ಗೂಳಿ ಪಳಗಿಸುವ ಹೋರಿ ಹಬ್ಬ ಆಚರಣೆಗೆ ಅನುಮತಿಸಿದ ಹೈಕೋರ್ಟ್‌

“ಉತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು” ಎಂದು ಪೊಲೀಸರು ಮತ್ತು ಹಾವೇರಿ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ ನ್ಯಾಯಾಲಯ.
High Court of Karnataka
High Court of Karnataka
Published on

ಗೂಳಿ ಪಳಗಿಸುವ ಹೋರಿ ಹಬ್ಬ ಆಚರಣೆಗೆ ಅನುಮತಿ ನೀಡಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು “ಜಲ್ಲಿಕಟ್ಟು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು” ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಹಾವೇರಿ ಜಿಲ್ಲೆಯ ಇಜಾರಿ ಲಕ್ಮಾಪುರದ, ಅಖಿಲ ಕರ್ನಾಟಕ ರೈತರ ಜಾನಪದ ಕ್ರೀಡೆಯ ಹೋರಿ ಹಬ್ಬ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ದ್ಯಾಮಣ್ಣ ಬಂಡಿವಡ್ಡರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಲೇವಾರಿ ಮಾಡಿದೆ.

“ಉತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು” ಎಂದು ಪೊಲೀಸರು ಮತ್ತು ಹಾವೇರಿ ಜಿಲ್ಲಾಡಳಿತಕ್ಕೆ ನ್ಯಾಯಾಲಯವು ನಿರ್ದೇಶಿಸಿದೆ.

“ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ–1960ರ ನಿಬಂಧನೆಗಳ ಅನುಸಾರ ಪ್ರಾಣಿಗಳ ಭಾಗವಹಿಸುವಿಕೆ ಅಥವಾ ಬಳಕೆಯ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತವೆ. ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು” ಎಂದು ಅರ್ಜಿದಾರರಿಗೆ ಸ್ಪಷ್ಟಪಡಿಸಿದೆ.

ಹೋರಿ ಹಬ್ಬ ಅಥವಾ ಹಟ್ಟಿ ಹಬ್ಬವು ಕರ್ನಾಟಕದ ಮುಖ್ಯವಾಗಿ ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ದೀಪಾವಳಿ ಸಮಯದಲ್ಲಿ ನಡೆಯುವ ಸಾಂಪ್ರದಾಯಿಕ ಸಾಹಸಮಯ ಗ್ರಾಮೀಣ ಕ್ರೀಡೆ ಎನಿಸಿದೆ.  ಜಲ್ಲಿಕಟ್ಟು ಕ್ರೀಡೆಗೆ ಹೋಲುವ ಈ ಹಬ್ಬದಲ್ಲಿ ಅಲಂಕರಿಸಿದ ಗೂಳಿಗಳನ್ನು ಜನಸಂದಣಿಯ ಮಧ್ಯೆ ಓಡಿಸಲಾಗುತ್ತದೆ. ಗೂಳಿಗಳ ಬೆನ್ನಿಗೆ ಕಟ್ಟಿದ ಬಹುಮಾನಗಳನ್ನು (ಕೊಪ್ಪೆ) ಕಿತ್ತುಕೊಳ್ಳಲು ಯುವಕರು ಪ್ರಯತ್ನಿಸುತ್ತಾರೆ.

Kannada Bar & Bench
kannada.barandbench.com