ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ನಿಯಮಗಳಿಗೆ ವಿರುದ್ಧವಾಗಿ 2023-24ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕರೆದಿದ್ದ ಟೆಂಡರ್ ಅನ್ನು ಕರ್ನಾಟಕ ಹೈಕೊರ್ಟ್ ಈಚೆಗೆ ರದ್ದುಪಡಿಸಿ ಆದೇಶಿಸಿದೆ.
ಟೆಂಡರ್‌ನಲ್ಲಿ ಕೆಲವು ಷರತ್ತುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಮಾರುತಿ ಬೋರ್‌ವೆಲ್ ಆಪರೇಟರ್ ಚಿನ್ನಪ್ಪರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಟಿಪಿಪಿ ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಸರ್ಕಾರವೇ ಹೊರಡಿಸಿರುವ ನಿಯಮ 27ರಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗುವವರ ಸೇವಾ ಅನುಭವ ಉಲ್ಲೇಖಿಸಬೇಕು ಎಂಬ ನಿಯಮವಿದೆ. ಆದರೆ, ಸೇವಾ ಅನುಭವವನ್ನು ಟೆಂಡರ್‌ನಲ್ಲಿ ತೆಗೆದು ಹಾಕಿರುವುದು ನಿಯಮಬಾಹಿರ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.
ನಿಗಮದ ಕ್ರಮ ಟೆಂಡರ್ ದಾಖಲೆಗಳ ನಿಯಮಗಳಿಗೆ ವಿರುದ್ಧವಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಸೇವಾನುಭವವನ್ನು ತೆಗೆದುಹಾಕಿರುವುದರಿಂದ ಗುತ್ತಿಗೆ ಪಡೆಯುವವರ ಅನುಭವ ಕಸಿದುಕೊಂಡಂತಾಗಲಿದೆ. ಜೊತೆಗೆ ಯೋಜನೆಯನ್ನು ಪಾತಾಳಕ್ಕೆ ತಳ್ಳುವ ಸಾಧ್ಯತೆಯಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಆದ್ದರಿಂದ, ಪ್ರಾರಂಭಿಕ ಹಂತದಿಂದ ಇಡೀ ಪ್ರಕ್ರಿಯೆಯನ್ನು ಕಾನೂನಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಮರಪರಿಶೀಲನೆ ನಡೆಸಬೇಕು ಎಂದು ತಿಳಿಸಿರುವ ಪೀಠವು ಟೆಂಡರ್ದಾರರೊಂದಿಗೆ ನಿಗಮ ನಡೆಸಿದ್ದ ಪತ್ರ ವ್ಯವಹಾರವನ್ನು ರದ್ದುಪಡಿಸಿ ಆದೇಶಿಸಿದೆ. ಆದಷ್ಟು ಶೀಘ್ರದಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ನಿಯಮಗಳ ಪ್ರಕಾರ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಹಿಂದುಳಿದ ವರ್ಗಗಳ ಇಲಾಖೆಯ ಅಧೀನದಲ್ಲಿ ಕೊಳವೆ ಬಾವಿ ಕೊರೆಯುವ ವ್ಯವಹಾರವನ್ನು ನಡೆಸುತ್ತಿದ್ದರು. ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿ ಕೊರೆಯುವ ಸಂಬಂಧ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಬಿಡ್ ಸಲ್ಲಿಸುವ ಸಂಸ್ಥೆಗಳಿಗೆ ಷರತ್ತುಗಳನ್ನು ವಿಧಿಸಿದ್ದು, ಸೇವಾ ಅನುಭವದ ಕಲಂನ್ನು ತೆಗೆದುಹಾಕಲಾಗಿತ್ತು. ಈ ಕ್ರಮ 2005ರ ಟೆಂಡರ್ ಡಾಕ್ಯುಮೆಂಟ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.