ಸಂತ್ರಸ್ತೆ ವಿವಾಹವಾಗುವ ವಿಚಾರಕ್ಕೆ ಒಳಪಟ್ಟು ಆರೋಪಿ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಸಂತ್ರಸ್ತೆಯು ಆರೋಪಿಯನ್ನು ಮದುವೆಯಾಗುವುದಾಗಿ ದೃಢೀಕರಿಸಿ ಅಫಿಡವಿಟ್‌ ಸಲ್ಲಿಸಿದ್ದಾರೆ. ಮತ್ತೊಂದೆಡೆ ಆರೋಪಿ ಸಹ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
Justice Hemant Chandangoudar
Justice Hemant Chandangoudar

ಅತ್ಯಾಚಾರಕ್ಕೆ ಒಳಾಗದ ಸಂತ್ರಸ್ತೆಯನ್ನೇ ಮದುವೆಯಾಗುವುದಾಗಿ ಆರೋಪಿ ಭರವಸೆ ನೀಡಿದ ಮತ್ತು ಮದುವೆಗೆ ಸಂತ್ರಸ್ತೆ ಒಪ್ಪಿದ ಕಾರಣ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಚಿಕ್ಕಬಳ್ಳಾಪುರದ ಆರೋಪಿಯು ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ. ಇದರೊಂದಿಗೆ ಆರೋಪಿ ಮತ್ತು ಸಂತ್ರಸ್ತೆ ಮದುವೆಯಾಗಿ ದಾಂಪತ್ಯ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ.

ಅತ್ಯಾಚಾರ ಘಟನೆ ನಡೆದಾಗ ಸಂತ್ರಸ್ತೆಯು ಅಪ್ರಾಪ್ತೆಯಾಗಿದ್ದರು. ಸಂತ್ರಸ್ತೆ ಲೈಂಗಿಕ ಸಂಭೋಗಕ್ಕೆ ಗುರಿಯಾಗಿದ್ದಾಳೆ ಎಂಬುದಾಗಿ ವೈದ್ಯಕೀಯ ದಾಖಲೆಗಳು ಬಹಿರಂಗಪಡಿಸುತ್ತವೆ. ಇದೀಗ ವಿಚಾರಣೆಗೆ ಹಾಜರಾಗಿರುವ ಸಂತ್ರಸ್ತೆ, ಆರೋಪಿಯನ್ನು ಮದುವೆಯಾಗುವುದಾಗಿ ದೃಢೀಕರಿಸಿ ಅಫಿಡವಿಟ್‌ ಸಲ್ಲಿಸಿದ್ದಾರೆ. ಮತ್ತೊಂದೆಡೆ ಆರೋಪಿ ಸಹ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಅಲ್ಲದೇ, ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ವೇಳೆ ಪ್ರಕರಣದ ಸಾಕ್ಷಿಯಾಗಿರುವ ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ನುಡಿದ್ದಾರೆ. ಪ್ರಾಸಿಕ್ಯೂಷನ್‌ ಅನ್ನು ಬೆಂಬಲಿಸುವ ಯಾವೊಂದು ಸಾಕ್ಷ್ಯವನ್ನೂ ಪಾಟೀ ಸವಾಲಿನಲ್ಲಿ ಸಂತ್ರಸ್ತೆ ದಾಖಲಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರೋಪಿ ವಿರುದ್ಧದ ಕ್ರಿಮಿನಲ್‌ ವಿಚಾರಣಾ ಪ್ರಕ್ರಿಯೆ ಮುಂದುವರಿದರೆ, ಆತ ಸೆರೆವಾಸದಲ್ಲಿ ಮುಂದುವರಿಯಲಿದ್ದು, ಸಂಕಷ್ಟಕ್ಕೀಡಾಗುತ್ತಾನೆ. ಜೊತೆಗೆ, ಸಂತ್ರಸ್ತೆಗೆ ನ್ಯಾಯ ಸಿಗುವುದಕ್ಕಿಂತ ಹೆಚ್ಚಿನ ತೊಂದರೆಯಾಗಲಿದೆ. ನ್ಯಾಯದಾನದೊಂದಿಗೆ ಪ್ರಕರಣ ಅಂತ್ಯವಾಗುವುದಿಲ್ಲ. ಬದಲಿಗೆ ಕಾನೂನಿನ ಪ್ರಕ್ರಿಯೆ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಆರೋಪಿ ಮೇಲಿನ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರನು ಸಂತ್ರಸ್ತೆ ಅಪ್ರಾಪ್ತೆಯಾಗಿದ್ದ ವೇಳೆ ನಿರಂತರವಾಗಿ ಅತ್ಯಾಚಾರ ಎಸಗಿದ್ದನು. ಈ ಕುರಿತು 2021ರಲ್ಲಿ ಆತನ ವಿರುದ್ಧ ಚಿಂತಾಮಣಿ ಟೌನ್‌ ಠಾಣಾ ಪೊಲೀಸರು ದೂರು ದಾಖಲಿಸಿದ್ದರು. ಪ್ರಕರಣವು ಚಿಕ್ಕಬಳ್ಳಾಪುರದ ಪೋಕ್ಸೊ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಆ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಯು ಇತ್ತೀಚೆಗೆ ವಿಚಾರಣೆಗೆ ಬಂದಾಗ ಸಂತ್ರಸ್ತೆಯು ತನ್ನ ತಂದೆಯೊಂದಿಗೆ ಹಾಜರಾಗಿ ಅಫಿಡವಿಟ್‌ ಸಲ್ಲಿಸಿದ್ದರು.

‘ಪ್ರಕರಣದಲ್ಲಿ ತಾನೇ ದೂರುದಾರೆಯಾಗಿದ್ದೇನೆ. ಪ್ರಕರಣದ ಎಲ್ಲಾ ವಾಸ್ತವಾಂಶಗಳು ನನಗೆ ತಿಳಿದಿದೆ. ಸದ್ಯ ನಾನು ವಯಸ್ಕಳಾಗಿದ್ದೇನೆ. ನಾನು ಅರ್ಜಿದಾರರೊಂದಿಗೆ ಪ್ರಣಯದ (ರೊಮಾಂಟಿಕ್‌) ಸಂಬಂಧದಲ್ಲಿದ್ದೇನೆ. ಆತನನ್ನು ವಿವಾಹವಾಗಲು ಹಾಗೂ ಸಂತೋಷದಿಂದ ದಾಂಪತ್ಯ ಜೀವನ ನಡೆಸಲು ಇಚ್ಛಿಸಿದ್ದೇನೆ. ನನ್ನ ವಿವಾಹವಾಗಲು ಅರ್ಜಿದಾರನೂ ಒಪ್ಪಿದ್ದಾನೆ. ಹಾಗಾಗಿ, ಅರ್ಜಿದಾರನ ವಿರುದ್ಧ ವಿಚಾರಣಾ ನ್ಯಾಯಾಲಯದ ಮುಂದಿರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ನನ್ನದೇನು ಆಕ್ಷೇಪಣೆ ಇಲ್ಲ. ಈ ಹೇಳಿಕೆಯನ್ನು ನಾನು ಸ್ವಂತ ಇಚ್ಛೆಯಿಂದ ದಾಖಲಿಸುತ್ತಿದ್ದೇನೆ. ಈ ಅಫಿಡವಿಟ್‌ ಸಲ್ಲಿಸಲು ನನ್ನ ಮೇಲೆ ಯಾರೂ ಪ್ರಭಾವ ಬೀರಿಲ್ಲ’ ಎಂದು ಸಂತ್ರಸ್ತೆ ಅಫಿಡವಿಟ್‌ ತಿಳಿಸಿದ್ದರು.

ಇದೇ ವೇಳೆ ಪೊಲೀಸರು ಜೈಲಿನಿಂದ ಅರ್ಜಿದಾರ ಆರೋಪಿಯನ್ನು ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ‘ಸಂತ್ರಸ್ತೆಯನ್ನು ವಿವಾಹವಾಗಲು ಇಚ್ಚಿಸಿದ್ದೇನೆ. ನಮ್ಮ ನಡುವಿನ ಲೈಂಗಿಕ ಸಂಭೋಗವು ಸಮ್ಮತಿಯಿಂದೇ ನಡೆದಿದೆ’ ಎಂದು ಆತ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದನು. ಅದನ್ನು ಪರಿಗಣಿಸಿ ಹೈಕೋರ್ಟ್‌ ಈ ಆದೇಶ ಮಾಡಿದೆ.

Related Stories

No stories found.
Kannada Bar & Bench
kannada.barandbench.com