ಡಿಸಿಎಂ ಡಿ ಕೆ ಶಿವಕುಮಾರ್‌ ಟಿಪ್ಪಣಿ ಆಧರಿಸಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ, ನಿಯೋಜನೆಗೆ ಹೈಕೋರ್ಟ್‌ ತಡೆಯಾಜ್ಞೆ

ಅಧಿಕಾರಿಗಳ ವರ್ಗಾವಣೆ, ನಿಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಟಿಪ್ಪಣಿ ಹೊರಡಿಸಿರುವುದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ಆಡಳಿತಾತ್ಮಕ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ ಎಂದು ಆಕ್ಷೇಪ.
D K Shivakumar and Karnataka HC
D K Shivakumar and Karnataka HC

ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ 2023ರ ಆಗಸ್ಟ್‌ 10ರಂದು ಬರೆದಿರುವ ಟಿಪ್ಪಣಿ ಆಧರಿಸಿ ಕೈಗೊಳ್ಳಲಾಗಿದ್ದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ಬೆಂಗಳೂರಿನ ಅನೀಸ್ ಫಾತಿಮಾ ಸೇರಿದಂತೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ-ಕಿರಿಯ ಆರೋಗ್ಯ ಪರಿವೀಕ್ಷಕರು, ಎಸ್‌ಡಿಎ, ಎಫ್‌ಡಿಎ, ಸಹಾಯಕ ಇಂಜಿನಿಯರ್ ಹುದ್ದೆಯ 17 ಮಂದಿ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಉಪ ಮುಖ್ಯಮಂತ್ರಿ ಶಿವಕುಮಾರ್‌ ಅವರ ಆಗಸ್ಟ್‌ 10ರ ಟಿಪ್ಪಣಿ ಆಧರಿಸಿ ಯಾವುದೇ ವರ್ಗಾವಣೆ ಅಥವಾ ನಿಯೋಜನೆ ಕೈಗೊಳ್ಳುವಂತಿಲ್ಲ ಎಂದು ತಡೆಯಾಜ್ಞೆ ಮಾಡಿ, ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ. ಅರ್ಜಿದಾರರ ಪರ ವಕೀಲ ವಿ ಶ್ರೀನಿವಾಸ್ ವಾದ ಮಂಡಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಲಯ ಹಾಗೂ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ದರ್ಜೆಯ ಅಧಿಕಾರಿಗಳನ್ನು ಕೆಲವರಿಗೆ ಅವರಿದ್ದ ಜಾಗ ಮತ್ತು ಹುದ್ದೆಯಲ್ಲಿ ಮುಂದುವರಿಸುವಂತೆ, ಕೆಲವರನ್ನು ಒಂದು ವಲಯ-ವಿಭಾಗದಿಂದ ಮತ್ತೊಂದು ಕಡೆ ವರ್ಗಾವಣೆಗೊಳಿಸುವಂತೆ, ಕೆಲವರಿಗೆ ನಿಯೋಜನೆಗಳಿಸುವಂತೆ, ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳನ್ನು ಬಿಬಿಎಂಪಿಗೆ ವರ್ಗಾವಣೆಗೊಳಿಸುವಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು 2023ರ ಆಗಸ್ಟ್‌ 10ರಂದು ಟಿಪ್ಪಣ್ಣಿ ಹೊರಡಿಸಿದ್ದರು. ಇದನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಲಾಗಿದೆ.

ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಟಿಪ್ಪಣಿ ಹೊರಡಿಸಿರುವುದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ಆಡಳಿತಾತ್ಮಕ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ. ಇದೊಂದು ರಾಜಕೀಯ ಒತ್ತಡದ ಕ್ರಮ. ಅಲ್ಲದೇ, ಇದು ವೃಂದ ಮತ್ತು ನೇಮಕಾತಿಗಳಿಗೆ ವಿರುದ್ಧವಾಗಿದೆ. ಉಪಮುಖ್ಯಮಂತ್ರಿ ಆಗಸ್ಟ್‌ 10ರ ಟಿಪ್ಪಣಿಗೆ ಈಗಾಗಲೇ ಇನ್ನೊಂದು ಅರ್ಜಿ ಸಂಬಂಧ ಬೇರೊಂದು ಪೀಠ ತಡೆ ನೀಡಿದೆ. ಹೀಗಿದ್ದರೂ, ಒಂದೇ ದಿನಾಂಕದಂದು ಎರಡು ಟಿಪ್ಪಣಿಗಳನ್ನು ಹೊರಡಿಸಲಾಗಿದೆ. ಹೀಗಾಗಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಆಗಸ್ಟ್‌ 10ರಂದು ಹೊರಡಿಸಿರುವ ಟಿಪ್ಪಣಿ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com