ಅಕ್ರಮ ಹಣ ಸಾಲದಾತ ಉದ್ಯಮದಲ್ಲಿರುವ ಸಹ ಆರೋಪಿ ಹೆಸರಿನಲ್ಲಿ ವ್ಯಾಪಾರಸ್ಥರ ಗುರುತು (ಮರ್ಚೆಂಟ್ ಐಡಿ) ಸೃಷ್ಟಿಸುವ ಮೂಲಕ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ರೇಜರ್‌ಪೇ ವಿರುದ್ಧ ಚಾಲನೆ ನೀಡಲಾಗಿರುವ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ರೇಜರ್‌ಪೇ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಪಿಎಂಎಲ್‌ಎ ಸೆಕ್ಷನ್‌ಗಳಾದ 3, 70 ಮತ್ತು 4ರ ಅಡಿ ವಿಶೇಷ ನ್ಯಾಯಾಲಯವು ಆರಂಭಿಸಿರುವ ಪ್ರಕ್ರಿಯೆ ಮತ್ತು ಸಮನ್ಸ್ ಅನ್ನು ರದ್ದುಪಡಿಸಿದೆ.
“ಅಕ್ರಮ ಹಣವನ್ನು ಸಾಲದ ರೂಪದಲ್ಲಿ ನೀಡಲು ಐದನೇ ಆರೋಪಿಗೆ (ಜಮ್ನಾದಾಸ್ ಮೊರಾರ್ಜಿ ಫೈನಾನ್ಸ್ ಪ್ರೈ. ಲಿ) ಸಹಕರಿಸಿದ್ದಕ್ಕಾಗಿ ಏಳನೇ ಆರೋಪಿ (ರೇಜರ್‌ಪೇ) ಕಮಿಷನ್ ಪಡೆದಿದೆ ಎಂದು ಅರ್ಥೈಸಲಾಗದು. ಏಕೆಂದರೆ ಪಿಎಂಎಲ್‌ಎ ಸೆಕ್ಷನ್ 3ರ ಅಡಿ ರೇಜರ್ ಪೇ ಅಪರಾಧ ಎಸಗುವ ಉದ್ದೇಶ ಹೊಂದಿತ್ತು ಎನ್ನಲು ಯಾವುದೇ ಸಾಕ್ಷಿ ಇಲ್ಲ” ಎಂದು ಪೀಠ ಹೇಳಿದೆ.
“ಪಿಎಂಎಲ್‌ಎ ಸೆಕ್ಷನ್ 3ರ ಅಡಿ ಅಪರಾಧವಾಗಲು ಉದ್ದೇಶ ಅಗತ್ಯ. ಹೀಗಾಗಿ, ಜಮ್ನಾದಾಸ್ ಫೈನಾನ್ಸ್‌ಗೆ ಅಕ್ರಮ ಹಣ ಸಾಲ ನೀಡಲು ಸಹಕರಿಸುವ ಮೂಲಕ ರೇಜರ್ ಪೇ ಕಮಿಷನ್ ಹಣ ಪಡೆದಿದೆ ಎಂದು ಹೇಳಲಾಗದು. ಏಕೆಂದರೆ, ಪಿಎಂಎಲ್‌ಎ ಸೆಕ್ಷನ್ 3ರ ಅಡಿ ಅಪರಾಧ ಎಸಗುವ ಉದ್ದೇಶ ರೇಜರ್‌ಪೇಗೆ ಇತ್ತು ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ರೇಜರ್‌ಪೇ ಪರವಾಗಿ ಹಿರಿಯ ವಕೀಲರಾದ ಸಿ ವಿ ನಾಗೇಶ್ ಮತ್ತು ಸಂದೇಶ್ ಚೌಟ ಅವರು “ವಿಶ್ವಾಸಾರ್ಹತೆ ಪರಿಶೀಲಿಸದೇ ಜಮ್ನಾದಾಸ್ ಮೊರಾರ್ಜಿ ಫೈನಾನ್ಸ್ ಹೆಸರಿನಲ್ಲಿ ಹಣ ವರ್ಗಾವಣೆಗೆ ಅನುಮತಿಸಿರುವ ಆರೋಪ ಹೊರಿಸಲಾಗಿದೆ. ಯಾವುದೇ ಆಧಾರವಿಲ್ಲದೇ ಅಪರಾಧವನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಲಾಗಿದ್ದು, ಊಹೆಯ ಅಪರಾಧ ಆರೋಪಿಸಲಾಗಿದೆ. ಆಧಾರವಿಲ್ಲದೇ ಸಂಜ್ಞೇ ಪರಿಗಣಿಸಲಾಗಿದೆ” ಎಂದು ವಾದಿಸಿದ್ದರು.
ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಮತ್ತು ಕೇಂದ್ರ ಸರ್ಕಾರದ ವಕೀಲರಾದ ಮಧುಕರ್ ದೇಶಪಾಂಡೆ ಅವರು “ರೇಜರ್‌ಪೇ ಮಧ್ಯಸ್ಥ ವೇದಿಕೆ ಕಂಪೆನಿ ಎಂದು ಐಟಿ ಕಾಯಿದೆಯ ಸೆಕ್ಷನ್ 79ರ ಅಡಿ ವಿನಾಯಿತಿ ಪಡೆಯಬಹುದು. ಆದರೆ, ಪಿಎಂಎಲ್‌ಎ ಅಡಿ ಅಪರಾಧದ ಅಡಿ ವಿನಾಯಿತಿ ಪಡೆಯಲಾಗದು. ರೇಜರ್ ಪೇ ಅಪರಾಧದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ದಾಖಲೆ ಮೂಲಕ ಸ್ಪಷ್ಟ ಉತ್ತರ ಒದಗಿಸವೆ” ಎಂದಿದ್ದರು.
ಮೊಬೈಲ್ ಅಪ್ಲಿಕೇಶನ್ ಮೂಲಕ ದುಬಾರಿ ಬಡ್ಡಿಗೆ ಹಣ ಸಾಲ ನೀಡುವ ಆರೋಪದ ಮೇಲೆ ಜಮ್ನಾದಾಸ್ ಮೊರಾರ್ಜಿ ಫೈನಾನ್ಸ್ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಸಕಾಲಕ್ಕೆ ಸಾಲ ಪಡೆದವರು ವಿಫಲರಾದ ಹಿನ್ನೆಲೆಯಲ್ಲಿ, ಕೆಲವು ಪ್ರಕರಣದಲ್ಲಿ ಹಣ ಪಾವತಿಸಿದರೂ ಜಮ್ನಾದಾಸ್ ಮೊರಾರ್ಜಿ ಫೈನಾನ್ಸ್ ಸಂಸ್ಥೆಯು ಹಣ ಸುಲಿಗೆ ಮಾಡಲು ಕಿರುಕುಳ ನೀಡುತ್ತಿತ್ತು. ಅಲ್ಲದೇ, ಸಂತ್ರಸ್ತರ ಮೊಬೈಲ್ ಫೋನ್‌ನಿಂದ ದತ್ತಾಂಶ ಸಂಗ್ರಹಿಸಿ, ಅದನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯವು ರೇಜರ್ ಪೇ ಅನ್ನು ಏಳನೇ ಆರೋಪಿಯನ್ನಾಗಿಸಿತ್ತು.