ಗಣಿ ಕಂಪೆನಿ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ವಜಾ ಮಾಡಿದ ಹೈಕೋರ್ಟ್‌

ಅರ್ಜಿದಾರರ ವಿರುದ್ಧ ಆರೋಪ ನಿಗದಿ ಮಾಡಲು ಯಾವುದೇ ದಾಖಲೆಗಳು ಇಲ್ಲ ಎಂದು ವಿಶೇಷ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ಆದೇಶಗಳನ್ನು ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿಲ್ಲ ಎಂದ ಪೀಠ.
Karnataka High Court
Karnataka High Court

ಕ್ರಿಮಿನಲ್‌ ಪ್ರಕರಣದಲ್ಲಿ ಸಮರ್ಥ ಸಾಕ್ಷಿಗಳ ಅಗತ್ಯವಿರುತ್ತದೆ ಎಂದಿರುವ ಕರ್ನಾಟಕ ಹೈಕೋರ್ಟ್‌ ಈಚೆಗೆ ಗಣಿ ಆರೋಪದಲ್ಲಿ ಸಿಲುಕಿದ್ದ ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಪ್ರೈವೇಟ್‌ ಲಿಮಿಟೆಡ್‌ (ಡಿಎಂಎಸ್‌ಪಿಎಲ್‌) ಮತ್ತು ಅದರ ನಿರ್ದೇಶಕ ರಾಜೇಂದ್ರ ಜೈನ್‌ ಅವರ ವಿರುದ್ಧದದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ವಜಾ ಮಾಡಿದೆ.

ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಮತ್ತು ರಾಜೇಂದ್ರ ಜೈನ್‌ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಅರ್ಜಿದಾರರ ವಿರುದ್ಧ ಆರೋಪ ನಿಗದಿ ಮಾಡಲು ಯಾವುದೇ ದಾಖಲೆಗಳು ಇಲ್ಲ ಎಂದು ವಿಶೇಷ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ಆದೇಶಗಳನ್ನು ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಕ್ರಿಮಿನಲ್‌ ಪ್ರಕರಣಗಳಲ್ಲಿ ಸಮರ್ಥ ಸಾಕ್ಷಿಯ ಅಗತ್ಯವಿದೆ. ಇದನ್ನು ನಿರ್ಧರಿಸುವ ನ್ಯಾಯಾಲಯವೇ ಯಾವುದೇ ಅಪರಾಧವಾಗಿಲ್ಲ ಎಂದು ಮನವಿಯನ್ನು ವಿಲೇವಾರಿ ಮಾಡಿದಾಗ ಪ್ರಾಸಿಕ್ಯೂಷನ್‌ ಮುಂದುವರಿಸುವಂತೆ ಜಾರಿ ನಿರ್ದೇಶನಾಲಯದ ವಕೀಲರು ಕೋರುವುದು ಕಾನೂನಿನ ದುರ್ಬಳಕೆಯಾಗುತ್ತದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಕಿರಣ್‌ ಜವಳಿ ಅವರು “ವಿಚಾರಣಾಧೀನ ನ್ಯಾಯಾಲಯವು ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಿದೆ. ಅಧೀನ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪರಿಗಣಿಸಿ ಮೇಲಿನ ನ್ಯಾಯಾಲಯವು ವಶಕ್ಕೆ ಪಡೆದಿದ್ದ ಆಸ್ತಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ" ಎಂದು ಪೀಠದ ಗಮನಸೆಳೆದರು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಧುಕರ್‌ ದೇಶಪಾಂಡೆ ಅವರು “ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕ್ರಿಯೆಯು ಪ್ರತ್ಯೇಕವಾಗಿದ್ದು,‌ ವಿಶೇಷ ನ್ಯಾಯಾಲಯವು ಆರೋಪಿಗಳನ್ನು ಆರೋಪಮುಕ್ತಗೊಳಿಸಿದ ಮಾತ್ರಕ್ಕೆ ಅವುಗಳು ಮುಗಿಯುವುದಿಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ 14.3 ಹೆಕ್ಟೇರ್‌ ಗಣಿ ಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡು ಅಲ್ಲಿಂದ ಕಬ್ಬಿಣದ ಅದಿರು ಹೊರತೆಗೆದು ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ 2013ರಲ್ಲಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸೆಕ್ಷನ್‌ 2(ಐ)(ಯು) ಅಡಿ ಡೆಕ್ಕನ್‌ ಮೈನಿಂಗ್‌ ವಿರುದ್ಧ ದೂರು ದಾಖಲಿಸಿತ್ತು.

Attachment
PDF
Deccan Mining Syndicate Pvt Ltd V. Enforcement Directorate.pdf
Preview

Related Stories

No stories found.
Kannada Bar & Bench
kannada.barandbench.com