ಖಾಸಗಿ ಬ್ಯಾಂಕ್ ಒಂದರ ವ್ಯವಸ್ಥಾಪಕರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅಡಿ ದಾಖಲಾಗಿದ್ದ ಪ್ರಕರಣವನ್ನು ಈಚೆಗೆ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ಇದು ದುರ್ಬಲರ ರಕ್ಷಣೆಗಾಗಿ ಇರುವ ವಿಶೇಷ ಕಾಯಿದೆ ದುರುಪಯೋಗದ ಮತ್ತೊಂದು ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣ ರದ್ದು ಕೋರಿ ಬೆಂಗಳೂರಿನ ಗಿರಿನಗರದ ಕೆ ಎಸ್ ವಿಶ್ವಕಿರಣ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಮಾನ್ಯ ಮಾಡಿದೆ.
ಪ್ರಕರಣದಲ್ಲಿ ಅರ್ಜಿದಾರರು ಸಾರ್ವಜನಿಕರ ಸಮ್ಮುಖದಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಹೇಳಲು ಯಾವುದೇ ಸಾಕ್ಷ್ಯವಿಲ್ಲ. ಆರೋಪಗಳಲ್ಲೂ ಅದು ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಇದು ಸಮಾಜದ ದುರ್ಬಲ ವರ್ಗದವರ ರಕ್ಷಣೆಗಾಗಿ ರೂಪಿಸಿರುವ ವಿಶೇಷ ಕಾನೂನಿನ ದುರ್ಬಳಕೆಯಾಗಿದೆ. ಆದ್ದರಿಂದ, ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ.
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದರೆ, ಆರೋಪಿ ಹೇಗೆ ಕೃತ್ಯ ಎಸಗಿದ್ದಾರೆ ಎಂಬುದನ್ನು ತೋರಿಸುವ ಯಾವುದೇ ಅಂಶಗಳಿಲ್ಲ. ದೂರುದಾರ ರಾಮಯ್ಯ ಎಂಬುವರನ್ನು ಪರಿಶಿಷ್ಟ ಜಾತಿಯ ಹೆಸರಿನಲ್ಲಿ ನಿಂದಿಸಿದ್ದಲ್ಲದೆ, ಆಂಜಿನಮ್ಮ ಎಂಬ ಮಹಿಳೆಯನ್ನು ಅಶ್ಲೀಲ ಪದಗಳಿಂದ ನಿಂದಿಸಿ, ಆಕೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ, ಅರ್ಜಿದಾರರ ವಿರುದ್ಧ ಆ ಮಹಿಳೆ ದೂರು ನೀಡಿಲ್ಲ. ಜಾತಿ ನಿಂದನೆ ದೂರಿನಲ್ಲಿ ದೂರುದಾರ ರಾಮಯ್ಯ ಅವರು ಮಹಿಳೆಯ ಬಗ್ಗೆ ಏಕೆ ಪ್ರಸ್ತಾಪಿಸಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಿರುದ್ಧದ ಆರೋಪಗಳು ನಿರಾಧಾರವಾಗಿವೆ. ಜೊತೆಗೆ, ಮಹಿಳೆ ಹಾಗೂ ದೂರುದಾರರು ಯಾವುದೇ ನಿರ್ದಿಷ್ಟ ಜಾತಿಗೆ ಸೇರಿದವರು ಎಂದು ಅರ್ಜಿದಾರರಿಗೆ ಮೊದಲೇ ತಿಳಿದಿತ್ತು ಎನ್ನುವುದನ್ನಾಗಲಿ, ಅವರು ಉದ್ದೇಶಪೂರ್ವಕವಾಗಿಯೇ ಜಾತಿ ಹೆಸರಿಟ್ಟು ನಿಂದಿಸಿದ್ದರು ಎಂಬುದನ್ನು ದೂರಿನಲ್ಲಿನ ಆರೋಪಗಳು ಪುಷ್ಟೀಕರಿಸುತ್ತಿಲ್ಲ. ದೂರಿನಲ್ಲಿಯೇ ನಿರ್ದಿಷ್ಟ ಆರೋಪಗಳು ಇಲ್ಲದಿರುವಾಗ, ಪ್ರಕರಣದ ತನಿಖೆ ನಡೆದರೂ ಯಾವುದೇ ಪ್ರಯೋಜನವಿಲ್ಲ. ಅರ್ಜಿದಾರರ ವಿರುದ್ಧದ ಪ್ರಕರಣ ಮುಂದುವರಿಸಿದರೆ, ಕಾನೂನು ಪ್ರಕ್ರಿಯೆಯ ದುರ್ಬಳಕೆ ಆಗಲಿದೆ. ಆದ್ದರಿಂದ, ಅವರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ರದ್ದುಗೊಳಿಸಲಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಕೆ ಎನ್ ರಾಮಯ್ಯ, ಬ್ರೋಕರ್ ಕೆಲಸ ಮಾಡುತ್ತಿರುವ ನನ್ನನ್ನು ಭೇಟಿ ಮಾಡಿದ್ದ ಕೆ ಎಸ್ ವಿಶ್ವಕಿರಣ್ ಕೆಲ ದಾಖಲೆಗಳನ್ನು ಒದಗಿಸುವಂತೆ ಕೋರಿ 10 ಸಾವಿರ ರೂಪಾಯಿ ನೀಡಿದ್ದರು. ಅದರಂತೆ, ದಾಖಲೆಗಳನ್ನು ಸಂಗ್ರಹಿಸಿದ್ದ ನಾನು ಅವುಗಳನ್ನು ವಿಶ್ವಕಿರಣ್ ಅವರಿಗೆ ನೀಡಬೇಕಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಈ ಮಧ್ಯೆ, ನನ್ನ ಪರಿಚಯದವರಾದ ಆಂಜಿನಮ್ಮ ಎಂಬ ಮಹಿಳೆ ಹೆಬ್ಬಾಳ ಬಸ್ ನಿಲ್ದಾಣದಲ್ಲಿ ನನಗಾಗಿ ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ಆರೋಪಿ ಮಹಿಳೆಯನ್ನು ಕೆಟ್ಟ ಶಬ್ದಗಳಿಂದ ನಿಂದಿಸಿದ್ದಲ್ಲದೆ, ನನ್ನನ್ನು ಜಾತಿ ಹೆಸರಿನಲ್ಲಿ ನಿಂದಿಸಿದ್ದರು ಎಂದು ಆರೋಪಿಸಿದ್ದರು.
ದೂರು ಸ್ವೀಕರಿಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಸೆಕ್ಷನ್ 3(2)(ವಿ) ಮತ್ತು 3(2)(ವಿಎ) ಹಾಗೂ ಐಪಿಸಿ ಸೆಕ್ಷನ್ 420, 354, 354ಬಿ, 506 ಮತ್ತು 509ರ ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದರಿಂದ, ಎಫ್‌ಐಆರ್ ಮತ್ತು ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಅರ್ಜಿದಾರ ವಿಶ್ವಕಿರಣ್ ಹೈಕೋರ್ಟ್ ಮೆಟ್ಟಿಲೇರಿದ್ದರು.