Stop Child Pornography
Stop Child Pornography

ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಅಪರಾಧವಲ್ಲ ಎಂದಿದ್ದ ಆದೇಶ ಹಿಂಪಡೆದ ಹೈಕೋರ್ಟ್‌; ತನಿಖೆಗೆ ಅನುಮತಿ

ನ್ಯಾಯಾಲಯ ನೀಡಿದ ಆದೇಶದಲ್ಲಿ ತಪ್ಪಿದೆ ಎಂದು ತಿಳಿದ ನಂತರ ಈ ತಪ್ಪನ್ನು ಮುಂದುವರಿಸುವುದು ವಿರೋಚಿತವಲ್ಲ ಎಂದು ನ್ಯಾಯಾಲಯ ಹೇಳಿದೆ.
Published on

ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ/ಚಿತ್ರ ವೀಕ್ಷಿಸಿದ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ಬಿ ಅಡಿ ಪ್ರಕರಣ ದಾಖಲಿಸಲಾಗದು ಎಂದು ಜುಲೈ 10ರಂದು ಮಾಡಿದ್ದ ತನ್ನ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಹಿಂಪಡೆದಿದೆ.

ಐಟಿ ಕಾಯಿದೆಯ ಸೆಕ್ಷನ್‌ 67ಬಿ (ಬಿ) ಅನ್ನು ಪರಿಗಣಿಸದೆ ಆದೇಶ ಮಾಡಲಾಗಿದ್ದು, ಇದು ತಪ್ಪಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಹಿಂದೆ ನೀಡಿದ್ದ ತನ್ನದೇ ಆದೇಶವನ್ನು ಹಿಂಪಡೆದಿದೆ.

ಅಶ್ಲೀಲ ವೆಬ್‌ಸೈಟ್‌ ವೀಕ್ಷಿಸುವುದು ಮಾಹಿತಿ ಪ್ರಸಾರ ಅಥವಾ ವರ್ಗಾವಣೆ ಮಾಡಿದಂತಾಗುವುದಿಲ್ಲ ಎಂದು ನ್ಯಾಯಾಲಯವು ಅರ್ಜಿದಾರ ಇನಾಯುತುಲ್ಲಾ ಎನ್‌ ವಿರುದ್ಧ ಪ್ರಕರಣ ರದ್ದುಪಡಿಸಿತ್ತು. ಐಟಿ ಕಾಯಿದೆ ಅಡಿ ಸೆಕ್ಷನ್‌ 67ಬಿ ಅಡಿ ಅಪರಾಧವಾಗಬೇಕಾದರೆ ಮಾಹಿತಿ ಪ್ರಸಾರ ಅಥವಾ ವರ್ಗಾವಣೆ ಮಾಡಬೇಕು ಎಂದು ಹೇಳಲಾಗಿದೆ.

ಆದೇಶ ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೆಮೊ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರು ಐಟಿ ಕಾಯಿದೆ ಸೆಕ್ಷನ್‌ 67ಬಿ (ಎ) ಆಧರಿಸಿ ಆದೇಶ ಮಾಡಲಾಗಿತ್ತು. ಅದಾಗ್ಯೂ, ಕಾಯಿದೆಯ ಸೆಕ್ಷನ್‌ 67ಬಿ (ಬಿ) ಅಡಿ ವಿದ್ಯುನ್ಮಾನ ಮಾದರಿಯಲ್ಲಿ ಮಕ್ಕಳನ್ನು ಅಶ್ಲೀಲ, ಲೈಂಗಿಕವಾಗಿ ಬಿಂಬಿಸುವ ಟೆಕ್ಸ್ಟ್‌ ಅಥವಾ ಡಿಜಿಟಲ್‌ ಇಮೇಜ್‌ಗಳನ್ನು ಕಳುಹಿಸುವುದು, ಕೇಳುವುದು, ಅದನ್ನು ಬ್ರೌಸ್‌ ಮಾಡುವುದು, ಡೌನ್‌ಲೋಡ್‌, ಜಾಹೀರಾತು, ಪ್ರಮೋಟ್‌, ಹಂಚಿಕೆ ಮಾಡುವುದು ಸೆಕ್ಷನ್‌ 67ಬಿ ಅಡಿ ಪ್ರಕ್ರಿಯೆಗೆ ನಾಂದಿ ಹಾಡಲಿದೆ ಎಂದಿದೆ.

“ಹಾಲಿ ಪ್ರಕರಣಕ್ಕೆ ಕಾಯಿದೆಯ ಸೆಕ್ಷನ್‌ 67ಬಿ ಯ ಉಪಸೆಕ್ಷನ್‌ ಬಿ ಅನ್ವಯಿಸುತ್ತದೆ. ಮುಂದಿನ ತನಿಖೆಗೆ ಅವಕಾಶ ನೀಡದೇ ಪ್ರಕ್ರಿಯೆ ರದ್ದುಪಡಿಸಿದ್ದು, ಐಟಿ ಕಾಯಿದೆ ಸೆಕ್ಷನ್‌ 67ಬಿ (ಬಿ) ಹಿನ್ನೆಲೆಯಲ್ಲಿ ನಿಸ್ಸಂಶಯವಾಗಿ ಅರ್ಜಿದಾರರ ವಿರುದ್ಧದ ಪ್ರಕ್ರಿಯೆ ವಜಾ ಮಾಡಿರುವುದನ್ನು ಹಿಂಪಡೆಯಲು ಸಕಾರಣವಿದೆ” ಎಂದು ಪೀಠ ಹೇಳಿದೆ.

ಒಮ್ಮೆ ಆದೇಶ ಮಾಡಿದ ಮೇಲೆ ಆದೇಶ ಹಿಂಪಡೆಯಲು ಅಥವಾ ಅದನ್ನು ಮರುಪರಿಶೀಲಿಸಿಲು ಸಿಆರ್‌ಪಿಸಿ ಸೆಕ್ಷನ್‌ 362 ಅಡಿ ಈ ನ್ಯಾಯಾಲಯಕ್ಕೆ ನಿರ್ಬಂಧವಿದೆ ಎಂಬ ಅರ್ಜಿದಾರರ ಪರ ವಕೀಲರ ವಾದ ತಿರಸ್ಕರಿಸಿದ ನ್ಯಾಯಾಲಯವು “ಸಿಆರ್‌ಪಿಸಿ ಸೆಕ್ಷನ್‌ 482 ಅನ್ನು ಸೆಕ್ಷನ್‌ 362 ನಿಯಂತ್ರಿಸಲಾಗದು. ಅಂತರ್ಗತವಾದ ಅಧಿಕಾರಗಳನ್ನು ಇತರೆ ನಿಬಂಧನೆಗಳು ನಿಯಂತ್ರಿಸಲಾಗದು” ಎಂದು ಹೇಳಿದೆ.

ಅಂತಿಮವಾಗಿ ಪೀಠವು “ನ್ಯಾಯಮೂರ್ತಿಗಳಾಗಿರುವ ನಾವು ಮನುಷ್ಯರು. ದೋಷಾತೀತತೆ ಎನ್ನುವುದು ಮನುಕುಲಕ್ಕೆ ತಿಳಿದಿಲ್ಲ. ನ್ಯಾಯಮೂರ್ತಿಗಳೂ ಸಹ ಮನುಷ್ಯರಾಗಿರುವುದರಿಂದ ಅವರೂ ದೋಷಾತೀತರಲ್ಲ. ದೋಷವು ನಾವು ನಿರ್ವಹಿಸುವ ಕಾರ್ಯಗಳ ಮೇಲೂ ಅವಲಂಬಿತವಾಗಿರುತ್ತದೆ. ಆದ್ದರಿಂದ, ಈ ನ್ಯಾಯಾಲಯ ನೀಡಿದ ಆದೇಶದಲ್ಲಿ ತಪ್ಪಿದೆ ಎಂದು ತಿಳಿದ ನಂತರವೂ ಈ ತಪ್ಪನ್ನು ಮುಂದುವರಿಸುವುದು ವಿರೋಚಿತವಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅಂತಿಮವಾಗಿ ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿಸಲು ಅನುಮತಿಸಿರುವ ನ್ಯಾಯಾಲಯವು ಪ್ರಕರಣ ರದ್ದುಪಡಿಸಿ ಹಿಂದೆ ಮಾಡಿದ್ದ ತನ್ನ ಆದೇಶವನ್ನು ಹಿಂಪಡೆದಿದೆ. 

Kannada Bar & Bench
kannada.barandbench.com