ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಆಯೋಜನೆಗೆ ಹೈಕೋರ್ಟ್‌ ಅಸ್ತು

“ಕಾವೇರಿ ಆರತಿಯು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಊಟದ ಮಳಿಗೆಗಳನ್ನು ಆರಂಭಿಸಲು ಯಾವುದೇ ಅನುಮತಿ ನೀಡುವುದಿಲ್ಲ” ಎಂಬ ಸರ್ಕಾರದ ವಾದ ಮನ್ನಿಸಿ ನ್ಯಾಯಾಲಯವು ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿತು.
ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಆಯೋಜನೆಗೆ ಹೈಕೋರ್ಟ್‌ ಅಸ್ತು
Published on

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯಲ್ಲಿ ಶುಕ್ರವಾರ ಸಂಜೆ (ಮಾರ್ಚ್‌ 21) ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ಅನುಮತಿಸಿದೆ.

ಕಾವೇರಿ ಆರತಿ ಆಯೋಜಿಸುವುದಕ್ಕಾಗಿ ಸ್ಯಾಂಕಿ ಕೆರೆಯ ಒಳಗೆ ತಾತ್ಕಾಲಿಕ ಮತ್ತು ಶಾಶ್ವತ ನಿರ್ಮಾಣ ಚಟುವಟಿಕೆಗಳನ್ನು ನಡೆಸಲಾಗುತ್ತಿರುವುದನ್ನು ಸ್ಥಗಿತಗೊಳಿಸಲು ಆದೇಶಿಸುವಂತೆ ಕೋರಿ ಬೆಂಗಳೂರಿನ ನಿವಾಸಿ ಗೀತಾ ಮಿಶ್ರಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ಇತ್ಯರ್ಥಪಡಿಸಿತು.

“ಕಾವೇರಿ ಆರತಿ ನಡೆಸುವಾಗ ಸಾರ್ವಜನಿಕರ ಓಡಾಟ ಅಥವಾ ಜನ ಸೇರುವುದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ಕೆರೆಯಲ್ಲಿ ನಡೆಸಬಾರದ ಕೃತ್ಯಗಳನ್ನು ನಡೆಸಕೂಡದು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ಮಧ್ಯಂತರ ಅರ್ಜಿಯಲ್ಲಿ ಯಾವುದೇ ಕೋರಿಕೆ ಇಲ್ಲ. ನ್ಯಾಯಾಲಯಕ್ಕೆ ಟೆಲಿಗ್ರಾಂ ಕಳುಹಿಸಿದಂತಿದೆ. ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆ ಸಲ್ಲಿಸಲಾಗಿಲ್ಲ. ಮಾಧ್ಯಮ ವರದಿಗಳು ಮತ್ತು ಕೆಲವು ಚಿತ್ರಗಳನ್ನು ಮಾತ್ರ ಕಳುಹಿಸಲಾಗಿದೆ. ಇಂಥ ಅರ್ಜಿಗಳನ್ನು ಒಪ್ಪಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಕಾವೇರಿ ಆರತಿಯು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಊಟದ ಮಳಿಗೆಗಳನ್ನು ಆರಂಭಿಸಲು ಯಾವುದೇ ಅನುಮತಿ ನೀಡುವುದಿಲ್ಲ” ಎಂಬ ಸರ್ಕಾರದ ವಾದ ಮನ್ನಿಸಿ ನ್ಯಾಯಾಲಯವು ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿತು.

“ಕೆರೆ ಸಂರಕ್ಷಣೆಯ ಬಗ್ಗೆ ಹೆಚ್ಚು ಆದ್ಯತೆ ಮತ್ತು ವ್ಯವಸ್ಥಿತ ಕೆಲಸ ಮಾಡುವುದು ಹಿಂದೆಂದಿಗಿಂತಲೂ ಅಗತ್ಯವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ “ಕಡ್ಡಾಯವಾಗಿ ಕಾನೂನಿಗೆ ಅನುಗುಣವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು. ನೀರು ಮತ್ತು ಜಲಮೂಲಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ನಡೆಸುತ್ತಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದರು.

ಬಿಡಬ್ಲ್ಯುಎಸ್‌ಎಸ್‌ಬಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಸ್ಯಾಂಕಿ ಕೆರೆಯಲ್ಲಿ 100 ವರ್ಷಗಳ ಹಿಂದಿನಿಂದಲೂ ಪೂಜೆ ನಡೆಸಲಾಗುತ್ತದೆ. ಜಲ ದಿನಾಚರಣೆಯ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ನಡೆಸಲಾಗುತ್ತದೆ” ಎಂದರು.

ಮಧ್ಯಂತರ ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಜಿ ಆರ್‌ ಮೋಹನ್‌ ಅವರು “ಕಾವೇರಿ ಆರತಿಗೆ ಆಕ್ಷೇಪವಿಲ್ಲ. ಆರತಿಯ ನೆಪದಲ್ಲಿ ಸ್ಯಾಂಕಿ ಕೆರೆಯಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಲೇಸರ್‌ ಷೋ ನಡೆಸಲು ಉದ್ದೇಶಿಸುವುದರಿಂದ ಕೆರೆಯಲ್ಲಿ ವಾಸಿಸುವ ಪಕ್ಷಗಳಿಗೆ ಸಮಸ್ಯೆಯಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ನಡೆಸಬೇಕು” ಎಂದರು.

Kannada Bar & Bench
kannada.barandbench.com