ಬಾಲ ನ್ಯಾಯ ಅಧಿನಿಯಮಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಸರ್ಕಾರಕ್ಕೆ ನಿರ್ದೇಶಿಸಿದ ಹೈಕೋರ್ಟ್‌; ಮನವಿ ಇತ್ಯರ್ಥ

ಬಾಲ ನ್ಯಾಯ (ಮಕ್ಕಳ ಆರೈಕೆ & ರಕ್ಷಣೆ) ಅಧಿನಿಯಮ-2022ಅನ್ನು ರೂಪಿಸಲಾಗಿದೆ. 2022ರ ಏಪ್ರಿಲ್‌ 9ರಂದು ಕರಡು ನಿಯಮ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ ಎಂದು ವಿವರಿಸಿದ ಸರ್ಕಾರ.
ಬಾಲ ನ್ಯಾಯ ಅಧಿನಿಯಮಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಸರ್ಕಾರಕ್ಕೆ ನಿರ್ದೇಶಿಸಿದ ಹೈಕೋರ್ಟ್‌; ಮನವಿ ಇತ್ಯರ್ಥ
Karnataka High Court

ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ-2015ರ ಅಡಿ ಪೋಷಕರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲುಸಿ) ಒಪ್ಪಿಸಿದ ಪ್ರಕರಣಗಳಲ್ಲಿ ತನಿಖೆ ಮತ್ತು ಕೌನ್ಸೆಲಿಂಗ್ ನಡೆಸಲು ಅನುಸರಿಸಬೇಕಾದ ವಿಧಾನಗಳ ಕುರಿತು ಕರಡು ನಿಯಮ ಪ್ರಕಟಿಸಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಲಿವ್‌-ಇನ್‌ ಸಂಬಂಧ ಹೊಂದಿದ್ದ ಜೋಡಿ ತಮ್ಮ 12 ದಿನಗಳ ಹಸುಗೂಸನ್ನು ಸಿಡಬ್ಲುಸಿಗೆ ಒಪ್ಪಿಸಿದ್ದರ ಕುರಿತಾದ ಮಾಧ್ಯಮ ವರದಿ ಆಧರಿಸಿ ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರಿ ವಕೀಲ ವಿಜಯ್ ಕುಮಾರ್ ಎ.ಪಾಟೀಲ್ ಅವರು “ಹೈಕೋರ್ಟ್ ಆದೇಶದ ಮೇರೆಗೆ ಪೋಷಕರು ತಮ್ಮ ಮಕ್ಕಳನ್ನು ಸಿಡಬ್ಲುಸಿಗೆ ಒಪ್ಪಿಸಿದ ಸಂದರ್ಭದಲ್ಲಿ ತನಿಖೆ ಮತ್ತು ಕೌನ್ಸೆಲಿಂಗ್ ನಡೆಸಲು ಅನುಸರಿಸಬೇಕಾದ ನಿಯಮಗಳ ಕುರಿತು ಕರ್ನಾಟಕ ರಾಜ್ಯ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಅಧಿನಿಯಮಗಳು-2022 ಅನ್ನು ರೂಪಿಸಲಾಗಿದೆ. ಈಗಾಗಲೇ 2022ರ ಏಪ್ರಿಲ್‌ 9ರಂದು ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ. ಸಲಹೆ ಹಾಗೂ ಆಕ್ಷೇಪಣೆ ಸ್ವೀಕರಿಸಿದ ನಂತರ ಪರಿಶೀಲನೆ ನಡೆಸಿ ನಿಯಮಗಳನ್ನು ಅಂತಿಮಗೊಳಿಸಲಾಗುವುದು ಹಾಗೂ ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು.

Also Read
ಸಿಡಬ್ಲ್ಯುಸಿಗೆ ಮಕ್ಕಳನ್ನು ಒಪ್ಪಿಸುವುದರ ಕುರಿತಾದ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಕೊನೆ ಅವಕಾಶ ನೀಡಿದ ಹೈಕೋರ್ಟ್‌

ಅಲ್ಲದೇ, ಪ್ರಕರಣದಲ್ಲಿ ಸಿಡಬ್ಲುಸಿಗೆ ಒಪ್ಪಿಸಲಾಗಿದ್ದ ಮಗುವನ್ನು ದತ್ತು ಪಡೆಯಲು ಬೇರೊಂದು ದಂಪತಿ ಮುಂದೆ ಬಂದಿತ್ತು. ಅದರಂತೆ 2021ರ ನವೆಂಬರ್‌ 15ರಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಆ ದಂಪತಿಗೆ ಮಗುವನ್ನು ದತ್ತು ನೀಡಲಾಗಿದೆ ಎಂದು ಎಂದು ವಿವರಿಸಿದರು.

ಇದನ್ನು ದಾಖಲಿಸಿಕೊಂಡ ಪೀಠವು ಶೀಘ್ರ ನಿಯಮಗಳನ್ನು ಅಂತಿಮಗೊಳಿಸಿ ಗೆಜೆಟ್‌ನಲ್ಲಿ ಪ್ರಕಟಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು. ಅರ್ಜಿದಾರ ಸಂಸ್ಥೆಯಾದ ಲೆಟ್ಜ್‌ಕಿಟ್ ಫೌಂಡೇಷನ್ ಪರ ಹಿರಿಯ ವಕೀಲ ರಮೇಶ್ ಪುತ್ತಿಗೆ ವಾದ ಮಂಡಿಸಿದ್ದರು.

Related Stories

No stories found.