ಎರಡು ದಶಕ ಸಹ ಜೀವನ ನಡೆಸಿದ್ದ ಸಂಗಾತಿಯ ವಿರುದ್ಧ ಅತ್ಯಾಚಾರ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಬೆಂಗಳೂರಿಗೆ ಬಂದಿದ್ದ ಮಹಿಳೆಯು ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಈ ವೇಳೆ ಪರಿಚಯವಾದ ಅರ್ಜಿದಾರನೊಡನೆ ಸಲುಗೆ ಬೆಳೆದಿತ್ತು. ಮದುವೆಯಾಗುವ ಭರವಸೆ ದೊರೆತ ಹಿನ್ನೆಲೆಯಲ್ಲಿ ಮಹಿಳೆಯು ಅರ್ಜಿದಾರನೊಂದಿಗೆ ವಾಸಿಸಲು ತೊಡಗಿದ್ದರು.
Karnataka High Court, Couple
Karnataka High Court, Couple
Published on

ಸುಮಾರು 22 ವರ್ಷ ಸಹ ಜೀವನ ನಡೆಸಿದ ನಂತರ ಪ್ರಿಯತಮನ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಅತ್ಯಾಚಾರ, ಜೀವ ಬೆದರಿಕೆ ಮತ್ತು ವಂಚನೆ ಸೇರಿದಂತೆ ಇನ್ನಿತರ ಆರೋಪಗಳ ಸಂಬಂಧ ತನ್ನ ವಿರುದ್ಧ ಮಾಜಿ ಗೆಳತಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ನೆಲಮಂಗಲದ ನಿವಾಸಿ ಸತೀಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಆದೇಶ ಪ್ರತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ನೆಲೆಸಿರುವ ದೂರುದಾರೆಯು ತಮ್ಮ ಮೊದಲ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ. ಮಾರಣಾಂತಿಕ ರೋಗದಿಂದ ಪತಿ ಬಳಲುತ್ತಿದ್ದ ಹಿನ್ನೆಲೆಯಲ್ಲಿ 2004ರಲ್ಲಿ ಬೆಂಗಳೂರಿಗೆ ಬಂದಿದ್ದ ದೂರುದಾರೆಯು ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು.

ಈ ವೇಳೆ ಪರಿಚಯವಾದ ಸತೀಶ್‌ ಜೊತೆಗೆ ಸಲುಗೆ ಬೆಳೆದಿತ್ತು. ಮದುವೆಯಾಗಿ ಉತ್ತಮ ಜೀವನ ನೀಡುವುದಾಗಿ ಸತೀಶ್‌ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಆತನೊಂದಿಗೆ ಆತನ ಮನೆಯಲ್ಲಿ ತಾನು ವಾಸಿಸಲು ಆರಂಭಿಸಿದ್ದಾಗಿ ದೂರುದಾರೆಯು ತಿಳಿಸಿದ್ದಾರೆ. ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿತ್ತು.

ನಂತರ ಸತೀಶ್‌ ತನ್ನ ಹುಟ್ಟೂರಿಗೆ ಹೋಗಿ ಹಿರಿಯರು ನಿಶ್ವಯಿಸಿದ್ದ ಹುಡುಗಿಯನ್ನು ವಿವಾಹವಾಗಿದ್ದನು. ಈ ವಿಚಾರ ತಿಳಿದ ದೂರುದಾರೆ ತನ್ನನ್ನು ಮದುವೆಯಾಗುವಂತೆ ಸತೀಶ್‌ನನ್ನು ಬಲವಂತ ಮಾಡಿದ್ದರು. ಅದಕ್ಕೆ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ ಆರೋಪ ಸತೀಶ್‌ ಮೇಲಿತ್ತು.  ಪರಿಣಾಮ ಸತೀಶ್‌ ವಿರುದ್ಧ ಅತ್ಯಾಚಾರ, ವಂಚನೆ, ಜೀವ ಬೆದರಿಕೆ, ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು ಸೇರಿದಂತೆ ಇನ್ನಿತರ ಆರೋಪ ಹೊರಿಸಿ ದೂರುದಾರೆಯು ದೂರು ದಾಖಲಿಸಿದ್ದರು.

ತನಿಖೆ ನಡೆಸಿದ್ದ ಬ್ಯಾಡರಹಳ್ಳಿ ಠಾಣಾ ಪೊಲೀಸರು, ಸತೀಶ್‌ ವಿರುದ್ಧ ಅಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸತೀಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com