ರಾಜ್ಯದಲ್ಲಿ ಇನ್ನೂ ಮಾನ್ಯತೆ ಪಡೆಯದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್‌ಪಿ) ಪದಾಧಿಕಾರಿಗಳು ಹಾಗೂ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಜೆ ಪಿ ರಘುನಂದನ ಅವರಿಗೆ ಚುನಾವಣೆಯ ಪ್ರಚಾರದಲ್ಲಿ ವಾಹನ ಮತ್ತು ಧ್ವನಿವರ್ಧಕ ಬಳಸಲು ಅನುಮತಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿ, ಕರ್ನಾಟಕ ಹೈಕೋರ್ಟ್ ಈಚೆಗೆ ಮಧ್ಯಂತರ ಆದೇಶ ಮಾಡಿದೆ.
ವಾಹನ ಮತ್ತು ಧ್ವನಿವರ್ಧಕ ಬಳಸಲು ಅನುಮತಿ ನಿರಾಕರಿಸಿದ ಗದಗ ಮತ್ತು ವಿಜಯನಗರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ ಎನ್ ದೀಪಕ್ ಮತ್ತು ಅಭ್ಯರ್ಥಿ ಜೆ ಪಿ ರಘುನಂದನ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಚುನಾವಣಾ ಪ್ರಚಾರ ನಡೆಸಲು ಮಾನ್ಯತೆ ಹೊಂದಿದ ಪಕ್ಷಗಳಿಗೆ ನೀಡುವ ರೀತಿಯಲ್ಲಿಯೇ ಗದಗ ಮತ್ತು ಹೊಸಪೇಟೆಯ ಚುನಾವಣಾಧಿಕಾರಿಗಳು ಅರ್ಜಿದಾರ ಪಕ್ಷದ ಪದಾಧಿಕಾರಿಗಳಿಗೆ ವಾಹನ ಮತ್ತು ಧ್ವನಿವರ್ಧಕ ಬಳಕೆಗೆ ಅನುಮತಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಆಕ್ಷೇಪಣೆ ಸಲ್ಲಿಸಬೇಕು” ಎಂದು ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ವಿವರಿಸಿದೆ.
“ಸನ್ನಿವೇಶ ಸೃಷ್ಟಿಯಾದರೆ ಪ್ರಕರಣದ ವಿಚಾರಣೆಗಾಗಿ ರಜಾಕಾಲೀನ ಪೀಠದ ಮುಂದೆ ಅರ್ಜಿದಾರರು ಮನವಿ ಸಲ್ಲಿಸಬಹುದು” ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಬಿ ಎನ್ ಹರೀಶ್ ಅವರು “ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 77 ಚುನಾವಣೆಯ ಬಳಿಕ ಚುನಾವಣಾ ವೆಚ್ಚ ಅಥವಾ ಆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಅಭ್ಯರ್ಥಿಗೆ ಸಂಬಂಧಿಸಿದೆ. ಸೆಕ್ಷನ್ 52 ಚುನಾವಣೆಗೂ ಮುನ್ನ ಮಾನ್ಯತೆ ಹೊಂದಿದ ಪಕ್ಷದ ಅಭ್ಯರ್ಥಿಗೆ ಸಂಬಂಧಿಸಿದೆ. ಈ ಎರಡೂ ನಿಬಂಧನೆಗಳು ಅಥವಾ ಬೇರಾವುದೇ ನಿಬಂಧನೆಯು ರಾಜಕೀಯ ಪಕ್ಷ ಖಾಸಗಿ ವಾಹನ ಮತ್ತು ಧ್ವನಿವರ್ಧಕ ಬಳಕೆ ನಿರ್ಬಂಧಿಸುವುದಿಲ್ಲ” ಎಂದು ವಾದಿಸಿದ್ದರು.