ಜಿಮ್ ಪ್ರಚಾರಕ್ಕಾಗಿ ಕಿರುಚಿತ್ರ ನಿರ್ಮಾಣ: ಕಾರ್ಯಾದೇಶ ವಜಾಗೊಳಿಸಿದ್ದ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್‌

ಕೈಗಾರಿಕೆ ಸಚಿವ ಮರುಗೇಶ್ ನಿರಾಣಿ ಅವರು ಎಂಸಿಎಲ್‌ಎಗೆ ಪತ್ರ ಬರೆದು ಐದು ನಿಮಿಷದ ಪ್ರಚಾರದ ವಿಡಿಯೊಗೆ ರೂ. 4.5 ಕೋಟಿ ನೀಡುವುದು ತುಂಬ ಹೆಚ್ಚಾಗಿದೆ, ಆದ್ದರಿಂದ, ಕಾರ್ಯಾದೇಶ ವಜಾಗೊಳಿಸುವಂತೆ ಸೂಚಿಸಿದ್ದರು.
Global Investors' Meet and Karnataka HC
Global Investors' Meet and Karnataka HC

ಕಳೆದ ನವೆಂಬರ್‌ನಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ (ಜಿಮ್) ಪ್ರಚಾರಕ್ಕಾಗಿ ಅಂದಾಜು ಐದು ನಿಮಿಷಗಳ ಕಿರುಚಿತ್ರ ಚಿತ್ರೀಕರಿಸಲು ಮುಂಬೈ ಮೂಲದ ಕಂಪೆನಿಗೆ ರೂ.4.5 ಕೋಟಿಗೆ ನೀಡಿದ್ದ ಗುತ್ತಿಗೆ ಹಿಂಪಡೆದಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ಒಪ್ಪಂದದಂತೆ ಕಂಪೆನಿಗೆ ಸಂಪೂರ್ಣ ಮೊತ್ತ ಪಾವತಿಸಲು ಸರ್ಕಾರಕ್ಕೆ ಈಚೆಗೆ ನಿರ್ದೇಶಿಸಿದೆ.

ಗುತ್ತಿಗೆ ಹಿಂಪಡೆದಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಮುಂಬೈನ ಕಂಪೆನಿ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಅರ್ಜಿದಾರ ಕಂಪೆನಿ ಗುತ್ತಿಗೆ ಒಪ್ಪಂದದಂತೆ ವಿಡಿಯೊ ಚಿತ್ರೀಕರಣ ಪೂರ್ಣಗೊಳಿಸಿತ್ತು. ಅಂತಿಮ ವಿಡಿಯೊ ನೀಡುವುದಷ್ಟೇ ಬಾಕಿಯಿತ್ತು. ಅದಕ್ಕೂ ಮೊದಲೇ ಗುತ್ತಿಗೆ ಕಾರ್ಯಾದೇಶ ಹಿಂಪಡೆದ ಸರ್ಕಾರದ ಕ್ರಮ ಏಕಪಕ್ಷೀಯವಾಗಿದೆ. ಪ್ರಚಾರ ವಿಡಿಯೊದ ಗುಣಮಟ್ಟ ಪರಿಶೀಲಿಸದೆ ಕೇವಲ ರಾಜಕೀಯ ಹಸ್ತಕ್ಷೇಪದಿಂದ ಗುತ್ತಿಗೆ ಕಾರ್ಯಾದೇಶ ರದ್ದು ಮಾಡಿರುವುದು ನಿರಂಕುಶತ್ವಕ್ಕೆ ಉದಾಹರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು ಅರ್ಜಿದಾರ ಕಂಪೆನಿಗೆ ಈಗಾಗಲೇ ಮುಂಗಡವಾಗಿ ರೂ.1.5 ಕೋಟಿ ನೀಡಲಾಗಿದೆ. ಆದ್ದರಿಂದ, ಬಾಕಿ ಇರುವ ಹಣವನ್ನು ಕಂಪೆನಿಗೆ ಪಾವತಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಜಿಮ್ ಪ್ರಚಾರಕ್ಕಾಗಿ ಐದು ನಿಮಿಷಗಳ 3ಡಿ ಕಿರುಚಿತ್ರವನ್ನು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರೀಕರಿಸಲು ಬಿಬಿಪಿ ಸ್ಟುಡಿಯೊ ಕಂಪೆನಿಯೊಂದಿಗೆ ಸರ್ಕಾರದ ಅಧೀನದ ಮಾರ್ಕೆಟಿಂಗ್ ಕಮ್ಯೂನಿಕೇಷನ್ಸ್ ಅಂಡ್‌ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿಎಲ್‌ಎ) ಒಪ್ಪಂದ ಮಾಡಿಕೊಂಡಿತ್ತು. 2022ರ ಆಗಸ್ಟ್‌ 11ರಂದು ಕಂಪೆನಿಗೆ ಗುತ್ತಿಗೆ ನೀಡಿ ಕಾರ್ಯಾದೇಶ ಹೊರಡಿಸಿ, 2022ರ ಅಕ್ಟೋಬರ್‌ 1ರಂದು ಮುಂಗಡವಾಗಿ ಕಂಪೆನಿಗೆ ರೂ.1.5 ಕೋಟಿ ಪಾವತಿಸಲಾಗಿತ್ತು.

ಈ ಮಧ್ಯೆ, ಕೈಗಾರಿಕೆ ಸಚಿವ ಮರುಗೇಶ್ ನಿರಾಣಿ ಅವರು ಎಂಸಿಎಲ್‌ಎಗೆ ಪತ್ರ ಬರೆದು ಐದು ನಿಮಿಷದ ಪ್ರಚಾರದ ವಿಡಿಯೊಗೆ ರೂ. 4.5 ಕೋಟಿ ನೀಡುವುದು ತುಂಬ ಹೆಚ್ಚಾಗಿದೆ, ಆದ್ದರಿಂದ, ಕಾರ್ಯಾದೇಶ ವಜಾಗೊಳಿಸುವಂತೆ ಸೂಚಿಸಿದ್ದರು. ಇದರಿಂದ, ಅಕ್ಟೋಬರ್‌ 25ರಂದು ಗುತ್ತಿಗೆ ಕಾರ್ಯಾದೇಶವನ್ನು ರದ್ದುಪಡಿಸಿದ್ದ ಎಂಸಿಎಲ್‌ಎ, ಆ ಕುರಿತು ಬಿಬಿಪಿ ಸ್ಟೂಡಿಯೊಗೆ ಇ-ಮೇಲ್ ಕಳುಹಿಸಿತ್ತು. ಇದನ್ನು ಪ್ರಶ್ನಿಸಿ ಬಿಬಿಪಿ ಸ್ಟೂಡಿಯೊ ಹೈಕೋರ್ಟ್ ಮೆಟ್ಟಿಲೇರಿತ್ತು.

Related Stories

No stories found.
Kannada Bar & Bench
kannada.barandbench.com