ರಸ್ತೆಯಲ್ಲಿ ಹೊಡೆದಾಟ: ಐಎಎಫ್‌ ಅಧಿಕಾರಿ ಶಿಲಾದಿತ್ಯ, ವಿಕಾಸ್‌ ಕುಮಾರ್‌ ವಿರುದ್ಧದ ದೂರು ರದ್ದುಪಡಿಸಿದ ಹೈಕೋರ್ಟ್‌

2025ರ ಏ.21ರಂದು ಬೆಳಗ್ಗೆ 6.30ರ ಸುಮಾರಿಗೆ ಹಳೆಯ ಮದ್ರಾಸ್ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ, ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕಾಲ್‌ ಸೆಂಟರ್‌ ಉದ್ಯೋಗಿ ವಿಕಾಸ್‌ ಕುಮಾರ್ ನಡುವೆ ಕಲಹ ಏರ್ಪಟ್ಟಿತ್ತು.
Shiladitya Bose and karnataka hc
Shiladitya Bose and karnataka hc
Published on

ರಸ್ತೆಯಲ್ಲಿ ಉಂಟಾಗಿದ್ದ ಜಗಳವನ್ನು ಕನ್ನಡ ಭಾಷೆಯ ವಿಚಾರಕ್ಕೆ ತಳಕು ಹಾಕಿ, ವಿಡಿಯೋ ಮಾಡಿ ಹರಿಬಿಟ್ಟಿದ್ದ ಪಶ್ಚಿಮ ಬಂಗಾಳ ಮೂಲದ ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿ ಶಿಲಾದಿತ್ಯ ಬೋಸ್ ವಿರುದ್ಧ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಇದೇ ವೇಳೆ ಶಿಲಾದಿತ್ಯ ಬೋಸ್ ನೀಡಿದ್ದ ದೂರಿನ ಆಧಾರದಲ್ಲಿ ಬೆಂಗಳೂರಿನ ವಿಕಾಸ್ ಕುಮಾರ್ ಎಂಬಾತನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನೂ ನ್ಯಾಯಾಲಯ ರದ್ದುಪಡಿಸಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತದಕ್ಕೆ ಸಂಬಂಧಿಸಿದಂತೆ 10ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದು ಕೋರಿ ಶಿಲಾದಿತ್ಯ ಬೋಸ್ ಹಾಗೂ ವಿಕಾಸ್ ಕುಮಾರ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪರಸ್ಪರ ದೂರು-ಪ್ರತಿದೂರು ದಾಖಲಿಸಿಕೊಂಡಿದ್ದ ವಿಕಾಸ್ ಕುಮಾರ್ ಹಾಗೂ ಮಧುಮಿತಾ ದತ್ತಾ (ಶಿಲಾದಿತ್ಯ ಪತ್ನಿ) ಕೋರ್ಟ್‌ಗೆ ಹಾಜರಾಗಿ, ರಸ್ತೆಯಲ್ಲಿ ನಡೆದ ಜಗಳದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಘಟನೆ ಸಂಭವಿಸಿತ್ತು. ಮಾತಿನ‌ ಚಕಮಕಿ ಹೊರತುಪಡಿಸಿ ಯಾವುದೇ ರೀತಿಯ ದೈಹಿಕ ಹಲ್ಲೆ ನಡೆದಿಲ್ಲ. ಪ್ರಕರಣವು ಸೌಹಾರ್ದಯುತವಾಗಿ ಬಗೆಹರಿದಿದೆ. ಆದ್ದರಿಂದ, ಪ್ರಕರಣ ಮುಕ್ತಾಯಗೊಳಿಸಲು ತಾವು ಸಿದ್ಧರಿದ್ದು, ದೂರಿನಲ್ಲಿರುವ ಎಲ್ಲ ಆರೋಪಗಳನ್ನು ಹಿಂಪಡೆಯುವುದಾಗಿ ತಿಳಿಸಿ, ಪ್ರಮಾಣಪತ್ರ ಸಲ್ಲಿಸಿದ್ದರು.

ಈ ಪ್ರಮಾಣಪತ್ರಗಳನ್ನು ಪರಿಗಣಿಸಿರುವ ನ್ಯಾಯಾಲಯವು ಶಿಲಾದಿತ್ಯ ವಿರುದ್ಧ ಬಿಎನ್‌ಎಸ್ ಸೆಕ್ಷನ್ 109ರ ಅಡಿಯ (ಕೊಲೆ ಯತ್ನ) ಆರೋಪವಿದ್ದು, ಇದು ರಾಜಿಯಾಗದ ಪ್ರಕರಣವಾಗಿದೆ. ಅದಾಗ್ಯೂ, ದೂರುದಾರರು ನ್ಯಾಯಾಲಯದ ಮುಂದೆ ಹಾಜರಾಗಿ, ತಮಗೆ ಯಾವುದೇ ಗಾಯಗಳಾಗಿಲ್ಲ ಹಾಗೂ ಪ್ರಕರಣವನ್ನು ಅಂತ್ಯಗೊಳಿಸಲು ಸಿದ್ಧವಿರುವುದಾಗಿ ಸ್ವ‌ಇಚ್ಛೆಯಿಂದ ಹೇಳಿಕೆ ನೀಡಿರುವುದನ್ನು ಪರಿಗಣಿಸಲಾಗಿದೆ. ಇಂತಹ ಸಂದರ್ಭಗಳಲ್ಲಿ ವಿಚಾರಣೆಯನ್ನು ಮುಂದುವರಿಸುವುದರಿಂದ ಯಾವುದೇ ಉದ್ದೇಶ ಈಡೇರಿದಂತಾಗುವುದಿಲ್ಲ ಹಾಗೂ ಕಾನೂನು ಪ್ರಕ್ರಿಯೆಯ ದುರುಪಯೋಗವೆನಿಸಿಕೊಳ್ಳಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆರೋಪಿಗಳಲ್ಲಿ ಒಬ್ಬರು ವಾಯುಪಡೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಷುಲ್ಲಕ ವಿಷಯ ಇತ್ಯರ್ಥವಾಗಿದ್ದರೂ ಸಹ ದೂರಿನಲ್ಲಿರುವ ವಿವಿಧ ಅಪರಾಧಗಳಿಗೆ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ. ಇಬ್ಬರೂ ದೂರುದಾರರು ಪ್ರಕರಣ ಮುಕ್ತಾಯಗೊಳಿಸಿಕೊಳ್ಳಲು ಒಪ್ಪಿದ್ದು, ಆರೋಪಗಳನ್ನು ಹಿಂಪಡೆಯುವುದಾಗಿ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆದ್ದರಿಂದ, ಎರಡೂ ಅರ್ಜಿಗಳನ್ನು ಪುರಸ್ಕರಿಸಬಹುದಾಗಿದೆ. ಅದಾಗ್ಯೂ ಭವಿಷ್ಯದಲ್ಲಿ ಇಂಥದೇ ಕೃತ್ಯಗಳಲ್ಲಿ ಇಬ್ಬರೂ ಭಾಗಿಯಾಗಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ನ್ಯಾಯಾಲಯವು ಇಬ್ಬರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: 2025ರ ಏಪ್ರಿಲ್ 21ರಂದು ಬೆಳಗ್ಗೆ 6.30ರ ಸುಮಾರಿಗೆ ಹಳೆಯ ಮದ್ರಾಸ್ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಾಗೂ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಕಾಲ್‌ ಸೆಂಟರ್‌ ಉದ್ಯೋಗಿ ವಿಕಾಸ್‌ ಕುಮಾರ್ ನಡುವೆ ಕಲಹ ಏರ್ಪಟ್ಟಿತ್ತು. ಮಾತಿಗೆ ಮಾತು ಬೆಳೆದು ಪರಸ್ಪರ ಕೈ ಮಿಲಾಯಿಸಿದ್ದರು. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರುಗಳು ದಾಖಲಾಗಿದ್ದವು.

Also Read
ರಸ್ತೆಯಲ್ಲಿ ಹೊಡೆದಾಟ: ಐಎಎಫ್‌ ಅಧಿಕಾರಿ ಶಿಲಾದಿತ್ಯ ವಿರುದ್ದ ಬಲವಂತ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

ಶಿಲಾದಿತ್ಯ ಪರವಾಗಿ ಪತ್ನಿ ಮಧುಮಿತಾ ಅವರು ವಿಕಾಸ್ ಕುಮಾರ್ ವಿರುದ್ಧ ಹಲ್ಲೆ, ಜೀವ ಬೆದರಿಕೆ ಇನ್ನಿತರ ಆರೋಪಗಳ ಅಡಿಯಲ್ಲಿ ದೂರು ದಾಖಲಿಸಿದ್ದರೆ, ಶಿಲಾದಿತ್ಯ ವಿರುದ್ಧ ವಿಕಾಸ್ ಕುಮಾರ್ ಕೊಲೆ ಯತ್ನ, ಜೀವ ಬೆದರಿಕೆ ಇನ್ನಿತರ ಆರೋಪಗಳನ್ನು ಮಾಡಿ ದೂರು ನೀಡಿದ್ದರು.

ವೈರಲ್ ಆಗಿದ್ದ ವಿಡಿಯೊ: ಘಟನೆ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಶಿಲಾದಿತ್ಯ, ವ್ಯಕ್ತಿಯೊಬ್ಬ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಕನ್ನಡ ಮಾತನಾಡದ ಕಾರಣ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ರಸ್ತೆ ಜಗಳದಲ್ಲಿ ಕನ್ನಡ ಭಾಷೆಯನ್ನು ಎಳೆದು ತಂದಿದ್ದರು. ಇದರ ಬೆನ್ನಲ್ಲೇ ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶಿಲಾದಿತ್ಯ ಅವರೇ ವಿಕಾಸ್ ಮೇಲೆ ಮೊದಲು ಹಲ್ಲೆ ನಡೆಸಿ, ಆತ ಕೆಳಗೆ ಬಿದ್ದಾಗ ಒದ್ದಿದ್ದ ವಿಚಾರ ತಿಳಿದುಬಂದಿತ್ತು. ಈ ವಿಡಿಯೊಗಳು ಸಾಕಷ್ಟು ವೈರಲ್ ಆಗಿ, ಪರವಿರೋಧದ ಚರ್ಚೆಗೆ ಕಾರಣವಾಗಿದ್ದವು.

Kannada Bar & Bench
kannada.barandbench.com