ಬೆಂಗಳೂರಿನ ಜಯನಗರ ಮನೆಯ ಹಿತ್ತಲಿನಲ್ಲಿ ವಾಣಿಜ್ಯ ದೃಷ್ಟಿಯಿಂದ ಕೆಲ ಗಾಂಜಾ ಗಿಡ ಬೆಳೆದ ಆರೋಪ ಸಂಬಂಧ 67 ವರ್ಷದ ಹಿರಿಯರೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ.
ಜಯನಗರ 7ನೇ ಬ್ಲಾಕ್ ನಿವಾಸಿ ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ಅಲ್ಲದೇ, ಚಂದ್ರಶೇಖರ್ ವಿರುದ್ಧ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯಿದೆ ಸೆಕ್ಷನ್ 20(ಎ) ಮತ್ತು 20(ಬಿ)(ii)(ಸಿ) ಅಡಿ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿದೆ.
“ಚಂದ್ರಶೇಖರ್ ಅವರು ಗಾಂಜಾ ಬೆಳೆಯುತ್ತಿದ್ದರು ಎಂಬುದಕ್ಕೆ ಪೂರಕವಾದ ಮತ್ತು ಎಷ್ಟು ಪ್ರಮಾಣದ ಗಾಂಜಾ ಮನೆಯ ಹಿತ್ತಲಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಯಾವುದೇ ಸಾಕ್ಷಿ ಸಲ್ಲಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಜಫ್ತಿ ಮಾಡಿರುವುದು ಮತ್ತು ಆರೋಪ ಪಟ್ಟಿಯ ಸಾರಾಂಶವನ್ನು ಒಟ್ಟಿಗೆ ನೋಡಿದರೆ ಗಿಡದ ಬೇರು, ಕಾಂಡ, ಎಲೆಗಳು, ಮೊಗ್ಗು ಹಾಗೂ ಪ್ಲಾಸ್ಟಿಕ್ ಬ್ಯಾಗ್ ಅನ್ನು ಸೇರಿಸಿ ತೂಕ ಹಾಕಲಾಗಿದೆ. ಅಲಾಖ್ ರಾಮ್ ವರ್ಸಸ್ ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ವಾಭಾವಿಕವಾಗಿ ಬೆಳೆದಿರುವುದನ್ನು ಬೇಸಾಯದಿಂದ ಬೆಳೆಯಲಾಗಿದೆ ಎನ್ನಲಾಗದು ಎಂದಿದೆ. ಹಾಲಿ ಪ್ರಕರಣದಲ್ಲಿ ತೂಕ ಮಾಡುವುದಕ್ಕೂ ಮುನ್ನ ಗಾಂಜಾ ಎಲೆಗಳು ಮತ್ತು ವಾಸ್ತವಿಕ ಗಾಂಜಾವನ್ನು ಪ್ರತ್ಯೇಕಿಸದೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಈ ನೆಲೆಯಲ್ಲಿ ಕಾನೂನಿಗೆ ವಿರುದ್ಧವಾಗಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಕೀಲ ಜಯಶಾಮ್ ಜಯಸಿಂಹ ರಾವ್ ಅವರು “ಮನೆಯ ಹಿತ್ತಲಿನಲ್ಲಿ ಐದು ಗಾಂಜಾ ಗಿಡ ಮತ್ತು ಇತರೆ ಸಾಮಾನ್ಯ ಬೀಜಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಹೆಚ್ಚೆಂದರೆ ಪರಾಗಸ್ಪರ್ಶದಿಂದ ಅಲ್ಲಿ ಗಾಂಜಾ ಬೆಳೆದಿರಬಹುದು. ಗಾಂಜಾ ಗಿಡ ಬೆಳೆಸಲಾಗಿದೆ ಎಂಬುದಕ್ಕೆ ಪೂರಕವಾಗಿ ಯಾವುದೇ ಸಾಕ್ಷಿಯನ್ನು ಸಲ್ಲಿಸಲಾಗಿಲ್ಲ” ಎಂದರು.
“ಅವುಗಳನ್ನು ತೂಕ ಮಾಡುವಾಗ ಬೇರೆ ಗಿಡಗಳನ್ನು ಪ್ರತ್ಯೇಕಿಸಲಾಗಿಲ್ಲ. ಹೆಚ್ಚೆಂದರೆ ಅಲ್ಲಿ ಐದು ಗಾಂಜಾ ಗಿಡ ಇದ್ದಿರಬಹುದು. ಎಲ್ಲ ಗಿಡಗಳ ಎಲೆ, ಕಾಂಡ, ಬೇರು ಸೇರಿಸಿ 27.360 ಕೆಜಿ ಎಂದು ಹೇಳಲಾಗಿದೆ. ಇದು ಕಾನೂನಿಗೆ ವಿರುದ್ಧ” ಎಂದರು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಪೊಲೀಸರು ಗಾಂಜಾ ಗಿಡ ವಶಪಡಿಸಿಕೊಂಡಿದ್ದು, ಜಫ್ತಿಯ ಸಂದರ್ಭದಲ್ಲಿ ದೊರೆತಿರುವ ಗಾಂಜಾ ಗಿಡದ ಪ್ರಮಾಣವು ವಿಚಾರಣೆಯಿಂದ ಹೊರಬರಬೇಕಿದೆ. ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಮೇಲ್ನೋಟಕ್ಕೆ ಚಂದ್ರಶೇಖರ್ ಅವರು ಗಾಂಜಾ ಬೆಳೆಯುತ್ತಿರುವುದು ಸಾಬೀತಾಗಿದೆ” ಎಂದಿದ್ದರು.
ಚಂದ್ರಶೇಖರ್ ಅವರು ಮನೆಯ ಹಿತ್ತಲಿನಲ್ಲಿ 5-6 ಗಾಂಜಾ ಗಿಡ ಬೆಳೆಸಿದ್ದಾರೆ ಎಂಬ ಆರೋಪದ ಮೇಲೆ 01-09-2023ರಂದು ಅವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಆನಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸಿ, ಚಂದ್ರಶೇಖರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.