ಪ್ರಚಾರದಲ್ಲಿ ಮಕ್ಕಳ ಬಳಕೆ ಆರೋಪ: ಜೆಡಿಎಸ್‌ ಶಾಸಕಿ ಶಾರದಾ ಪೂರ್ಯ ನಾಯಕ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಅದನ್ನು ಆಧರಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲಾಗಿದೆ.
Sharada Puryanaik & Karnataka HC
Sharada Puryanaik & Karnataka HC
Published on

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡಿರುವ ಆರೋಪದ ಮೇಲೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕಿ ಶಾರದಾ ಪೂರ್ವ ನಾಯಕ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.

ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಅದನ್ನು ಆಧರಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ಕೋರಿ ಶಾರದಾ ಪೂರ್ಯ ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಾದ ಆಲಿಸಿದ ಪೀಠವು “ಪೊಲೀಸರು ಮೊದಲು ಪ್ರಕರಣವನ್ನು ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯಿದೆ ಅಡಿ ದಾಖಲಿಸಿಕೊಂಡು, ನಂತರ ಬಾಲ ನ್ಯಾಯ ಕಾಯಿದೆ ಅಡಿ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ಚುನಾವಣಾ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಂಡಿಲ್ಲ. ಪ್ರಚಾರ ಸಭೆ ನಡೆಯುವ ಸ್ಥಳದ ಹತ್ತಿರದಲ್ಲೇ ಶಾಲೆ ಇತ್ತು. ಅದೇ ಸಮಯದಲ್ಲಿ ಶಾಲೆ ಬಿಟ್ಟಿದ್ದರಿಂದ ಮನೆಗೆ ಹೋಗುವ ಮಕ್ಕಳು ಚುನಾವಣಾ ಪ್ರಚಾರ ಸಭೆಯ ಬಳಿ ಅವರಾಗಿಯೇ ಬಂದು ನಿಂತಿದ್ದರು ಎಂಬ ಅಂಶವನ್ನು ಪರಿಗಣಿಸಿದ ಪೀಠವು ಶಾರದಾ ಪೂರ್ಯ ನಾಯಕ್ ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿತು.

2023ರ ವಿಧಾನಸಭೆ ಚುನಾವಣೆ ವೇಳೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಾಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಬ್ಬನಹಳ್ಳಿಯಲ್ಲಿ 2023ರ ಮೇ 2 ರಂದು ಬೆಳಿಗ್ಗೆ 11.30ಕ್ಕೆ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯ ನಾಯಕ್ ಅವರ ಚುನಾವಣಾ ಪ್ರಚಾರ ಸಭೆ ನಡೆದಿತ್ತು. ಅದರಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂದು ಚುನಾವಣಾ ಕರ್ತವ್ಯದಲ್ಲಿದ್ದ ಎಂ ಇ ಜಯಪ್ರಕಾಶ್ ಎಂಬುವರು ದೂರು ನೀಡಿದ್ದರು. ಅದನ್ನು ಆಧರಿಸಿ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Kannada Bar & Bench
kannada.barandbench.com