ಗೋಕರ್ಣ ಮಹಾಬಲೇಶ್ವರ ದೇಗುಲ ಮೇಲ್ವಿಚಾರಣಾ ಸಮಿತಿ ಸದಸ್ಯರನ್ನು ಬದಲಿಸಿದ್ದ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್

ವೇದಮೂರ್ತಿ ದತ್ತಾತ್ರೇಯ, ಮಹಾಬಲ ಉಪಾಧ್ಯ, ಮುರಳೀಧರ್ ಪ್ರಭು, ವಿದ್ವಾನ್ ಪರಮೇಶ್ವರ್ ಅವರನ್ನು ಬದಲಿಸಿ ವಿದ್ವಾನ್ ಗಣಪತಿ, ಸುಬ್ರಮಣ್ಯ, ಪರಮೇಶ್ವರ್ ಸುಬ್ರಮಣ್ಯ ಪ್ರಸಾದ್ ರಮಣಿ ಮತ್ತು ಮಹೇಶ್ ಗಣೇಶ್ ಹಿರೇಗಂಗೆ ಅವರನ್ನು ಸರ್ಕಾರ ನೇಮಿಸಿತ್ತು.
Raghaveshwara Bharathi Swamiji and Karnataka HC
Raghaveshwara Bharathi Swamiji and Karnataka HC

ರಾಮಚಂದ್ರಾಪುರ ಮಠದ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಸ್ಥಾನದ ಚಟುವಟಿಕೆಗಳ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯ ನಾಲ್ವರು ಸದಸ್ಯರನ್ನು ತೆಗೆದು ಹಾಕಿ ಕಾಂಗ್ರೆಸ್‌ ಸರ್ಕಾರ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ. ಆದರೆ, ಈ ಸಂಬಂಧ ಸೂಕ್ತ ಆದೇಶವನ್ನು ಸುಪ್ರೀಂ ಕೋರ್ಟ್‌ನಿಂದ ಪಡೆಯುವುದಕ್ಕೆ ಹಾಲಿ ಆದೇಶ ಅಡ್ಡಿಯಾಗದು ಎಂದು ಸ್ಪಷ್ಟಪಡಿಸಿದೆ.

ಮಠದ ಮೇಲ್ವಿಚಾರಣಾ ಸಮಿತಿಯ ನಾಲ್ವರು ಸದಸ್ಯರನ್ನು ಬದಲಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 2023ರ ಜುಲೈ 12ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೀರಾಮಚಂದ್ರಾಪುರ ಮಠ, ಅದರ ಪೀಠಾಧಿಪತಿ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹಾಗೂ ವೇದಮೂರ್ತಿ ದತ್ತಾತ್ರೇಯ, ಮಹಾಬಲ ಉಪಾಧ್ಯ, ಮುರಳೀಧರ್‌ ಪ್ರಭು, ವಿದ್ವಾನ್‌ ಪರಮೇಶ್ವರ್‌ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ಸಾಂವಿಧಾನಿಕ ನ್ಯಾಯಾಲಯಗಳು ಸದಾ ಕಾಲ ಕಾರ್ಯಪ್ರವೃತ್ತವಾಗಿರುತ್ತವೆ. ಸರ್ಕಾರ ಬದಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶವನ್ನು ಧಿಕ್ಕರಿಸಲಾಗದು. ಸರ್ಕಾರ ಬದಲಾದ ಮಾತ್ರಕ್ಕೆ ಹಿಂದಿನ ಸರ್ಕಾರ ಮಾಡಿದ ಎಲ್ಲವನ್ನೂ ರದ್ದುಪಡಿಲಾಗದು. ಇದು ಸರ್ಕಾರದ ಕಾರ್ಯ/ನಿರ್ಧಾರ ಮುಂದುವರಿಕೆ ತತ್ವಕ್ಕೆ ವಿರುದ್ಧವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಮುಂದುವರೆದು, "ಹಿಂದಿನ ಸರ್ಕಾರವು ಶಾಸನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರೆ ಅದನ್ನು ಬದಲಿಸಬಹುದು. ರಾಜ್ಯ ಸರ್ಕಾರವು 2023ರ ಜುಲೈ 12ರಂದು ಹೊರಡಿಸಿರುವ ತಿದ್ದುಪಡಿಯಲ್ಲಿ ಲೋಪ ಇದೆ ಎಂದು ನ್ಯಾಯಾಲಯಕ್ಕೆ ಅರಿವಾಗಿದೆ. ರಾಜ್ಯ ಸರ್ಕಾರದ ನಡೆ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸುವ ಕ್ರಮವಾಗಿರುವುದರಿಂದ ಅದನ್ನು ರದ್ದುಪಡಿಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಮಚಂದ್ರಪುರ ಮಠಕ್ಕೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ ಅವರ ನೇತೃತ್ವದಲ್ಲಿ ವೇದಮೂರ್ತಿ ದತ್ತಾತ್ರೇಯ, ಮಹಾಬಲ ಉಪಾಧ್ಯ, ಮುರಳೀಧರ್‌ ಪ್ರಭು, ವಿದ್ವಾನ್‌ ಪರಮೇಶ್ವರ್‌ ಅವರನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿಯನ್ನು 2021ರ ಮೇ 4ರಂದು ಹಿಂದಿನ ಬಿಜೆಪಿ ಸರ್ಕಾರ ರಚಿಸಿತ್ತು. ಈ ನೇಮಕಾತಿಯನ್ನು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು ಬದಲಿಸಿ, ನಾಲ್ವರು ಸದಸ್ಯರ ಬದಲಿಗೆ ವಿದ್ವಾನ್‌ ಗಣಪತಿ, ವಿದ್ವಾನ್‌ ಸುಬ್ರಮಣ್ಯ, ಪರಮೇಶ್ವರ್‌ ಸುಬ್ರಮಣ್ಯ ಪ್ರಸಾದ್‌ ರಮಣಿ ಮತ್ತು ಮಹೇಶ್‌ ಗಣೇಶ್‌ ಹಿರೇಗಂಗೆ ಅವರನ್ನು ನೇಮಕ ಮಾಡಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಅರ್ಜಿದಾರರ ಪರ ವಕೀಲ ಪಿ ಎನ್‌ ಮನಮೋಹನ್‌ ಅವರು “ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸಮಿತಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಅನುಮತಿ ಪಡೆಯದೇ ಸರ್ಕಾರವು ಸದಸ್ಯರನ್ನು ತೆಗೆಯಲಾಗದು” ಎಂದು ವಾದಿಸಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಎಜಿ ಶಶಿಕಿರಣ್‌ ಶೆಟ್ಟಿ ಅವರು “ಸಮಿತಿಯಲ್ಲಿ ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ನಿರ್ಬಂಧಿಸಲಾಗಿಲ್ಲ. ರಾಜ್ಯ ಸರ್ಕಾರವು ಸದಸ್ಯರನ್ನು ಬದಲಿಸುವ ಅಧಿಕಾರ ಹೊಂದಿದೆ. ಸರ್ಕಾರದ ಆದೇಶದಿಂದ ಬಾದಿತರಾಗಿದ್ದರೆ ರಾಮಚಂದ್ರಾಪುರ ಮಠವು ಸುಪ್ರೀಂ ಕೋರ್ಟ್‌ಗೆ ಹೋಗಬಹುದು” ಎಂದಿದ್ದರು.

ಪ್ರಕರಣದ ಹಿನ್ನೆಲೆ: ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯಿದೆ ಸೆಕ್ಷನ್‌ 23ರ ಅಡಿ ಹಲವು ದೇವಸ್ಥಾನಗಳನ್ನು ಸರ್ಕಾರವು ತನ್ನ ವಶಕ್ಕೆ ಪಡೆದಿತ್ತು. ಈ ಪೈಕಿ ರಾಮಚಂದ್ರಾಪುರ ಮಠವು ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ನೋಟಿಫೈ ಮಾಡಿರುವ ದೇವಸ್ಥಾನದಿಂದ ಕೈಬಿಡುವಂತೆ 2003ರ ಏಪ್ರಿಲ್‌ 30ರಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಮಠವು ದೇವಸ್ಥಾನದ ಜೊತೆ ಮಿಳಿತವಾಗಿದೆ ಎಂದಿತ್ತು. 2008ರ ಆಗಸ್ಟ್‌ 12ರಂದು ಕೆಲವು ದೇವಾಲಯಗಳನ್ನು ಡಿನೋಟಿಫೈ ಮಾಡಿದ್ದ ಆದೇಶ ಪ್ರಶ್ನಿಸಲಾಗಿತ್ತು.

ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಾಲಯವು 2018ರ ಆಗಸ್ಟ್‌ 10ರಂದು ವಜಾ ಮಾಡಿತ್ತು. ಅಲ್ಲದೇ, ಮೇಲ್ವಿಚಾರಣಾ ಸಮಿತಿಯನ್ನು ರಚಿಸಿತ್ತು. ಈ ಆದೇಶಕ್ಕೆ ಒಂದು ತಿಂಗಳ ಕಾಲ ತಡೆ ನೀಡುವಂತೆ ರಾಮಚಂದ್ರಾಪುರ ಮಠವು ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮನವಿ ಮಾಡಿತ್ತು. ಇದನ್ನು ಹೈಕೋರ್ಟ್‌ ಪುರಸ್ಕರಿಸಿತ್ತು. ಈ ಮಧ್ಯೆ, ಮಠವು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಸಿವಿಲ್‌ ಮೇಲ್ಮನವಿಯನ್ನಾಗಿ ಪರಿವರ್ತಿಸಿ, ತಡೆಯಾಜ್ಞೆ ಮುಂದುವರಿಸಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠವು ಮೇಲ್ವಿಚಾರಣೆ ನಡೆಸಲು ರಚಿಸಿದ್ದ ಸಮಿತಿಯಲ್ಲಿ ಮಾರ್ಪಾಡು ಮಾಡಿದ್ದ ಸುಪ್ರೀಂ ಕೋರ್ಟ್‌, ಸಮಿತಿ ಕಾರ್ಯನಿರ್ವಹಿಸಲು ಅನುಮತಿಸಿತ್ತು.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಸರ್ಕಾರವು 2021ರ ಮೇ 4ರಂದು ಸಮಿತಿ ರಚಿಸಿತ್ತು. ಈ ಮಧ್ಯೆ, ಸರ್ಕಾರ ಬದಲಾಗಿ 2023ರ ಮೇ 22ರಂದು ರಾಜ್ಯ ಸರ್ಕಾರವು ಸಮಿತಿಯ ಎಲ್ಲಾ ಸದಸ್ಯರನ್ನು ತೆಗೆದು, ಹೊಸ ಸದಸ್ಯರನ್ನು ನೇಮಿಸಿತ್ತು.

Attachment
PDF
Ramachandrapura Math and others Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com