
ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸುವ ಮುನ್ನ ಸರ್ಕಾರ ಆ ಸಂಸ್ಥೆಗಳಿಗೆ ಯಾವ್ಯಾವ ವರ್ಗದ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ ಎಂಬ ಮಾಹಿತಿಯನ್ನು ಸಾಫ್ಟ್‌ವೇರ್ ಮೂಲಕ ಸಂಗ್ರಹಿಸಿ ಆ ದತ್ತಾಂಶ ಬಳಸಿಕೊಳ್ಳಬೇಕು ಮತ್ತು ಆ ನಂತರವೇ ಸ್ಥಾನಗಳ ಮೀಸಲು ಸಿದ್ಧಪಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಸೇರಿದಂತೆ ಐದು ಪಟ್ಟಣ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲು ವರ್ಗದ ಅಡಿಯಲ್ಲಿ ಯಾವುದೇ ಮಹಿಳಾ ಸದಸ್ಯರು ಆಯ್ಕೆಯಾಗಿಲ್ಲ ಎಂದು ಆಕ್ಷೇಪಿಸಲಾದ ಐದು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಪುರಸಭೆಗಳಿಗೆ ಆಯ್ಕೆಯಾದ ವ್ಯಕ್ತಿಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಸಾಫ್ಟ್‌ವೇರ್ ಮೂಲಕ ಸಂಗ್ರಹಿಸಬೇಕು ಮತ್ತು ನಿರ್ದಿಷ್ಟ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಉಪಸ್ಥಿತಿಯನ್ನು ಪರಿಗಣಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲು ಪಟ್ಟಿ ಅಂತಿಮಗೊಳಿಸಬೇಕು ಎಂದು ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಹಾಲಿ ನಿಗದಿಪಡಿಸಿರುವ ಅವಧಿ ಮುಗಿಯುವವರೆಗೆ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳನ್ನು ಖಾಲಿ ಬಿಡಬೇಕು ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ಪೀಠವು ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳನ್ನು ಖಾಲಿ ಬಿಟ್ಟರೆ ಸಂಸ್ಥೆಗಳ ಆಡಳಿತ ನಿರ್ವಹಣೆಗೆ ತೊಂದರೆ ಆಗುತ್ತದೆ. ಹೀಗಾಗಿ, ಸರ್ಕಾರ ಆ ಹುದ್ದೆಗಳ ಮೀಸಲು ಮುಕ್ತವಾಗಿ ಇರಿಸಿ ಚುನಾವಣೆ ನಡೆಸಬಹುದು ಎಂದು ಆದೇಶಿಸಿದೆ.
ಚುನಾಯಿತ ಪುರಸಭೆ ಪ್ರತಿನಿಧಿಗಳ ದತ್ತಾಂಶ ಸಂಗ್ರಹಿಸಿ ಮೀಸಲಾತಿ ಪಟ್ಟಿ ಮಾಡಿದರೆ ಮತ್ತು ಮೀಸಲು ವರ್ಗಕ್ಕೆ ಯಾವುದೇ ಅಭ್ಯರ್ಥಿ ಕಂಡುಬಂದಿಲ್ಲ ಎಂದಾದರೆ, ಅದಕ್ಕೆ ಅನುಗುಣವಾಗಿ ಸೂಕ್ತ ಬದಲಾವಣೆ ಮಾಡಬಹುದು ಎಂದೂ ಹೇಳಿದೆ.
ಮೀಸಲಾತಿ ಎರಡು ಹಂತಗಳಲ್ಲಿ ಅನ್ವಯಿಸುತ್ತದೆ. ಒಂದು ಪುರಸಭೆಗೆ ಆಯ್ಕೆಯಾಗುವ ಸಮಯದಲ್ಲಿ ಮತ್ತು ನಂತರ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಸಂದರ್ಭದಲ್ಲಿ. ಹೀಗಾಗಿ, ಯಾವ್ಯಾವ ವರ್ಗದ ಅಭ್ಯರ್ಥಿಗಳು ಅಯ್ಕೆಯಾಗಿದ್ದಾರೆ ಎಂಬ ದತ್ತಾಂಶ ಸಂಗ್ರಹಿಸಿ ಹುದ್ದೆಗಳಿಗೆ ಮೀಸಲು ಪಟ್ಟಿ ಮಾಡಿದರೆ ಹಾಗೂ ಒಂದು ಹುದ್ದೆಗೆ ಮೀಸಲಾತಿ ನೀಡಿದರೆ ಮತ್ತು ಆ ವರ್ಗಕ್ಕೆ ಯಾವುದೇ ಅಭ್ಯರ್ಥಿ ಕಂಡುಬಂದಿಲ್ಲ ಎಂದಾದರೆ ಸೂಕ್ತ ಬದಲಾವಣೆಗಳನ್ನು ಮಾಡಲು ಸರ್ಕಾರಕ್ಕೆ ಅವಕಾಶ ಇರುತ್ತದೆ. ಇಲ್ಲವಾದರೆ ಆ ಹುದ್ದೆಗಳೂ ಖಾಲಿ ಉಳಿಯುತ್ತವೆ. ಆಗ ಮೀಸಲು ಉದ್ದೇಶ ಸಾರ್ಥಕವಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.