ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಿಂದ ಬಿದ್ದು ಪತ್ನಿ ಸಾವನ್ನಪ್ಪಿರುವ ಸಂಬಂಧ ಪತಿಯ ವಿರುದ್ಧ ಸಲ್ಲಿಸಲಾಗಿರುವ ಪ್ರಕರಣವೊಂದರಲ್ಲಿ ಆತನ ವಿರುದ್ಧದ ಆರೋಪ ಪಟ್ಟಿ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಠಾಣೆಯ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿ ಯಶವಂತಪುರ ನಿವಾಸಿ ದೇವೇಂದ್ರ ಭಾಟಿಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
“ಅರ್ಜಿದಾರರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ಕಂಡುಬಂದಿದೆ. ಹೀಗಾಗಿ, ಆರೋಪಿಗೆ ರಕ್ಷಣೆ ನೀಡುವ ಪ್ರಮೇಯ ಉದ್ಭವಿಸುವುದಿಲ್ಲ” ಎಂಬ ಪೀಠ ಅಭಿಪ್ರಾಯಪಟ್ಟಿದೆ.
ದೇವೇಂದ್ರ ಭಾಟಿಯಾ ಅವರು 2018ರಲ್ಲಿ ತಮ್ಮ ಪತ್ನಿಯನ್ನು ಮನೆಯ 16ನೇ ಮಹಡಿಯಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ದೇವೇಂದ್ರ ಅವರ ಪುತ್ರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಕೊಲೆ ಮತ್ತು ಕೌಟುಂಬಿಕ ದೌರ್ಜನ್ಯ ಕಾಯಿದೆ ಅಡಿ ದೇವೇಂದ್ರ ವಿರುದ್ಧ ಸತ್ರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.