

ಪತ್ನಿಗೆ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಲ್ಲಿ ಪತಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವೊಂದನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
ಬೆಂಗಳೂರಿನ ಆರ್ ಟಿ ನಗರದ ಎಂ ಆರ್ ಪಾಳ್ಯ ನಿವಾಸಿ ಎಸ್ ಮಣಿಗಂಡನ್ ತನ್ನ ವಿರುದ್ಧ ನಗರದ 7ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
ಅರ್ಜಿದಾರರ ಪರ ವಕೀಲರು “ಮಣಿಗಂಡನ್ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರಿಬ್ಬರೂ 15 ವರ್ಷ ಒಟ್ಟಾಗಿ ಜೀವನ ನಡೆಸಿದ್ದಾರೆ. ಇಬ್ಬರು ಮಕ್ಕಳೂ ಇದ್ದಾರೆ. ಆದ್ದರಿಂದ, ಪ್ರಕರಣ ರದ್ದುಗೊಳಿಸಬೇಕು” ಎಂದು ಕೋರಿದ್ದರು.
ಇದನ್ನು ತಳ್ಳಿ ಹಾಕಿರುವ ಪೀಠ “ದಂಪತಿ ಒಟ್ಟಾಗಿ 15 ವರ್ಷ ವೈವಾಹಿಕ ಜೀವನ ನಡೆಸಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ಎಂಬುದು ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸುವುದಕ್ಕೆ ಸಕಾರಣವಾಗುವುದಿಲ್ಲ. ಆರೋಪ ಪಟ್ಟಿಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ಮುಂದುವರೆಸಲು ಸಾಕಷ್ಟು ಪ್ರಾಥಮಿಕ ಸಾಕ್ಷ್ಯಾಧಾರಗಳಿವೆ. ಆದ್ದರಿಂದ, ನ್ಯಾಯಿಕ ವಿಚಾರಣೆ ಎದುರಿಸುವುದು ಅನಿವಾರ್ಯ” ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಬಿ ಎ ವರ್ಷಾ ಅವರನ್ನು ಮಣಿಗಂಡನ್ 2011ರ ಜೂನ್ 26ರಂದು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2022ರಲ್ಲಿ ಪತಿ–ಪತ್ನಿ ನಡುವೆ ಉಂಟಾದ ಕಲಹದ ಹಿನ್ನೆಲೆಯಲ್ಲಿ ಮಣಗಂಡನ್ ಮನೆ ಬಿಟ್ಟು ಹೋಗಿದ್ದರು. ಬಳಿಕ ಹಿರಿಯರ ಮನವೊಲಿಕೆಯಿಂದ ಪುನಾ ಮನೆಗೆ ಮರಳಿದ್ದರು.
2025ರ ಅಕ್ಟೋಬರ್ 18ರಂದು ಮನೆಗೆ ಬಣ್ಣ ಬಳಿಯುವ ವಿಷಯದಲ್ಲಿ ದಂಪತಿ ನಡುವೆ ಗಲಾಟೆ ತಲೆದೋರಿತ್ತು. ಈ ವೇಳೆ ಮಣಿಗಂಡನ್ ಪತ್ನಿಯನ್ನು ಮಕ್ಕಳ ಎದುರಿನಲ್ಲಿ ದೈಹಿಕ ಹಲ್ಲೆ ನಡೆಸಿ ಮನೆ ಬಿಟ್ಟು ಹೋಗುವಂತೆ ಕೂಗಾಡಿದ್ದರು. ಈ ಘಟನೆ ಬಳಿಕ ತಕ್ಷಣ ಕೊಠಡಿಗೆ ಹೋಗಿದ್ದ ಪತ್ನಿ ಒಳಗಿನಿಂದ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಘಟನೆಗೆ ಸಂಬಂಧಿಸಿ ವರ್ಷಾಳ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಮಣಿಗಂಡನ್ ವಿರುದ್ಧ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 85 (ವಿವಾಹಿತ ಮಹಿಳೆ ಮೇಲೆ ಪತಿ ಅಥವಾ ಆತನ ಬಂಧುಗಳಿಂದ ಕ್ರೌರ್ಯ) ಹಾಗೂ ಸೆಕ್ಷನ್ 108ರ (ಆತ್ಮಹತ್ಯೆಗೆ ಪ್ರೇರಣೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಮಣಿಗಂಡನ್ ಹೈಕೋರ್ಟ್ ಮೆಟ್ಟಿಲೇರಿದ್ದರು.