ಅಜೀಂ ಪ್ರೇಮ್‌ಜಿ ಟ್ರಸ್ಟೀ ಕಂಪೆನಿ ಪ್ರೈವೇಟ್ ಲಿಮಿಟೆಡ್‌ಗೆ ಹೆಚ್ಚುವರಿಯಾಗಿ ₹5,258.14 ಕೋಟಿ ತೆರಿಗೆ ಪಾವತಿಗೆ ಬೇಡಿಕೆ ಇಟ್ಟಿದ್ದ ಆದಾಯ ತೆರಿಗೆ ಇಲಾಖೆಯ ಆದೇಶಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಅಜೀಂ ಪ್ರೇಮ್‌ಜಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ಮುಂದಿನ ವಿಚಾರಣೆಯವರೆಗೆ ಆದಾಯ ತೆರಿಗೆ ಇಲಾಖೆಯ ಬೇಡಿಕೆಗೆ ತಡೆ ನೀಡಿದೆ.
ಮಧ್ಯಂತರ ಆದೇಶ ತೆರವು ಅಥವಾ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಕೋರಿ ತೆರಿಗೆ ಇಲಾಖೆಯು ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಬಹುದಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ. ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಮತ್ತು ಉಪ ಆಯುಕ್ತರಿಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯ ವೇಳೆಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.
ಅಜೀಂ ಪ್ರೇಮ್‌ಜಿ ಟ್ರಸ್ಟೀ ಕಂಪೆನಿಯು ₹282.48 ಕೋಟಿ ತೆರಿಗೆ ಪಾವತಿಸಿದೆ. ತೆರಿಗೆ ಇಲಾಖೆಯು 2021-22ನೇ ಸಾಲಿಗೆ ಹೆಚ್ಚುವರಿಯಾಗಿ ₹5,258.14 ಕೋಟಿ ತೆರಿಗೆ ಬೇಡಿಕೆ ಇರಿಸಿತ್ತು. ಇದನ್ನು ಪ್ರಶ್ನಿಸಿ ಅಜೀಂ ಪ್ರೇಮ್‌ಜಿ ಟ್ರಸ್ಟೀ ಕಂಪೆನಿಯು ತೆರಿಗೆ ಇಲಾಖೆಯ ಸೂಚನೆಯನ್ನು ವಜಾ ಮಾಡಲು ಕೋರಿದ್ದು, ತನಗೆ ಇಲಾಖೆಯು ನೀಡಬೇಕಿರುವ ಬಾಕಿ ಮೊತ್ತದಲ್ಲಿ (ರಿಫಂಡ್) ಹೊಂದಾಣಿಕೆ ಮಾಡದಂತೆ ಹಾಗೂ ಆಕ್ಷೇಪಾರ್ಹವಾದ ಬೇಡಿಕೆಗೆ ತಡೆ ನೀಡುವಂತೆ ಕೋರಿತ್ತು.
ಅರ್ಜಿ ವಿಚಾರಣೆಯನ್ನು ಪೀಠವು ಜನವರಿ 19ಕ್ಕೆ ಮುಂದೂಡಿದೆ.