ಶಾಸಕ ವಿನಯ್‌ ಕುಲಕರ್ಣಿ ಆಪ್ತ ಸೋಮಶೇಖರ್ ನ್ಯಾಮಗೌಡರ್ ವಿರುದ್ಧದ ಪ್ರಕರಣ ವಜಾ ಮಾಡಲು ಹೈಕೋರ್ಟ್‌ ನಕಾರ‌

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ನ್ಯಾಮಗೌಡರ್ ವಿರುದ್ಧದ ಪ್ರಕರಣ ಕೈ ಬಿಡುವುದಕ್ಕೆ ನಿರಾಕರಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನ್ಯಾಮಗೌಡರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
Justice M Nagaprasanna and Karnataka HC's Dharwad Bench
Justice M Nagaprasanna and Karnataka HC's Dharwad Bench

“ಸರ್ಕಾರಿ ಅಧಿಕಾರಿಯಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ರಕ್ಷಣೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ತಿಳಿಸಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ ಸೋಮಶೇಖರ್ ನ್ಯಾಮಗೌಡರ್ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ನ್ಯಾಮಗೌಡರ್ ತಮ್ಮ ವಿರುದ್ಧದ ಪ್ರಕರಣ ಕೈ ಬಿಡುವುದಕ್ಕೆ ನಿರಾಕರಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿ ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೀಠವು ಮೇಲ್ನೋಟಕ್ಕೆ ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಿದೆ. ಜೊತೆಗೆ, ಯೋಗೇಶ್ ಗೌಡ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳು ರೂಪಿಸಿರುವ ಸಂಚಿನ ಕುರಿತು ಅರ್ಜಿದಾರರಿಗೆ ಅರಿವಿತ್ತು ಎಂದು ವಿಶೇಷ ನ್ಯಾಯಾಲಯ ತಿಳಿಸಿದೆ. ಜೊತೆಗೆ, ಶ್ರೀನಿವಾಸ ರೆಡ್ಡಿ ಮತ್ತು ರಾಕೇಶ್ ಶರ್ಮಾ ಮತ್ತಿತರರು ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವಂತೆ, ಸರ್ಕಾರಿ ನೌಕರರಿಗಿರುವ ರಕ್ಷಣೆಯನ್ನು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವವರ ನೆರವಿಗೆ ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಅಲ್ಲದೇ, ಸುಳ್ಳು ಪ್ರವಾಸ ಕಾರ್ಯಕ್ರಮವನ್ನು ಸಿದ್ದಪಡಿಸಿರುವುದು ಯೋಗೇಶ್ ಗೌಡರ್‌ ಕೊಲೆಗೆ ಸಂಚು ರೂಪಿಸಿರುವ ಭಾಗವಾಗಿದೆ. ಎಲ್ಲವನ್ನೂ ಪ್ರಮುಖ ಆರೋಪಿ ವಿನಯ್ ಕುಲಕರ್ಣಿ ಸೂಚನೆಯಂತೆ ನಡೆಸಲಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಜೊತೆಗೆ ಯೋಗೇಶ್‌ ಗೌಡ ಅವರ ಕೊಲೆ ಸಂದರ್ಭದಲ್ಲಿ ಸಚಿವರು ದೆಹಲಿಯಲ್ಲಿದ್ದರೂ ಎಂಬುದಾಗಿ ಹೇಳಿಕೊಳ್ಳುವುದಕ್ಕಾಗಿ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದ ನ್ಯಾಮಗೌಡ ಅವರು 2016ರ ಜೂನ್ 12ರಂದು ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರಿಗೆ ಸುಳ್ಳು ಪ್ರವಾಸ ಕಾರ್ಯಕ್ರಮವನ್ನು ಸೃಷ್ಟಿಸಿದ್ದರು. ಜೊತೆಗೆ ಅದೇ ದಿನ ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗುವುದಕ್ಕಾಗಿ ತೆರಳುತ್ತಿರುವುದಾಗಿ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು ಎಂದು ಸಿಬಿಐ ಆರೋಪಿಸಿತ್ತು.

ಆದರೆ, ಸಭೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಿಗೆ ಯಾವುದೇ ಮನವಿಯನ್ನು ರವಾನಿಸಿರಲಿಲ್ಲ. ಅದೇ ಸಂದರ್ಭದಲ್ಲಿ ಕೇಂದ್ರ ಸಚಿವರು ರಾಷ್ಟ್ರಮಟ್ಟದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಅಲಾಹಾಬಾದ್‌ಗೆ ತೆರಳಿದ್ದರು ಎಂದು ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.

ಪ್ರಕರಣದಲ್ಲಿ ಅರ್ಜಿದಾರರು ಸಾರ್ವಜನಿಕ ಸೇವಕನಾಗಿ, ತನ್ನ ಸ್ಥಾನ ದುರುಪಯೋಗಪಡಿಸಿಕೊಂಡಿದ್ದಾರೆ. ಆದ್ದರಿಂದ, ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಕರ್ತವ್ಯಗಳು ಅಧಿಕೃತ ಎಂಬ ಅಂಶ ಕಂಡು ಬಂದಲ್ಲಿ ಅವರನ್ನು ವಿಚಾರಣೆಯಿಂದ ಕೈಬಿಡಬಹುದು. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ವಿಚಾರಣೆ ಮುಂದುವರೆಸಬಹುದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ವಿರುದ್ಧದ ಆರೋಪಗಳು ಸಚಿವರಾಗಿದ್ದ ವಿನಯ್ ಕುಲಕರ್ಣಿ ಅವರ ಅಧಿಕೃತ ಕರ್ತವ್ಯದಲ್ಲಿ ಇದ್ದು ನಿರ್ವಹಿಸಿರುವ ಕೆಲಸಗಳಾಗಿವೆ. ಆದರೆ, ಸರ್ಕಾರಿ ಅಧಿಕಾರಿಯಾಗಿರುವುದರಿಂದ ತಮ್ಮ ವಿರುದ್ಧ ಸಕ್ಷಮ ಪ್ರಾಧಿಕಾರ ಪ್ರಾಧಿಕಾರದ ಅನುಮತಿ ಪಡೆಯದ ವಿಚಾಣೆಗೆ ಪರಿಗಣಿಸಿದ್ದು, ಪ್ರಕರಣ ರದ್ದು ಮಾಡಬೇಕು ಎಂದು ಕೋರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ವಿರುದ್ಧದ ಆರೋಪಗಳು ಸಚಿವನಾಗಿದ್ದ ವಿನಯ್ ಕುಲಕರ್ಣಿ ಅವರ ಅಧಿಕೃತ ಕರ್ತವ್ಯದಲ್ಲಿದ್ದು, ನಿರ್ವಹಿಸಿರುವ ಕೆಲಸಗಳಾಗಿವೆ. ಆದರೆ, ಸರ್ಕಾರಿ ಅಧಿಕಾರಿಯಾಗಿರುವುದರಿಂದ ತಮ್ಮ ವಿರುದ್ಧ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ವಿಚಾರಣೆಗೆ ಪರಿಗಣಿಸಿದ್ದು, ಪ್ರಕರಣ ರದ್ದು ಮಾಡಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com