
ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಎಸ್ ಬಸವರಾಜು ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದ್ದ ಭಾರತೀಯ ವಕೀಲರ ಪರಿಷತ್ ನಿರ್ಣಯವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ.
“ದೂರುದಾರ ವಕೀಲ ಸೂರ್ಯ ಮುಕುಂದರಾಜ್ ಅವರು ಸಲ್ಲಿಸಿರುವ ಮರುಪರಿಶೀಲನಾ ಅರ್ಜಿ ಆಧರಿಸಿ ಬಿಸಿಐ ಆಕ್ಷೇಪಿತ ಆದೇಶ ಮಾಡಿದೆ. ಸೂರ್ಯ ಅವರು ಬಿಸಿಐ ಮತ್ತು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿ ಹಿಂಪಡೆಯಲು ಬಯಸಿದ್ದಾರೆ. ಹೀಗಾಗಿ, ಮರುಪರಿಶೀಲನಾ ಅರ್ಜಿ ಆಧರಿಸಿದ ಬಿಸಿಐ ಆದೇಶವು ಕುಸಿದು ಬಿದ್ದಿದೆ. ಈ ನೆಲೆಯಲ್ಲಿ ಬಸವರಾಜು ವಿರುದ್ಧ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಬಿಸಿಐ ಹೇಳಲಾಗದು” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶಿಸಿದೆ.
ಪ್ರಕ್ರಿಯೆ ಮುಂದುವರಿಸಲು ಸ್ವಯಂಪ್ರೇರಿತ ಅಧಿಕಾರವಿದೆ ಎಂಬ ಬಿಸಿಐ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. “ತನ್ನ ಮುಂದೆ ಯಾವುದೇ ದೂರು ಬಾಕಿ ಇಲ್ಲದಿದ್ದರೂ ಬಿಸಿಐ ಪ್ರಕರಣ ಮುಂದುವರಿಸುವುದಾಗಿ ಹೇಳಿರುವುದು ವಿಚಿತ್ರ ಎನಿಸುತ್ತದೆ. ಇದಕ್ಕೆ ಅನುಮತಿಸುವುದು ಕಾನೂನಿಗೆ ವಿರುದ್ಧವಾದ ಕ್ರಮ” ಎಂದು ಹೇಳಿರುವ ನ್ಯಾಯಾಲಯವು ಬಸವರಾಜು ಅರ್ಜಿ ಪುರಸ್ಕರಿಸಿದೆ.
ಮರುಪರಿಶೀಲನಾ ಅರ್ಜಿ ಆಧರಿಸಿದ ಇಡೀ ಪ್ರಕ್ರಿಯೆಯನ್ನು ಹೈಕೋರ್ಟ್‌ನಲ್ಲಿ ಬಸವರಾಜು ಅವರು ಪ್ರಶ್ನಿಸಿದ್ದು, ಆನಂತರ 3-09-2024ರ ನಿರ್ಣಯ ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ: ಬಸವರಾಜು ಅವರ ಪುತ್ರ ನಡೆಸುತ್ತಿರುವ ದಕ್ಷ ಲೀಗಲ್ ವೆಬ್‌ತಾಣದ ಚಟುವಟಿಕೆಗೆ ಆಕ್ಷೇಪಿಸಿ ವಕೀಲ ಸೂರ್ಯ ಮುಕುಂದರಾಜ್ ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) 30-11-2022ರಂದು ದೂರು ನೀಡಿದ್ದರು. ಇದಕ್ಕೆ ಬಸವರಾಜು ಆಕ್ಷೇಪಣೆ ಸಲ್ಲಿಸಿದ್ದನ್ನು ಪರಿಗಣಿಸಿ ಕೆಎಸ್‌ಬಿಸಿಯು ವಕೀಲರ ಕಾಯಿದೆ ಸೆಕ್ಷನ್ 35ರ ಅನ್ವಯ ದೂರನ್ನು ತಿರಸ್ಕರಿಸಿತ್ತು.
ಇದಾದ ವರ್ಷದ ಬಳಿಕ ಸೂರ್ಯ ಅವರು ಕಾಯಿದೆಯ ಸೆಕ್ಷನ್ 48ಎ ಅಡಿ ಬಿಸಿಐಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ತಡವಾಗಿ ದೂರು ದಾಖಲಿಸಿರುವುದಕ್ಕೆ ವಿವರಣೆಯನ್ನೂ ಕೇಳದ ಬಿಸಿಐ, ಬಸವರಾಜು ಅವರ ಸನ್ನದನ್ನು ಆರು ತಿಂಗಳು ಮಧ್ಯಂತರ ಅಮಾನತು ಮಾಡಲಾಗಿದೆ ಎಂದು ನಿರ್ಣಯ ಪಾಸು ಮಾಡಿತ್ತು. ಇದನ್ನು ಪ್ರಶ್ನಿಸಿ ಬಸವರಾಜು ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, 2024ರ ಸೆಪ್ಟೆಂಬರ್ 10ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಈ ನಡುವೆ, ಕೆಎಸ್‌ಬಿಸಿಗೆ ದೂರು ನೀಡಿದ್ದ ಮತ್ತು ಬಿಸಿಐಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ ಸೂರ್ಯ ಅವರು 2025ರ ಮಾರ್ಚ್ 20ರಂದು ದೂರು ಹಿಂಪಡೆಯುವ ಬಯಕೆ ವ್ಯಕ್ತಪಡಿಸಿ ಮೆಮೊ ಸಲ್ಲಿಸಿದ್ದರು. ಆದರೆ, ಬಿಸಿಐಯು ಸೂರ್ಯ ಸಲ್ಲಿಸಿರುವ ಮೆಮೊ ತಮಗೆ ತಲುಪಿಲ್ಲ. ಹೀಗಾಗಿ, ಪ್ರಕ್ರಿಯೆ ಮುಂದುವರಿಸಲು ಅನುಮತಿಸಬೇಕು ಎಂದು ಕೋರಿತ್ತು.
ಸೂರ್ಯ ಪರ ವಕೀಲರು ಪ್ರಕರಣ ಹಿಂಪಡೆಯುವ ಸಂಬಂಧ ಹೈಕೋರ್ಟ್‌ಗೂ ಮೆಮೊ ಸಲ್ಲಿಸಿದ್ದಾರೆ ಎಂಬುದನ್ನು ಪರಿಗಣಿಸಿ, ಬಸವರಾಜು ಅವರ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿತು. ಬಸವರಾಜು ಪರವಾಗಿ ಹಿರಿಯ ವಕೀಲ ಮೂರ್ತಿ ಡಿ ನಾಯಕ್ ವಾದಿಸಿದರು.