ರಾಷ್ಟ್ರಧ್ವಜದ ಮೇಲೆ ನಿಂತಿರುವಂತೆ ತಿರುಚಿದ ಚಿತ್ರ: ಪ್ರಾಂಶುಪಾಲರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು

ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆಯ ಸೆಕ್ಷನ್ 2ರ ಅಡಿಯಲ್ಲಿ ಪ್ರಾಂಶುಪಾಲರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಿದ ನ್ಯಾಯಾಲಯ.
Karnataka High Court, students with national flag
Karnataka High Court, students with national flag
Published on

ರಾಷ್ಟ್ರಧ್ವಜದ ಮೇಲೆ ನಿಂತಿರುವ ರೀತಿಯಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ್ದ ಎಡಿಟ್ ಮಾಡಿದ ತಿರುಚಲಾದ ಚಿತ್ರವನ್ನು ಆಧರಿಸಿ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ಆರೋಪದಲ್ಲಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ನಾಗಸಂದ್ರ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ಬಿ ಸಿ ವೇಣುಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರ ಚಿತ್ರವನ್ನು ಅವರ ವಿದ್ಯಾರ್ಥಿಯೇ ಎಡಿಟ್ ಮಾಡಿದ್ದು, ಪ್ರಕರಣದಲ್ಲಿ ಅರ್ಜಿದಾರರಲ್ಲಿ ಯಾವುದೇ ಅಪರಾಧದ ಉದ್ದೇಶ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ' ಕಾಯಿದೆಯ ಸೆಕ್ಷನ್ 2ರ ಅಡಿಯಲ್ಲಿ ವೇಣುಗೋಪಾಲ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಿದೆ.

ಪ್ರಕರಣದಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆಯ ಸೆಕ್ಷನ್ 2 ಅನ್ನು ಅನ್ವಯಿಸಲು ಅಪರಾಧದ ಉದ್ದೇಶ ಪ್ರಮುಖವಾಗುತ್ತದೆ. ಪ್ರಾಂಶುಪಾಲರ ಚಿತ್ರವನ್ನು ಅರಿಯದೇ ರಾಷ್ಟ್ರಧ್ವಜದ ಮೇಲೆ ಇರಿಸಿದ್ದಾಗಿ ಶಾಲೆಯ ವಿದ್ಯಾರ್ಥಿಯೊಬ್ಬ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬೇರೆಡೆ ತೆಗೆದ ಅರ್ಜಿದಾರರ ಚಿತ್ರವನ್ನು ಎಡಿಟ್ ಮಾಡಿ ರಾಷ್ಟ್ರಧ್ವಜದ ಮೇಲೆ ಇಟ್ಟಿರುವುದು ಸ್ಪಷ್ಟವಾಗುತ್ತದೆ. ಜೊತೆಗೆ, ಅರ್ಜಿದಾರರ ವಿರುದ್ಧ ಇಂಥದೇ ಅಪರಾಧ ಎಸಗಿದ ಕುರಿತು ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕಳೆದ ಏಳೆಂಟು ವರ್ಷಗಳಿಂದ ಅದೇ ಶಾಲೆಯ ಪ್ರಾಂಶುಪಾಲರಾಗಿದ್ದು, ಇಂಥ ಘಟನೆಗಳು ಹಿಂದೆಂದೂ ನಡೆದಿಲ್ಲ. ಆದ್ದರಿಂದ, ಅಪರಾಧದ ಉದ್ದೇಶವಿಲ್ಲದಿರುವುದು ಹಾಗೂ ಕೃತ್ಯದ ಅಸಂಭವನೀಯತೆ ಪರಿಗಣಿಸಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸುವುದು ಸೂಕ್ತ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರ ಶಾಲೆಯಲ್ಲಿ 2024ರ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಿಸಲಾಗಿತ್ತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತಿತರರ ವಾಟ್ಸ್‌ಆ್ಯಪ್ ಸ್ಟೇಟಸ್‌ಗಳಲ್ಲಿ ಅರ್ಜಿದಾರರು ಚಪ್ಪಲಿ ಧರಿಸಿ ರಾಷ್ಟ್ರಧ್ವಜದ ಮೇಲೆ ನಿಂತಿರುವ ರೀತಿಯಲ್ಲಿ ಫೋಟೋಗಳು ಹರಿದಾಡಿದ್ದವು. ಈ ಸಂಬಂಧ ಬಿ ಎಂ ಚಿಕ್ಕಣ್ಣ ಎಂಬುವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಅರ್ಜಿದಾರರ ವಿರುದ್ಧ ಭಾರತದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದರಿಂದ, ಪ್ರಕರಣ ರದ್ದು ಕೋರಿ ವೇಣುಗೋಪಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ​ವೇಣುಗೋಪಾಲ್ ಪರ ವಕೀಲರು, ಅರ್ಜಿದಾರರ ಮೊಬೈಲ್ ಫೋನ್ ವಿದ್ಯಾರ್ಥಿಗಳ ಬಳಿ ಇತ್ತು. ಅವರೇ ಅರ್ಜಿದಾರರ ಚಿತ್ರವನ್ನು ಎಡಿಟ್ ಮಾಡಿ ರಾಷ್ಟ್ರಧ್ವಜದ ಮೇಲೆ ಇರಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಯಾವುದೇ ಉದ್ದೇಶ ಪ್ರಾಂಶುಪಾಲರಿಗೆ ಇರಲಿಲ್ಲ. ವಿದ್ಯಾರ್ಥಿಗಳು ಮಾಡಿರುವ ಕೃತ್ಯದ ಬಗ್ಗೆ ಅವರಿಗೆ ಯಾವುದೇ ಅರಿವು ಸಹ ಇರಲಿಲ್ಲ. ಆದ್ದರಿಂದ, ಪ್ರಕರಣ‌ ರದ್ದುಪಡಿಸಬೇಕು ಎಂದು ಕೋರಿದ್ದರು.

ಸರ್ಕಾರದ ಪರ ವಕೀಲರು, ​ಚಿತ್ರದ ಪ್ರಕಾರ ಅರ್ಜಿದಾರರು ರಾಷ್ಟ್ರಧ್ವಜದ ಮೇಲೆ ನಿಂತಿದ್ದಾರೆ. ನಿಜಕ್ಕೂ ಅದನ್ನು ವಿದ್ಯಾರ್ಥಿಗಳು ಎಡಿಟ್ ಮಾಡಿ ಹಾಕಿದ್ದಾರೆಯೇ ಅಥವಾ ಇಲ್ಲವೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಆದ್ದರಿಂದ, ಪ್ರಕರಣ ರದ್ದುಪಡಿಸದಂತೆ ಮನವಿ ಮಾಡಿದ್ದರು.

ಸೆಕ್ಷನ್ 2 ಹೇಳುವುದೇನು?: ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆಯ ​ಸೆಕ್ಷನ್ 2 ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕವಾಗಿ ಕಾಣಿಸುವಂತಹ ಯಾವುದೇ ಇತರ ಸ್ಥಳದಲ್ಲಿ ಯಾವುದೇ ವ್ಯಕ್ತಿ ಭಾರತದ ರಾಷ್ಟ್ರಧ್ವಜ ಅಥವಾ ಭಾರತದ ಸಂವಿಧಾನ ಅಥವಾ ಅದರ ಯಾವುದೇ ಭಾಗವನ್ನು ಸುಡುವ, ವಿರೂಪಗೊಳಿಸುವ, ಮಲಿನಗೊಳಿಸುವ, ಕುರೂಪಗೊಳಿಸುವ, ನಾಶಪಡಿಸುವ, ತುಳಿಯುವ ಅಥವಾ ಇನ್ಯಾವುದೇ ರೀತಿಯಲ್ಲಿ ಅವುಗಳಿಗೆ ಅಗೌರವ ತೋರಿದರೆ, ಅಂಥ ವ್ಯಕ್ತಿಗೆ ಗರಿಷ್ಠ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.

Kannada Bar & Bench
kannada.barandbench.com