. ಹೀಗಾಗಿ, ನಿರ್ದೇಶನ ಕೋರಿ ಅರ್ಜಿದಾರರು 2021ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಮನವಿ ಪರಿಗಣಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಸರ್ಕಾರ ಅವರ ಮನವಿಯನ್ನು 2022ರ ಜನವರಿ 13ರಂದು ತಿರಸ್ಕರಿಸಿತ್ತು. ಹೀಗಾಗಿ, ಮತ್ತೆ 2024ರಲ್ಲಿ ಹೈಕೋರ್ಟ್ ಕದತಟ್ಟಿದ್ದರು.