ಲ್ಯಾಂಬೊರ್ಗಿನಿ ಕಾರು ದಾಖಲೆ ತಿರುಚಿ, ತೆರಿಗೆ ವಂಚಿಸಿದ ಆರೋಪ: ಮಾಲೀಕನ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಹಾಯ್‌ ಕಾರ್‌ ಕೇರ್‌ ಮುಖ್ಯಸ್ಥರೂ ಆದ ಲ್ಯಾಂಬೊರ್ಗಿನಿ ಕಾರ್‌ ಮಾಲೀಕ ಜೆ ರಾಮಕೃಷ್ಣಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ.
Lamborghini
Lamborghini
Published on

ದಾಖಲೆ ತಿರುಚಿ ನೋಂದಣಿ ಮಾಡುವ ಮೂಲಕ ಸರ್ಕಾರಕ್ಕೆ ತೆರಿಗೆ ವಂಚಿಸಿದ ಆರೋಪದ ಮೇಲೆ ವಿಲಾಸಿ ಲ್ಯಾಂಬೊರ್ಗಿನಿ ಕಾರೊಂದರ ಮಾಲೀಕರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ರದ್ದುಪಡಿಸಿದೆ.

ಪ್ರಕರಣ ಸಂಬಂಧ ನಕಲಿ ಮತ್ತು ವಂಚನೆ ಆರೋಪದ ಮೇಲೆ ತಮ್ಮ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಹಾಯ್‌ ಕಾರ್‌ ಕೇರ್‌ ಮುಖ್ಯಸ್ಥರೂ ಆದ ಲ್ಯಾಂಬೊರ್ಗಿನಿ ಕಾರ್‌ ಮಾಲೀಕ ಜೆ ರಾಮಕೃಷ್ಣಯ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

"ರಾಜ್ಯ ಸರ್ಕಾರವು ಕಾನೂನಿನ ಅನ್ವಯ ಕ್ರಮಕೈಗೊಳ್ಳುವ ಸ್ವಾತಂತ್ರ್ಯವನ್ನು ಕಾಯ್ದಿರಿಸಿ, ಕೋಡಿಗೆಹಳ್ಳಿ ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಲಾಗಿದೆ. ಜಫ್ತಿ ಮಾಡಿರುವ, ಪೊಲೀಸ್‌ ಕಸ್ಟಡಿಯಲ್ಲಿರುವ ಲ್ಯಾಂಬೊರ್ಗಿನಿ ಕಾರನ್ನು ಅರ್ಜಿದಾರರಿಗೆ ಒಂದು ವಾರದಲ್ಲಿ ಮರಳಿಸಬೇಕು. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವ ಬೆಂಗಳೂರು ದಕ್ಷಿಣದ ಹಿರಿಯ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ತನಿಖೆ ನಡೆಸಬೇಕು. ಆಕ್ಷೇಪಾರ್ಹವಾದ ಕಾರಿನ ದತ್ತಾಂಶವನ್ನು ಅಳಿಸಿ ಹಾಕಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ವಿಶೇಷ ಸರ್ಕಾರಿ ಅಭಿಯೋಜಕರು ಮುಚ್ಚಳಿಕೆ ನೀಡಿದ್ದು, ಈ ಸಂಬಂಧ ಎರಡು ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಅಂತೆಯೇ ಹಿರಿಯ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ಎನ್‌ ರಂಜಿತ್‌ ವಿರುದ್ಧದ ಇಲಾಖಾ ತನಿಖೆಯ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಬೇಕು" ಎಂದು ನ್ಯಾಯಾಲಯ ಆದೇಶಿಸಿದೆ.

ಆನಂತರ ಅರ್ಜಿದಾರರ ಪರ ವಕೀಲ ವೆಂಕಟೇಶ್‌ ಅರಬಟ್ಟಿ ಅವರು “ಜಿರೊ ಎಫ್‌ಐಆರ್ ಬೆನ್ನಿಗೇ ಅರ್ಜಿದಾರರ ವಿರುದ್ಧ ಇನ್ನೊಂದು ಎಫ್‌ಐಆರ್‌ ದಾಖಲಿಸಲಾಗಿದೆ” ಎಂದರು. ಇದಕ್ಕೆ ಪೀಠವು “ಅದನ್ನು ಪ್ರಶ್ನಿಸಲಾಗಿದೆಯೇ” ಎಂದಿತು. ಅದನ್ನು ಪ್ರಶ್ನಿಸಿದರೆ “ಇದೇ ಆದೇಶ ಮಾಡಲಾಗುವುದು” ಎಂದು ಹೇಳಿತು.

ಇದರ ಬೆನ್ನಿಗೇ, ಹಿರಿಯ ಮೋಟಾರ್‌ ವಾಹನ ಇನ್‌ಸ್ಪೆಕ್ಟರ್‌ ಎನ್‌ ರಂಜಿತ್‌ ಅವರ ಪರ ವಕೀಲರು “ಇಲಾಖಾ ತನಿಖೆ ಕೈಬಿಡಬೇಕು. ಕಠಿಣ ಎಚ್ಚರಿಕೆ ನೀಡಬಹುದು. ಅಧಿಕಾರಿಗೆ ಪದೋನ್ನತಿ ಬಾಕಿ ಇದೆ. ಆದೇಶದಿಂದ ಅದಕ್ಕೆ ಹಾನಿಯಾಗುತ್ತದೆ. ಅಧಿಕಾರಿಗೆ ಎಚ್ಚರಿಕೆಯಿಂದ ನಡೆದುಕೊಳ್ಳಲು ಸೂಚಿಸಲಾಗುವುದು” ಎಂದರು.

ಇದಕ್ಕೆ ಪೀಠವು “ಇನ್ನೊಬ್ಬರ ಮನೆಗೆ ನುಗ್ಗಿ ಲ್ಯಾಂಬೊರ್ಗಿನಿ ಕಾರು ತೆಗೆದುಕೊಂಡು ಹೋಗುವ ಅಧಿಕಾರ ಎಲ್ಲಿದೆ. ಅದನ್ನು ರಂಜಿತ್‌ ಅವರು ಮಾಡಬಾರದಿತ್ತು. ರಂಜಿತ್‌ ಅವರು ಅತ್ಯುತ್ತಮ ಅಧಿಕಾರಿಯಾಗಿರಬಹುದು. ಆದರೆ, ಅವರೂ ಕಾನೂನಿನ ವ್ಯಾಪ್ತಿಯೊಳಗೆ ನಡೆಯಬೇಕು. ರಂಜಿತ್‌ ಅವರಿಗೆ ಈ ಅಧಿಕಾರ ನೀಡಿದವರು ಎಂಬುದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರ ಬಳಿ ಉತ್ತರ ಇರಲಿಲ್ಲ. ಇದು ಪುನರಾವರ್ತನೆಯಾಗಬಾರದು. ಜೋಶ್‌ ಇದೆ ಎಂದು ಕಾನೂನಿಗೆ ವಿರುದ್ಧವಾಗಿ ನಡೆಯಲಾಗದು. ಅಧಿಕಾರಿ ದೂರುದಾರರಾಗಿ ಹೇಗೆ ಇನ್ನೊಬ್ಬರ ಮನೆಗೆ ನುಗ್ಗಿ ಕಾರನ್ನು ಜಫ್ತಿ ಮಾಡುತ್ತಾರೆ! ಅದನ್ನು ಪೊಲೀಸರಿಗೆ ಬಿಡಬೇಕಿತ್ತು” ಎಂದಿತು.

ಕೊನೆಗೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಅಧಿಕಾರಿ ರಂಜಿತ್‌ ಅವರಿಗೆ ಒಂದು ಬಾರಿ ಅನುಕಂಪ ತೊರಬೇಕು” ಎಂದು ಪೀಠವನ್ನು ಕೋರಿದರು. ಇದಕ್ಕೆ ಪೀಠವು “ನೋಡೋಣ” ಎಂದಿತು.

Also Read
ಲ್ಯಾಂಬೊರ್ಗಿನಿ ಕಾರು ದಾಖಲೆ ತಿರುಚಿ, ತೆರಿಗೆ ವಂಚಿಸಿದ ಆರೋಪ: ಮಾಲೀಕರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಪ್ರಕರಣದ ಹಿನ್ನೆಲೆ: ಮೊದಲಿಗೆ ಹರ್ಷ ಇನ್ಫ್ರಾ ಕಾನ್ಸ್‌ ಪ್ರೈವೇಟ್‌ ಲಿಮಿಟೆಡ್‌ 2022ರಲ್ಲಿ ಪ್ರಕರಣದಲ್ಲಿ ಸಿಲುಕಿರುವ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿ, ನೋಂದಣಿಗಾಗಿ ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿತ್ತು. ಅದನ್ನು ಮೂರು ವರ್ಷ ಬಳಕೆ ಮಾಡಿದ ನಂತರ ಅರ್ಜಿದಾರರಿಗೆ ಮಾರಾಟ ಮಾಡಿತ್ತು. ಅರ್ಜಿದಾರರು ಕಾರು ನೋಂದಣಿಗೆ ಸಲ್ಲಿಸಿರುವ ದಾಖಲೆಗಳನ್ನು 2025ರ ಸೆಪ್ಟೆಂಬರ್‌ನಲ್ಲಿ ಪರಿಶೀಲಿಸಿದ್ದ ಕಸ್ತೂರಿ ನಗರದ ಆರ್‌ಟಿಒ ಕಚೇರಿ ಅಧಿಕಾರಿಗಳಿಗೆ, ಮೂರು ವರ್ಷಗಳ ಅವಧಿಯ ರಸ್ತೆ ತೆರಿಗೆ ಮತ್ತು ₹37 ಲಕ್ಷ ಹೆಚ್ಚು ದಂಡ ಮೊತ್ತ ತಪ್ಪಿಸಲು ವಾಹನವನ್ನು ಕಡಿಮೆ ಮೌಲ್ಯೀಕರಿಸಲಾಗಿರುವುದು ತಿಳಿದು ಬಂದಿತ್ತು. ಅಲ್ಲದೆ, ದಾಖಲೆಗಳನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಕುರಿತು ದೂರು ದಾಖಲಿಲಾಗಿದ್ದು, ಅದನ್ನು ರದ್ದುಪಡಿಸಲು ಕೋರಿ ಕಾರು ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com