ನಿರ್ಮಾಪಕ ಎಂ ಎನ್‌ ಸುರೇಶ್‌ ವಿರುದ್ಧ ನಟ ಸುದೀಪ್‌ ಹೂಡಿದ್ದ ಮಾನಹಾನಿ ಪ್ರಕರಣ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್‌

ದೂರು ಮತ್ತು ಸ್ವಯಂಪ್ರೇರಿತ ಹೇಳಿಕೆಯಲ್ಲಿ ಅರ್ಜಿದಾರರ ವಿರುದ್ಧ ನಿರ್ದಿಷ್ಟ ಆರೋಪಗಳಿದ್ದು, ದೂರುದಾರರ ಪ್ರಕಾರ ಅವರಿಗೆ ಮಾನಹಾನಿ ಉಂಟು ಮಾಡಿದ್ದು, ಸಮಾಜದಲ್ಲಿ ಅವರ ವರ್ಚಸ್ಸಿಗೆ ಹಾನಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದ ನ್ಯಾಯಾಲಯ.
Actor Sudeep and Karnataka HC
Actor Sudeep and Karnataka HC

ನಟ ಸುದೀಪ್‌ ಅವರು ನಿರ್ಮಾಪಕ ಎಂ ಎನ್‌ ಸುರೇಶ್‌ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಐಪಿಸಿ ಸೆಕ್ಷನ್‌ 499 ಮತ್ತು 500ರ ಅಡಿ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣ ರದ್ದುಪಡಿಸುವಂತೆ ಕೋರಿ ಸುರೇಶ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿದೆ.

“ದೂರು ಮತ್ತು ಸ್ವಯಂಪ್ರೇರಿತ ಹೇಳಿಕೆಯಲ್ಲಿ ಅರ್ಜಿದಾರರ ವಿರುದ್ಧ ನಿರ್ದಿಷ್ಟ ಆರೋಪಗಳಿದ್ದು, ದೂರುದಾರರ ಪ್ರಕಾರ ಅವು ಸುದೀಪ್‌ ಅವರಿಗೆ ಮಾನಹಾನಿ ಉಂಟು ಮಾಡಿದ್ದು, ಸಮಾಜದಲ್ಲಿ ಅವರ ವರ್ಚಸ್ಸಿಗೆ ಹಾನಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಸಮನ್ಸ್‌ ಜಾರಿ ಮಾಡಿರುವುದರಲ್ಲಿ ಕಾನೂನುಬಾಹಿರ ನಡೆ ಕಾಣುತ್ತಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬಹುದು ಎಂಬುದು ವಿಚಾರಣಾಧೀನ ನ್ಯಾಯಾಲಯಕ್ಕೆ ಮೇಲ್ನೋಟಕ್ಕೆ ಅನಿಸಿದ ಕಾರಣ ಇಬ್ಬರೂ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿದೆ. ಸಮನ್ಸ್‌ ಪಡೆದ ಬಳಿಕ ಅರ್ಜಿದಾರ ಸುರೇಶ್‌ ಅವರು ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದಾರೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿರುವುದರಲ್ಲಿ ಕಾನೂನುಬಾಹಿರ ನಡೆ ಕಾಣುತ್ತಿಲ್ಲ” ಎಂದು ಹೇಳಿದೆ.

ಸುದೀಪ್‌ ಪರವಾಗಿ ವಾದಿಸಿದ ರಂಗಸ್ವಾಮಿ ಅವರು “ಸುರೇಶ್‌ ಅವರು ಮಾಧ್ಯಮಗೋಷ್ಠಿ ನಡೆಸುವ ಮೂಲಕ ಸುದೀಪ್‌ ಅವರಿಗೆ ಮಾನಹಾನಿ ಮಾಡಿದ್ದಾರೆ. ಸುರೇಶ್‌ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸ್ನೇಹಿತರು ಮತ್ತು ಬಂಧು-ಬಾಂಧವರು ಸುದೀಪ್‌ ಅವರಿಗೆ ಕರೆ ಮಾಡಿ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ವಿಚಾರಿಸಿದ್ದಾರೆ. ಇದು ಸಮಾಜದಲ್ಲಿ ಅವರ ಘನತೆಗೆ ಚ್ಯುತಿ ಉಂಟು ಮಾಡಿದೆ. ಆರೋಪಿಗಳಾದ ಎನ್‌ ಎಂ ಸುರೇಶ್‌ ಮತ್ತು ಎನ್‌ ಎಂ ಕುಮಾರ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್‌ ಹಾಕಿದ್ದು, ಸುದೀಪ್‌ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ” ಎಂದು ಆಕ್ಷೇಪಿಸಿದ್ದರು.

Also Read
ನಿರ್ಮಾಪಕರಾದ ಕುಮಾರ್‌, ಸುರೇಶ್‌ ವಿರುದ್ಧ ಕ್ರಿಮಿನಲ್‌ ಮಾನಹಾನಿ ದಾವೆ ದಾಖಲಿಸಲು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶ

ಸುರೇಶ್‌ ಪರ ವಕೀಲೆ ಎ ಎಲ್‌ ಪ್ರಶಾಂತಿ ಅವರು “ಸುದೀಪ್‌ ಮತ್ತು ಎನ್‌ ಎಂ ಕುಮಾರ್‌ ನಡುವೆ ವಿವಾದವಿದ್ದು, ಸುರೇಶ್‌ ಅವರು ಕನ್ನಡ ಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎಂಬ ಕಾರಣಕ್ಕೆ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರ ವಿರುದ್ಧ ಯಾವುದೇ ದಾಖಲೆಗಳು ಇಲ್ಲ. ಇದನ್ನು ಪರಿಶೀಲಿಸದೇ ಸಮನ್ಸ್‌ ಜಾರಿ ಮಾಡುವ ಮೂಲಕ ವಿಚಾರಣಾಧೀನ ನ್ಯಾಯಾಲಯ ಪ್ರಮಾದ ಎಸಗಿದೆ” ಎಂದು ವಾದಿಸಿದ್ದರು.

ಆರೋಪಿಗಳಾಗಿರುವ ಎಂ ಎನ್‌ ಕುಮಾರ್‌ ಮತ್ತು ಎಂ ಎನ್‌ ಸುರೇಶ್‌ ಅವರು ಮಾನಹಾನಿ ಹೇಳಿಕೆ ಮತ್ತು ಸುಳ್ಳು ಆರೋಪ ಮಾಡಿದ್ದಾರೆ ಎಂದು ನಟ ಸುದೀಪ್‌ ಖಾಸಗಿ ದೂರು ದಾಖಲಿಸಿದ್ದರು. ಇದರ ಸಂಜ್ಞೇ ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು 2023ರ ಆಗಸ್ಟ್‌ನಲ್ಲಿ ಪ್ರಕರಣ ದಾಖಲಿಸಲು ಆದೇಶಿಸಿತ್ತು.

Attachment
PDF
N M Suresh Vs Sudeep.pdf
Preview

Related Stories

No stories found.
Kannada Bar & Bench
kannada.barandbench.com