ಅತ್ಯಾಚಾರ ಸಂತ್ರಸ್ತೆ ಅಪಹರಣ: ಎಚ್‌ ಡಿ ರೇವಣ್ಣ ಆರೋಪ ನಿಗದಿಗೆ ಅನುಮತಿಸಿದ ಹೈಕೋರ್ಟ್‌; ಮಧ್ಯಂತರ ಆದೇಶ ತೆರವು

“ವಿಚಾರಣೆ ಮುಂದೂಡಿಕೆಗೆ ಅಸಮರ್ಥನೀಯ ಮನವಿ ಮಾಡಲಾಗಿದೆ. ಹೀಗಾಗಿ, ಚಾಲ್ತಿಯಲ್ಲಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗಿದೆ” ಎಂದು ಆದೇಶಿಸಿದ ಹೈಕೋರ್ಟ್.‌
H D Revanna and Karnataka HC
H D Revanna and Karnataka HC
Published on

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ವಿರುದ್ಧ ಆರೋಪ ನಿಗದಿ ಮುಂದೂಡುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದ ಮಧ್ಯಂತರ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ತೆರವುಗೊಳಿಸಿದೆ. ಇದರಿಂದ ರೇವಣ್ಣಗೆ ತೀವ್ರ ಹಿನ್ನಡೆಯಾಗಿದ್ದು, ಆರೋಪ ನಿಗದಿ ಪ್ರಕ್ರಿಯೆ ಆರಂಭವಾಗಲಿದೆ.

ಮೈಸೂರು ಜಿಲ್ಲೆಯ ಕೆ ಆರ್‌ ಪೇಟೆ ಠಾಣೆಯಲ್ಲಿ ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಅನ್ವಯ ದಾಖಲಾಗಿರುವ ಪ್ರಕರಣದ ಸಂಬಂಧ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ವಜಾಗೊಳಿಸುವಂತೆ ಕೋರಿ ಎಚ್‌ ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣಾಧೀನ ನ್ಯಾಯಾಲಯದಲ್ಲಿ ಹಾಜರಾಗಬೇಕಿರುವುದರಿಂದ ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಮೆಮೊ ನ್ಯಾಯಾಲಯವನ್ನು ಕೆರಳಿಸಿತು. ಅಲ್ಲದೇ, 29.1.2026ರಂದು ಆರೋಪ ನಿಗದಿ ಮುಂದೂಡುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಮಾಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದ್ದ ನ್ಯಾಯಾಲಯವು ಮುಂದಿನ ವಿಚಾರಣೆ ವೇಳೆಗೆ ಅಂದರೆ 5.2.2026ರಂದು ವಾದ ಮಂಡಿಸಬೇಕು ಎಂಬ ನಿರ್ದಿಷ್ಟ ಸ್ಪಷ್ಟನೆಯನ್ನೂ ನೀಡಿತ್ತು. ಇದನ್ನು ಮೀರಿ ಅರ್ಜಿದಾರರು ಮೆಮೊ ಸಲ್ಲಿಸಿದ್ದನ್ನು ತಿರಸ್ಕರಿಸಿ, ನ್ಯಾಯಾಲಯವು ಮಧ್ಯಂತರ ಆದೇಶ ತೆರವುಗೊಳಿಸಿ, ಆದೇಶಿಸಿತು.

“30.1.2025 ರಂದು ವಿಚಾರಣಾಧೀನ ನ್ಯಾಯಾಲಯವು ಆರೋಪ ನಿಗದಿ ಮಾಡಬಾರದು ಎಂದು ಮಧ್ಯಂತರ ಆದೇಶ ಮಾಡಲಾಗಿದ್ದು, ಅದು 7.2.2025ರವರೆಗೆ ಚಾಲ್ತಿಯಲ್ಲಿತ್ತು. ಅಂದು ಅರ್ಜಿಯು ವಿಚಾರಣೆಗೆ ನಿಗದಿಯಾಗಿರಲಿಲ್ಲ. ಆಗಾಗಿ, ಮಧ್ಯಂತರ ಆದೇಶವು ವಿಸ್ತರಣೆಯಾಗಿರಲಿಲ್ಲ. ಆನಂತರ ಪ್ರಕರಣವು 29.1.2026ರಂದು ವಿಚಾರಣೆಗೆ ಪಟ್ಟಿಯಾಗಿದ್ದು, ಪ್ರಕರಣದಲ್ಲಿ ಆರೋಪ ನಿಗದಿಯನ್ನು ಮುಂದಿನ ವಿಚಾರಣೆವರೆಗೆ ಮಾಡಬಾರದು ಎಂದು ನ್ಯಾಯಾಲಯ ಆದೇಶಿಸಿತ್ತು. ಅಲ್ಲದೇ, ಮುಂದಿನ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ವಾದಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ ಎಂದು ಆದೇಶಿಸಿತ್ತು. ಇಂದು ವಿಚಾರಣೆ ಮುಂದೂಡಿಕೆ ಕೋರಿ ಅರ್ಜಿದಾರರು ಮೆಮೊ ಸಲ್ಲಿಸಿದ್ದಾರೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ವಕೀಲರನ್ನು ವಿಚಾರಣೆಗೆ ನಿಯೋಜಿಸಲಾಗಿದೆ. ಹೀಗಾಗಿ, ಇಲ್ಲಿ ವಿಚಾರಣೆ ಮುಂದೂಡಬೇಕು ಎಂದು ಮೆಮೊ ಸಲ್ಲಿಸಲಾಗಿದೆ. ಇಂಥ ಮೆಮೊವನ್ನು ಹೈಕೋರ್ಟ್‌ಗೆ ಸಲ್ಲಿಸಿರುವುದು ಸರಿಯಲ್ಲ. ಅರ್ಜಿದಾರರು ವಾದ ಮಂಡಿಸಲು ಸಿದ್ಧರಿಲ್ಲ ಮತ್ತು ಹಿಂದಿನ ವಿಚಾರಣೆಯಲ್ಲೂ ಅರ್ಜಿದಾರರ ವಕೀಲರು ವಾದಿಸಲು ಸಿದ್ಧರಿರಲಿಲ್ಲ. ಈ ವಿಚಾರವನ್ನು ಅರ್ಜಿದಾರರಿಗೆ 29.1.2026ರಂದು ಸ್ಪಷ್ಟಪಡಿಸಲಾಗಿದೆ. ನಿರ್ದಿಷ್ಟ ದಿನದಂದು ವಾದ ಮಂಡಿಸಲು ಸಿದ್ಧವಾಗುವಂತೆ ಸೂಚಿಸಿದ್ದರೂ ಅವರು ಸಿದ್ಧರಾಗಿಲ್ಲ. ಈಗ ಮತ್ತೆ ಅರ್ಜಿದಾರರ ಪರ ವಕೀಲರು ವಿಚಾರಣೆ ಮುಂದೂಡಿಕೆ ಕೋರಿದ್ದಾರೆ. ಇದಕ್ಕೆ ನ್ಯಾಯಾಲಯ ಒಪ್ಪಿಲ್ಲ. ವಿಚಾರಣೆ ಮುಂದೂಡಿಕೆಗೆ ಅಸಮರ್ಥನೀಯ ಮನವಿ ಮಾಡಲಾಗಿದೆ. ಹೀಗಾಗಿ, ಚಾಲ್ತಿಯಲ್ಲಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ. ಅಲ್ಲದೇ, ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 26ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ, ರೇವಣ್ಣ ಪರ ವಕೀಲ ಬಿ ಎಂ ಗಿರೀಶ್‌ಕುಮಾರ್‌ ಅವರನ್ನು ಕುರಿತು ಪೀಠವು “ಆರೋಪ ಮುಕ್ತಿ ಕೋರುವ ಸ್ವಾತಂತ್ರ್ಯ ನೀಡಲಾಗುವುದು ಸಕ್ಷಮ ನ್ಯಾಯಾಲಯದಲ್ಲಿ ಹೋಗಿ ಅರ್ಜಿ ಸಲ್ಲಿಸಿ. ಇಲ್ಲವಾದಲ್ಲಿ ಕೊಡುವ ದಿನಾಂಕದಂದು ವಾದ ಮಂಡಿಸಲು ಸಿದ್ಧರಾಗಿ ವಿಚಾರಣೆಗೆ ಹಾಜರಾಗಿ” ಎಂದು ಕಟುವಾಗಿ ನುಡಿಯಿತು.

Also Read
ಸಂತ್ರಸ್ತೆ ಅಪಹರಣ ಪ್ರಕರಣ: ರೇವಣ್ಣ ವಿರುದ್ಧ ಜ.30ರವರೆಗೆ ಆರೋಪ ನಿಗದಿ ಮಾಡದಂತೆ ಹೈಕೋರ್ಟ್‌ ಆದೇಶ

ಅಂತಿಮವಾಗಿ, “ನೀವು ದಂಡ ತೆರಲೇಬೇಕು. ವಿಚಾರಣೆ ನಡೆಸಲು ನೂರಾರು ಪ್ರಕರಣಗಳಿವೆ. ಕಳೆದ ಬಾರಿ ಏಕೆ ಸಿದ್ಧರಾಗಿರಲಿಲ್ಲ? ಹೈಕೋರ್ಟ್‌ ಮುಂದೆ ಯಾವ ರೀತಿಯ ವಿಚಾರಣೆ ಮುಂದೂಡಿಕೆ ಕೋರುತ್ತಿದ್ದೀರಿ? ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹೋಗಬೇಕು. ಹಾಗಾಗಿ, ವಿಚಾರಣೆ ಮುಂದೂಡಬೇಕು ಎಂದು ಹೈಕೋರ್ಟ್‌ನಲ್ಲಿ ಕೇಳುತ್ತಿದ್ದೀರಿ! ಹೈಕೋರ್ಟ್‌ ಮಹತ್ವವನ್ನು ಕ್ಷೀಣವಾಗಿಸಬೇಡಿ. ಇಲ್ಲಿ ಅಹಂನ ವಿಚಾರವಿಲ್ಲ” ಎಂದು ಕಿಡಿಕಾರಿತು.

ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿರುವ ಆರೋಪ ಮಾಡಿದ್ದ ಮನೆಕೆಲಸದ ಮಹಿಳೆಯನ್ನು ಎಚ್‌ ಡಿ ರೇವಣ್ಣ, ಅವರ ಪತ್ನಿ ಭವಾನಿ ಸೇರಿದಂತೆ ಒಂಭತ್ತು ಆರೋಪಿಗಳು ಅಪಹರಿಸಿದ್ದಾರೆ ಎಂದು ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಅನ್ವಯ ಮೈಸೂರಿನ ಕೆ ಆರ್‌ ಪೇಟೆ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 365, 368, 504, 506, 201, 109, 120B ಜೊತೆಗೆ 34ರ ಅಡಿ 02.05.2024ರಂದು ಪ್ರಕರಣ ದಾಖಲಾಗಿದ್ದು, ಸಕ್ಷಮ ನ್ಯಾಯಾಲಯವು 17.08.2024ರಂದು ಸಂಜ್ಞೇ ಪರಿಗಣಿಸಿತ್ತು.

Kannada Bar & Bench
kannada.barandbench.com