ಬಿಎಂಆರ್‌ಸಿಎಲ್‌ ಸೇವೆಗಳನ್ನು 'ಅತ್ಯವಶ್ಯಕ ಸೇವೆಗಳು' ಎಂದು ಆದೇಶಿಸಿದ್ದ ಸರ್ಕಾರದ ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್‌

ರಾಜ್ಯ ಸರ್ಕಾರ 2019ರಲ್ಲಿ ಬಿಎಂಆರ್‌ಸಿಎಲ್‌ ಅನ್ನು ಸಾರ್ವಜನಿಕ ಉಪಯುಕ್ತ ಸೇವೆ ಎಂದು ಹೊರಡಿಸಿದ್ದ ಅಧಿಸೂಚನೆ ಹಾಗೂ ಎಸ್ಮಾ ಅಡಿ ಬಿಎಂಆರ್‌ಸಿಎಲ್‌ ಸೇವೆಗಳನ್ನು 'ಅತ್ಯವಶ್ಯಕ ಸೇವೆಗಳು' ಎಂದು 2017ರಲ್ಲಿ ಅಧಿಸೂಚನೆ ಹೊರಡಿಸಿತ್ತು.
BMRCL and Karnataka HC
BMRCL and Karnataka HC
Published on

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್‌) ರೈಲ್ವೆ ಕಂಪನಿಯಾಗಿದ್ದು, ಅದು ಕೇಂದ್ರ ಸರ್ಕಾರದ ಒಪ್ಪಿಗೆ ಮೇರೆಗೆ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ವ್ಯಾಜ್ಯಗಳು ಏರ್ಪಟ್ಟಾಗ ಕೈಗಾರಿಕಾ ವಿವಾದಗಳ ಕಾಯಿದೆ ಅಡಿಯಲ್ಲಿ ಅವುಗಳನ್ನು ಪರಿಹರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ರಾಜ್ಯ ಸರ್ಕಾರಕ್ಕಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಇದೇ ವೇಳೆ, ರಾಜ್ಯ ಸರ್ಕಾರ 2019ರಲ್ಲಿ ಬಿಎಂಆರ್‌ಸಿಎಲ್‌ ಅನ್ನು ಸಾರ್ವಜನಿಕ ಉಪಯುಕ್ತ ಸೇವೆ ಎಂದು ಹೊರಡಿಸಿದ್ದ ಅಧಿಸೂಚನೆ ಹಾಗೂ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ (ಎಸ್ಮಾ) ಅಡಿಯಲ್ಲಿ ಬಿಎಂಆರ್‌ಸಿಎಲ್‌ ಸೇವೆಗಳನ್ನು 'ಅತ್ಯವಶ್ಯಕ ಸೇವೆಗಳು' ಎಂದು 2017ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿರುವ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠವು ಬಿಎಂಆರ್‌ಸಿಎಲ್‌ ಮೇಲೆ ಕೇಂದ್ರ ಸರ್ಕಾರಕ್ಕೆ ವಿಶಾಲ ನಿಯಂತ್ರಣವಿರಲಿದ್ದು, ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿ ಸೀಮಿತವಾಗಿದೆ ಎಂದಿದೆ.

ಮೆಟ್ರೊ ರೈಲು ನೌಕರರ ಮುಷ್ಕರ ನಿಯಂತ್ರಿಸಲು ರಾಜ್ಯ ಸರ್ಕಾರ ಎಸ್ಮಾ ಕಾಯಿದೆ ಅಡಿ ಹೊರಡಿಸಿದ್ದ ಅಧಿಸೂಚನೆ ಹಾಗೂ ಮೆಟ್ರೊ ರೈಲು ಸಾರ್ವಜನಿಕ ಉಪಯುಕ್ತ ಸೇವೆ ಎಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಬಿಎಂಆರ್‌ಸಿಎಲ್‌, ಬಿಎಂಆರ್‌ಸಿಎಲ್‌ ನೌಕರರ ಸಂಘ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ಪುರಸ್ಕರಿಸಿದೆ.

ಬಿಎಂಆರ್‌ಸಿಎಲ್‌ನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತಲಾ ಶೇ. 50 ಷೇರುಗಳನ್ನು ಹೊಂದಿದ್ದು, ಕೆಲ ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತದೆ. ಆದರೆ, ಪ್ರಮುಖ ಆಡಳಿತಾತ್ಮಕ ಕ್ರಮಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮವಾಗಿರಲಿದೆ. ರಾಜ್ಯ ಸರ್ಕಾರ ಯಾವುದಾದರೂ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬೇಕಾದರೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಆದ್ದರಿಂದ, ಮೆಟ್ರೊ ಸೇವೆಯನ್ನು ಎಸ್ಮಾ ಕಾಯಿದೆ ಅಡಿ ಅತ್ಯವಶ್ಯಕ ಸೇವೆ ಎಂದು ಘೋಷಣೆ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Also Read
ಮೆಟ್ರೋ ದರ ಹೆಚ್ಚಳ ವರದಿ ಮಾಹಿತಿ ಬಹಿರಂಗಪಡಿಸಿದ ಬಿಎಂಆರ್‌ಸಿಎಲ್‌: ತೇಜಸ್ವಿ ಅರ್ಜಿ ವಿಲೇವಾರಿ

ಮೆಟ್ರೊ ರೈಲು ಸೇವೆ ಕೇಂದ್ರ ಸರ್ಕಾರ ರಚನೆ ಮಾಡಿರುವ ಕಾಯಿದೆಗಳಿಂದ ನಿಯಂತ್ರಣಕ್ಕೊಳಪಡಲಿದೆ. ಮೆಟ್ರೊ ರೈಲ್ವೆಯ ಹಲವು ಕಾರ್ಯಾಚರಣೆಗಳ ಉಸ್ತುವಾರಿ ಹೊಂದಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಅಗತ್ಯ ಅನುಮತಿ ಪಡೆದ ನಂತರವೇ ರೈಲ್ವೆ ಸೇವೆ ಆರಂಭಿಸಲು ಮತ್ತು ನಿರ್ವಹಣೆ ಮಾಡಲು ಅಧಿಕಾರವಿರಲಿದೆ. ಬಿಎಂಆರ್‌ಸಿಎಲ್‌ ಸಂಬಂಧ ಕೇಂದ್ರ ಮತ್ತು ರಾಜ್ಯಗಳ ನಡುವೆ ಮಾಡಿಕೊಂಡಿರುವ ಒಪ್ಪಂದದಡಿ ಮೆಟ್ರೊ ರೈಲು ಮಾರ್ಗಗಳ ನಿರ್ಮಾಣ ಮತ್ತು ನಿರ್ವಹಣೆಗೆ ಅವಕಾಶವಿರಲಿದೆ. ಭಾರತೀಯ ರೈಲ್ವೆ ಕಾಯಿದೆ ಮತ್ತು ಕೈಗಾರಿಕಾ ವಿವಾದ ಕಾಯಿದೆ ಅಡಿ ಬಿಎಂಆರ್‌ಸಿಎಲ್‌ ರೈಲ್ವೆ ಕಂಪನಿ ಸ್ಥಾನಮಾನ ಹೊಂದಿದೆ. ಈ ಸಂಸ್ಥೆಯ ಮೇಲೆ ಕೇಂದ್ರ ಸರ್ಕಾರ ವ್ಯಾಪಕ ಅಧಿಕಾರ ಹೊಂದಿರಲಿದ್ದು, ಕೇಂದ್ರದ ನಿಯಂತ್ರಣದಲ್ಲಿಯೇ ಬಿಎಂಆರ್‌ಸಿ‌ಎಲ್ ಇರಲಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

Attachment
PDF
BMRCL Vs State of Karnataka
Preview
Kannada Bar & Bench
kannada.barandbench.com