ಮಕ್ಕಳು, ಗರ್ಭಿಣಿಯರು, ತಾಯಂದಿರಿಗೆ ಕಳಪೆ ಆಹಾರ ಪೂರೈಕೆ: ಸರ್ಕಾರದ ಆಕ್ಷೇಪಾರ್ಹ ಆದೇಶಗಳನ್ನು ವಜಾ ಮಾಡಿದ ಹೈಕೋರ್ಟ್‌

ಮುಂದೆ ಐಸಿಡಿಎಸ್‌ ಯೋಜನೆ ಜಾರಿ ಮಾಡುವಾಗ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ, 2021ರ ಆಗಸ್ಟ್‌ 19ರ ತಾಂತ್ರಿಕ ಸಮಿತಿ ವರದಿ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
Karnataka HC and ICDS scheme
Karnataka HC and ICDS scheme

ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ (ಐಸಿಡಿಎಸ್‌) ಅಡಿ ಮಕ್ಕಳು, ಗರ್ಭಿಣಿಯರು ಮತ್ತು ಎದೆ ಹಾಲುಣಿಸುವ ತಾಯಂದಿರಿಗೆ ಆಹಾರ ಪದಾರ್ಥ ಪೂರೈಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಆಕ್ಷೇಪಾರ್ಹ ಆದೇಶಗಳನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ. 50 ಲಕ್ಷ ಫಲಾನುಭವಿಗಳು ಇರುವುದರಿಂದ ತಡ ಮಾಡದೇ ಐಸಿಡಿಎಸ್‌ ಯೋಜನೆಯನ್ನು ಜಾರಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಕಟ್ಟಪ್ಪಣೆ ವಿಧಿಸಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮರಾವತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಂಗೀತಾ ಗದುಗಿನ್‌ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿ, ಕಾಯ್ದರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಕಟಿಸಿತು.

ಐಸಿಡಿಎಸ್‌ ಯೋಜನೆ ಜಾರಿಗಾಗಿ ಭಾರತೀಯ ಗುಣಮಟ್ಟ ಸಂಸ್ಥೆ (ಬಿಐಎಸ್‌) ಜೊತೆ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಪೂರಕ ಪೌಷ್ಟಿಕಾಂಶ ತಯಾರಿ ಮಹಿಳಾ ತರಬೇತಿ ಕೇಂದ್ರಗಳಿಗೆ (ಎಂಎಸ್‌ಪಿಟಿಸಿ) 2021ರ ಮೇ 5ರಂದು ಸರ್ಕಾರ ಆದೇಶ ಮಾಡಿತ್ತು. ಪೂರಕ ಪೌಷ್ಟಿಕಾಂಶ ಯೋಜನೆ (ಎಸ್‌ಎನ್‌ಪಿ) ಅಡಿ ಪರವಾನಗಿ ಹೊಂದಿರುವ ಮಹಿಳಾ ಗುಂಪುಗಳು ಅಂಗನವಾಡಿ ಕೇಂದ್ರಗಳಲ್ಲಿನ ಫಲಾನುಭವಿಗಳಿಗೆ ಆಹಾರದ ಗುಣಮಟ್ಟ ಖಾತರಿಪಡಿಸಬೇಕು ಎಂದು ಹೇಳಲಾಗಿತ್ತು. ಆದರೆ, ಸದರಿ ಆದೇಶವನ್ನು ಯಾವುದೇ ಕಾರಣ ನೀಡದೇ 2021ರ ಮೇ 15ರಂದು ಸರ್ಕಾರ ಹಿಂಪಡೆದಿತ್ತು. ಅಲ್ಲದೇ, ಎಂಎಸ್‌ಪಿಟಿಸಿಗೆ ಬಿಐಎಸ್‌ ಖಾತರಿ ನೀಡಿರುವ ಗುಂಪುಗಳ ಜೊತೆ ಆಹಾರ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲು ನೀತಿ ಮತ್ತು ಚೌಕಟ್ಟನ್ನು ರೂಪಿಸಿ 2020ರ ಜುಲೈ 2ರಂದು ಸುತ್ತೋಲೆ ಹೊರಡಿಸಲಾಗಿತ್ತು. ಇದನ್ನೂ ಯಾವುದೇ ಕಾರಣ ನೀಡದೇ 2021ರ ಮೇ 20ರಂದು ಸರ್ಕಾರ ಹಿಂಪಡೆದಿತ್ತು. ಈ ಎರಡೂ ಹಿಂಪಡೆದ ಆದೇಶಗಳನ್ನು ನ್ಯಾಯಾಲಯ ವಜಾ ಮಾಡಿದೆ.

ಅದಾಗಲೇ ಹದಗೆಟ್ಟಿದ್ದ ಫಲಾನುಭವಿಗಳ ಪರಿಸ್ಥಿತಿಯು ಕೋವಿಡ್‌ನಿಂದಾಗಿ ಚಿಂತಾಕ್ರಾಂತವಾಗಿದೆ ಎಂದು ಪೀಠವು ಸರ್ಕಾರದ ಆಕ್ಷೇಪಾರ್ಹ ಆದೇಶಗಳನ್ನು ವಜಾ ಮಾಡುವಾಗ ಹೇಳಿದ್ದು, ಪರಿಷ್ಕೃತ ಪೌಷ್ಟಿಕಾಂಶಯುಕ್ತ ಮತ್ತು ಪೋಷಣೆ ನಿಯಮಗಳ ಅಡಿ ಯಾವುದೇ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸದೇ ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಮುಂದೆ ಐಸಿಡಿಎಸ್‌ ಯೋಜನೆ ಜಾರಿ ಮಾಡುವಾಗ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ, 2021ರ ಆಗಸ್ಟ್‌ 19ರ ತಾಂತ್ರಿಕ ಸಮಿತಿ ವರದಿ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದ್ದು, ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಮತ್ತು ವಕೀಲ ರೋಹನ್‌ ವೀರಣ್ಣ ತಿಗಾಡಿ ಅವರು “ಐಸಿಡಿಎಸ್‌ ಯೋಜನೆಯಡಿ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಸಲಾಗುತ್ತಿದೆ. ಮಕ್ಕಳು, ಗರ್ಭಿಣಿಯರು, ಎದೆ ಹಾಲು ಉಣಿಸುವ ತಾಯಂದಿರು ಸೇರಿದಂತೆ ಸುಮಾರು 50 ಲಕ್ಷ ಮಂದಿ ಐಸಿಡಿಎಸ್‌ ಫಲಾನುಭವಿಗಳಾಗಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಐಸಿಡಿಎಸ್‌ ಯೋಜನೆ ಜಾರಿಗಾಗಿ ಪೂರಕ ಪೌಷ್ಟಿಕಾಂಶ ತಯಾರಿ ಮಹಿಳಾ ತರಬೇತಿ ಕೇಂದ್ರಗಳನ್ನು (ಎಂಎಸ್‌ಪಿಟಿಸಿ) ರಚಿಸಲಾಗಿದೆ. ಆದರೆ, ಎಂಎಸ್‌ಪಿಟಿಸಿಗಳು ಫಲಾನುಭವಿಗಳಿಗೆ ಪೂರೈಸುವ ಆಹಾರ ಪದಾರ್ಥದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾಗಿವೆ” ಎಂದು ವಾದಿಸಿದ್ದರು.

Also Read
ಮಕ್ಕಳು, ಗರ್ಭಿಣಿಯರು, ತಾಯಂದಿರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ: ಸರ್ಕಾರದ ಆದೇಶಗಳಿಗೆ ತಡೆ ವಿಧಿಸಿದ ಹೈಕೋರ್ಟ್‌

“2018ರ ಫೆಬ್ರವರಿ 24ರ ಆದೇಶದಂತೆ ಎಂಎಸ್‌ಪಿಟಿಸಿಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂದಿರುವ ಸರ್ಕಾರದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಡೀ ಪ್ರಕರಣವನ್ನು ಪರಿಶೀಲಿಸಿ, ಮಕ್ಕಳು ಮತ್ತು ಗರ್ಭಿಣಿಯರ ಹಿತದೃಷ್ಟಿಯಿಂದ ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸುವ ನಿಟ್ಟಿನಲ್ಲಿ ಪರಿಹಾರ ಹುಡುಕುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶ ಮಾಡಿದೆ. ಈ ಕೆಲಸವನ್ನು ಮೂರು ತಿಂಗಳ ಒಳಗೆ ಮಾಡಬೇಕು ಎಂದು 2020ರ ಡಿಸೆಂಬರ್‌ 14ರ ಆದೇಶದಲ್ಲಿ ನ್ಯಾಯಾಲಯ ಹೇಳಿತ್ತು. ಹೀಗಾಗಿ, ರಾಜ್ಯ ಸರ್ಕಾರವು ಸಮಿತಿ ರಚಿಸಿತ್ತು. ಆ ಸಮಿತಿಯು ತಾಂತ್ರಿಕ ಸಮಿತಿ ರಚಿಸಿದ್ದು, ತಾಂತ್ರಿಕ ಸಮಿತಿಯು 2021ರ ಆಗಸ್ಟ್‌ 19ರಂದು ವರದಿ ಸಲ್ಲಿಸಿದೆ. ಈ ವರದಿಯನ್ನು ಇದುವರೆವಿಗೂ ಜಾರಿ ಮಾಡಲಾಗಿಲ್ಲ. ಸದರಿ ವರದಿಯನ್ನು ಜಾರಿಗೊಳಿಸಿದರೆ ಒಂದು ಹಂತಕ್ಕೆ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೂರೈಸುವ ಪೌಷ್ಟಿಕಾಂಶಯುಕ್ತ ಆಹಾರದ ಸಮಸ್ಯೆಯನ್ನು ಬಗೆಹರಿಸಬಹುದು” ಎಂದಿದ್ದರು.

Attachment
PDF
Sangeeta Gadagin and others V. State of Karnataka.pdf
Preview

Related Stories

No stories found.
Kannada Bar & Bench
kannada.barandbench.com