ಓಡಾಟಕ್ಕೆ 840 ಬಸ್‌ ಖರೀದಿ ಕಾರ್ಯಾದೇಶ ಜಾರಿಗೆ ಬಿಎಂಟಿಸಿಗೆ ಹೈಕೋರ್ಟ್‌ ನಿರ್ದೇಶನ

ಒಂದೇ ಬಾರಿಗೆ ಅರ್ಜಿದಾರರು ಬಯಸಿರುವಂತೆ ಬಿಎಂಟಿಸಿ ಕ್ರಮಕೈಗೊಳ್ಳಬೇಕು ಎಂದು ಬಯಸಲಾಗದು. ಸೂಕ್ತ ಕ್ರಮಕೈಗೊಳ್ಳಲು ಬಿಎಂಟಿಸಿಗೆ ಒಂದಷ್ಟು ಕಾಲಾವಕಾಶ ನೀಡಬೇಕಾಗುತ್ತದೆ ಎಂದಿರುವ ನ್ಯಾಯಾಲಯ.
 BMTC bus
BMTC bus

ಸಾರ್ವಜನಿಕರ ಓಡಾಟಕ್ಕೆ 840 ಬಸ್‌ಗಳ ಖರೀದಿಗೆ ಸಂಬಂಧಿಸಿದಂತೆ ಹೊರಡಿಸಿರುವ ಕಾರ್ಯಾದೇಶ ಜಾರಿಗೆ ಕ್ರಮಕೈಗೊಳ್ಳಲು ಬೆಂಗಳೂರಿನ ಮೆಟ್ರೊಪಾಲಿಟನ್‌ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌ಗೆ (ಬಿಎಂಟಿಸಿ) ಸೋಮವಾರ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ.

ಬೆಂಗಳೂರಿನ ಸುನೀಲ್‌ ಕುಮಾರ್‌ ಜೈನ್‌ ಅವರು ಬಸ್‌ಗಳಲ್ಲಿನ ಅಡಿಗಟ್ಟಿನ (ಚಾಸೀಸ್‌) ಎತ್ತರ ಹೆಚ್ಚಿಸುವುದನ್ನು ಪ್ರಶ್ನಿಸಿ ಕೋರಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕು ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಬಿಎಂಟಿಸಿಯು ಹಲವು ಕ್ರಮಗಳನ್ನು ಕೈಗೊಂಡಿದೆ. ಹಂತಹಂತವಾಗಿ ಬಿಎಂಟಿಸಿಯು ಕ್ರಮಕೈಗೊಳ್ಳಬೇಕು ಎಂಬುದರಲ್ಲಿ ನಿರ್ವಿವಾದ. ಒಂದೇ ಬಾರಿಗೆ ಅರ್ಜಿದಾರರು ಬಯಸಿರುವಂತೆ ಬಿಎಂಟಿಸಿ ಕ್ರಮಕೈಗೊಳ್ಳಬೇಕು ಎಂದು ಬಯಸಲಾಗದು. ಸೂಕ್ತ ಕ್ರಮಕೈಗೊಳ್ಳಲು ಬಿಎಂಟಿಸಿಗೆ ಒಂದಷ್ಟು ಕಾಲಾವಕಾಶ ನೀಡಬೇಕಾಗುತ್ತದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಬಿಎಂಟಿಸಿ ಪ್ರತಿನಿಧಿಸಿದ್ದ ವಕೀಲರು ಹೊಸ ಬಸ್‌ಗಳು ವಿಶೇಷ ಚೇತನರಿಗೆ ಪೂರಕವಾಗಿವೆ. ಪ್ರತಿ ಬಸ್‌ನಲ್ಲಿ ನಾಲ್ಕು ಸೀಟುಗಳನ್ನು ವಿಶೇಷ ಚೇತನರಿಗೆ ಮೀಸಲಿಡಲಾಗಿದ್ದು, ಈ ಪೈಕಿ ಎರಡು ಮಹಿಳೆಯರಿಗೆ ಮತ್ತು ಇನ್ನೆರಡು ಪುರುಷರಿಗೆ ಮೀಸಲಾಗಿವೆ. ಸದ್ಯ ಬಿಎಂಟಿಸಿಯಲ್ಲಿರುವ ಶೇ. 21ರಷ್ಟು ಬಸ್‌ಗಳಲ್ಲಿ ಗಾಲಿ ಕುರ್ಚಿಯಲ್ಲಿ ಓಡಾಡುವವರಿಗೆ ಅನುಕೂಲತೆಗಳನ್ನು ಹೊಂದಿವೆ ಎಂದು ವಿವರಿಸಿದರು.

ಬಿಎಂಟಿಸಿ ಬಸ್‌ಗಳ ಚಾಸಿಸ್‌ ಅನ್ನು 1000 ಮಿ ಮೀಟರ್‌ಗೆ ಹೆಚ್ಚಿಸಲು 2022ರ ಅಕ್ಟೋಬರ್‌ 28ರಂದು ಬಿಎಂಟಿಸಿ ಹೊರಡಿಸಿರುವ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ವಿಕಲಚೇತನರಿಗೆ ಬಸ್‌ ಪ್ರವೇಶಿಸಲು ಬಸ್‌ನ ಎತ್ತರವನ್ನು ಟೆಂಡರ್‌ನಲ್ಲಿ ಉಲ್ಲೇಖಿಸಿಲ್ಲ ಮತ್ತು ಗಾಲಿ ಕುರ್ಚಿಯಲ್ಲಿರುವ ವ್ಯಕ್ತಿಗಳು ಬಸ್‌ ಏರಲು ಬೋರ್ಡಿಂಗ್ ಸಾಧನ ಅಳವಡಿಸುವುದರ ಕುರಿತು ವಿವರಿಸಲಾಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ಮೋಟಾರು ವಾಹನ ನಿಯಮ 1989 ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಟೆಂಡರ್ ಅಧಿಸೂಚನೆಯ ಕೆಲವು ಅಂಶಗಳು ಅರ್ಬನ್ ಬಸ್ ಸ್ಪೆಸಿಫಿಕೇಶನ್-II ಅನ್ನು ಉಲ್ಲಂಘಿಸಿವೆ. ಒಂದು ಮಿಲಿಯನ್‌ಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎಲ್ಲಾ ನಗರಗಳು 400 ಎಂಎಂ ಅಥವಾ 650 ಎಂಎಂ ನೆಲದ ಎತ್ತರವಿರುವ ಬಸ್‌ಗಳನ್ನು ಮಾತ್ರ ಖರೀದಿಸಬೇಕು ಎಂಬ ಷರತ್ತು ವಿಧಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com