ಇಸ್ರೊ ಕಾರ್ಯಚಟುವಟಿಕೆ ವಿಸ್ತರಣೆ: ನಿಯಮಾವಳಿ ಉಲ್ಲಂಘಿಸಿದ್ದ ಭೂಸ್ವಾಧೀನ ರದ್ದುಪಡಿಸಿದ ಹೈಕೋರ್ಟ್‌

ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಒಂದು ವರ್ಷದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿಲ್ಲ. ಈ ಕುರಿತು ವಿಚಾರಣೆಯನ್ನೂ ಮಾಡಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ ಎಂದ ಹೈಕೋರ್ಟ್‌.
ISRO & Karnataka HC
ISRO & Karnataka HC
Published on

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಅಬ್ಬಚಿಕ್ಕನಹಳ್ಳಿ ಮತ್ತು ಲಾಲಗೊಂಡನಹಳ್ಳಿ ಗ್ರಾಮಗಳಲ್ಲಿನ 82 ಎಕರೆ ಜಮೀನಿನ ಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಪ್ರಾಥಮಿಕ ಅಧಿಸೂಚನೆಯಾದ ಒಂದು ವರ್ಷದಲ್ಲಿ ಅಂತಿಮ ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡಬೇಕು ಎಂದು ಕೋರಿ ದೇವನಹಳ್ಳಿ, ಬೆಂಗಳೂರು ಮತ್ತು ಹೈದರಾಬಾದ್‌ ಮೂಲದ ಭೂಮಾಲೀಕರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌ ಆರ್ ಕೃಷ್ಣಕುಮಾರ್ ಅವರ ಪೀಠ ಪುರಸ್ಕರಿಸಿದೆ.

Justice S R Krishna Kumar
Justice S R Krishna Kumar

ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಒಂದು ವರ್ಷದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿಲ್ಲ. ಜೊತೆಗೆ, ಈ ಕುರಿತು ವಿಚಾರಣೆಯನ್ನೂ ಮಾಡಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಸ್ವಾಧೀನ ಪ್ರಕ್ರಿಯೆ ನಡೆಸಿದ್ದು, ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ನ್ಯಾಯಾಲಯವು ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಲೋಪವನ್ನು ಎತ್ತಿ ತೋರಿತು.

ರಾಜ್ಯ ಸರ್ಕಾರ ಮತ್ತು ಇಸ್ರೊ 2013ರ ಜುಲೈ 19ರಂದು ಪರಿಹಾರ ಘೋಷಣೆ ಮಾಡಿವೆ ಎಂದು ಹೇಳಲಾಗಿದೆ. ಬಳಿಕ ದಿನಾಂಕವನ್ನು ಕೈಯಿಂದ ಬರೆಯಲಾಗಿದ್ದು, ಜೂನ್‌ 10 ಎಂಬುದಾಗಿ ತಿದ್ದಿದ್ದಾರೆ. ಇದನ್ನು ಸ್ಪಷ್ಟಪಡಿಸಲು ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಜೊತೆಗೆ, ಒಂದು ವರ್ಷದ ಬಳಿಕ ಭೂ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ನೋಟಿಸ್‌ಗಳನ್ನು ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಅಧಿಸೂಚನೆ ರದ್ದುಪಡಿಸುತ್ತಿರುವುದಾಗಿ ಪೀಠ ತಿಳಿಸಿದೆ.

ಅರ್ಜಿದಾರರ ಪರ ವಕೀಲ ಎಲ್‌ ಎಂ ಚಿದಾನಂದಯ್ಯ ಅವರು “ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಒಂದು ವರ್ಷದ ಅಂತ್ಯದ ವೇಳೆಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಭೂ ಸ್ವಾಧೀನ ಕಾಯಿದೆ ಸೆಕ್ಷನ್‌ 6(2)ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಸೆಕ್ಷನ್‌ 5ಎ ಅಡಿಯಲ್ಲಿನ ಅಗತ್ಯವಿರುವ ಕುರಿತಂತೆ ವಿಚಾರಣೆ ನಡೆಸಿಲ್ಲ. ಹೀಗಾಗಿ, ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡಬೇಕು” ಎಂದು ಕೋರಿದ್ದರು.

ಕೇಂದ್ರ ಸರ್ಕಾರದ ವಕೀಲ ಎಂ ಉನ್ನಿಕೃಷ್ಣನ್‌ ಮತ್ತು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಇಸ್ರೋ ಪ್ರತ್ಯೇಕವಾಗಿ ಆಕ್ಷೇಪ ಸಲ್ಲಿಸಿದ್ದು, ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಎಲ್ಲ ಅಂಶಗಳನ್ನು ಕಾನೂನು ಪ್ರಕಾರವಾಗಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಬೇಕು” ಎಂದು ಮನವಿ ಮಾಡಿದ್ದರು.

ಪ್ರಕರಣದ ವಿವರ: 2010ರ ಜನವರಿ 28ರಂದು ಈ ಜಮೀನುಗಳ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹಾಗೂ 2011ರ ಮೇ 30ರಂದು ಅಂದರೆ ಒಂದು ವರ್ಷದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 2013ರ ಜುಲೈ 19ರಂದು ಭೂ ಮಾಲೀಕರಿಗೆ ಪರಿಹಾರವನ್ನೂ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಭೂ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Attachment
PDF
K Madhukar Shetty Vs State of Karnataka
Preview
Kannada Bar & Bench
kannada.barandbench.com