ಮಗು ಕೊಲೆ ಪ್ರಕರಣ: ಅಪರಾಧಿಗೆ ವಿಧಿಸಿದ್ದ ಆಜೀವ ಸೆರೆವಾಸವನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ ಹೈಕೋರ್ಟ್‌

ಯಾವುದೇ ವಿನಾಯಿತಿ ಇಲ್ಲದೇ ಮರಣದಂಡನೆಗೆ ಬದಲಾಗಿ ಆಜೀವ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮಾತ್ರ ಹೊಂದಿವೆ ಎಂದಿರುವ ವಿಭಾಗೀಯ ಪೀಠ.
Justice H P Sandesh & T Venkatesh Naik
Justice H P Sandesh & T Venkatesh Naik
Published on

ಆಜೀವ ಶಿಕ್ಷೆ ವಿಧಿಸುವ ಅಧಿಕಾರವನ್ನು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮಾತ್ರ ಹೊಂದಿವೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ.

ಮೂರೂವರೆ ವರ್ಷದ ಮಗುವನ್ನು ಕೊಲೆ ಮಾಡಿದ ಪ್ರಕರಣದಲ್ಲಿ ತನಗೆ ಆಜೀವ ಶಿಕ್ಷೆ ವಿಧಿಸಿದ ಶಿವಮೊಗ್ಗದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ರದ್ದು ಕೋರಿ ರುದ್ರೇಶ್‌ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್‌ ಪಿ ಸಂದೇಶ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠವು ಭಾಗಶಃ ಪುರಸ್ಕರಿಸಿದೆ.

ಯಾವುದೇ ವಿನಾಯಿತಿ ಇಲ್ಲದೇ ಮರಣದಂಡನೆಗೆ ಬದಲಾಗಿ ಆಜೀವ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮಾತ್ರ ಹೊಂದಿವೆ. ಆದರೆ, ಆ ಅಧಿಕಾರ ಸತ್ರ ನ್ಯಾಯಾಲಯಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಮಗುವನ್ನು ಕೊಂದಿರುವುದು ಸಾಕ್ಷ್ಯಧಾರಗಳ ಸಮೇತ ಸಾಬೀತಾದ ಕಾರಣಕ್ಕೆ ಕೊಲೆ ಮತ್ತು ಅಪಹರಣದ ಅಪರಾಧದಡಿ ರುದ್ರೇಶ್‌ನನ್ನು ದೋಷಿಯಾಗಿ ತೀರ್ಮಾನಿಸಿ 2017ರ ನವೆಂಬರ್‌ 27ರಂದು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಆದರೆ, ದೋಷಿಗೆ ಆಜೀವ ಶಿಕ್ಷೆ ವಿಧಿಸಿರುವ ಸತ್ರ ನ್ಯಾಯಾಲಯದ ಆದೇಶ ಮಾರ್ಪಡಿಸಿದೆ. ಆಜೀವ ಜೈಲು ಶಿಕ್ಷೆಗೆ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್‌ ಆದೇಶಿಸಿತು.

ಜೀವಾವಧಿ ಶಿಕ್ಷೆಯಾದರೆ 14 ವರ್ಷ ಜೈಲು ಶಿಕ್ಷೆ ಪೂರೈಸಿದ ನಂತರ ಸನ್ನಡತೆ ಆಧಾರದಲ್ಲಿ ಕೈದಿಯನ್ನು ಸರ್ಕಾರವು ಜೈಲಿನಿಂದ ಬಿಡುಗಡೆ ಮಾಡುವ ಅವಕಾಶವಿರುತ್ತದೆ. ಆಜೀವ ಶಿಕ್ಷೆಯಾದರೆ, ಯಾವುದೇ ವಿನಾಯಿತಿ ಇರುವುದಿಲ್ಲ.

ಪ್ರಕರಣದ ಹಿನ್ನೆಲೆ: ಶಿವಮೊಗ್ಗದ ಹೊಸಮನೆ ಗ್ರಾಮ ನಿವಾಸಿ ರುದ್ರೇಶ್‌, ಹೊಸನಗರದ ಮಠವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಗೀಡಾದ ಮಗುವಿನ ತಾಯಿ (ಪ್ರಕರಣದ ದೂರುದಾರೆ) ಮಠದ ಭಕ್ತೆಯಾಗಿದ್ದರು. ನಿಯಮಿತವಾಗಿ ಮಠಕ್ಕೆ ಭೇಟಿ ನೀಡುತ್ತಿದ್ದರು. ಮಠದ ವ್ಯವಹಾರಗಳಲ್ಲಿ ರುದ್ರೇಶ್‌ಗೆ ದೂರುದಾರೆ ಮತ್ತು ಆಕೆಯ ತಾಯಿ ಸಲಹೆ ನೀಡುತ್ತಿದ್ದರು. ಇದೇ ವಿಚಾರವಾಗಿ ದೂರುದಾರೆಯ ಬಗ್ಗೆ ರುದ್ರೇಶ್‌ ದ್ವೇಷ ಬೆಳೆಸಿಕೊಂಡಿದ್ದರು.

2017ರ ಏಪ್ರಿಲ್‌ 10ರಂದು ಮಠದ ಕಾರ್ಯಕ್ರಮವೊಂದರಲ್ಲಿ ದೂರುದಾರೆ ತನ್ನ ಮೂರೂವರೆ ವರ್ಷದ ಗಂಡು ಮಗು ಮತ್ತು ಕುಟುಂಬದ ಸದಸ್ಯರೊಂದಿಗೆ ಭಾಗಿಯಾಗಿದ್ದರು. ಅಂದು ರಾತ್ರಿ ಮಠದಲ್ಲೇ ಊಟ ಸೇವಿಸಿ ಮಲಗಿದ್ದರು. ಬೆಳಗ್ಗೆ 5.30ಕ್ಕೆ ಎಚ್ಚರಗೊಂಡಾಗ ಮಗು ಪಕ್ಕದಲ್ಲಿ ಇರಲಿಲ್ಲ. ನಂತರ ಮಗು ಶವವಾಗಿ ಪತ್ತೆಯಾಗಿತ್ತು. ಈ ಕುರಿತು ಹೊಸನಗರ ಠಾಣಾ ಪೊಲೀಸರು ತನಿಖೆ ನಡೆಸಿದಾಗ, ಮಗುವನ್ನು ರುದ್ರೇಶ್‌ ಅಪಹರಿಸಿ ಕೊಲೆ ಮಾಡಿದ್ದ ಕೃತ್ಯ ಬಯಲಾಗಿತ್ತು.

ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ರುದ್ರೇಶ್‌ನನ್ನು ದೋಷಿಯಾಗಿ 2017ರಂದು ನವೆಂಬರ್‌ 27ರಂದು ತೀರ್ಮಾನಿಸಿದ್ದ ಸತ್ರ ನ್ಯಾಯಾಲಯವು ಆಜೀವ ಶಿಕ್ಷೆ ವಿಧಿಸಿ ನವೆಂಬರ್‌ 30ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಅಪರಾಧಿಯು ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದ.

Attachment
PDF
Rudresh Vs State of Karnataka
Preview
Kannada Bar & Bench
kannada.barandbench.com