ಶಾಸಕ ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಕಾರ

“ವಿಸ್ತೃತ ತನಿಖೆಯಿಂದ ಮಾತ್ರವೇ ಗೋಪಾಲಕೃಷ್ಣ ವಿರುದ್ಧ ದೂರುದಾರ ವಿಶ್ವನಾಥ್‌ ಮಾಡಿರುವ ಆರೋಪಗಳ ಸತ್ಯಾಂಶ ಹೊರಬರಲು ಸಾಧ್ಯ. ಈ ಹಂತದಲ್ಲಿ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಲು ಸಾಧ್ಯವಿಲ್ಲ” ಎಂದಿರುವ ನ್ಯಾಯಾಲಯ.
MLA S R Vishwanath and Karnataka HC
MLA S R Vishwanath and Karnataka HC
Published on

ಬೆಂಗಳೂರಿನ ಯಲಹಂಕ ಶಾಸಕ ಎಸ್‌ ಆರ್ ವಿಶ್ವನಾಥ್‌ ಅವರಿಗೆ ಕೊಲೆ ಬೆದೆರಿಕೆ ಹಾಕಿದ ಆರೋಪಕ್ಕೆ ಸಂಬಂಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಪ್ರಕರಣದ ಮೊದಲನೇ ಆರೋಪಿಯಾದ ಹೆಸರಘಟ್ಟ ಹೋಬಳಿಯ ಮುತ್ತುಗದಹಳ್ಳಿಯ ಎಂ ಎನ್‌ ಗೋಪಾಲಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಮೇಲ್ನೋಟಕ್ಕೆ ಆರೋಪಿಯ ವಿರುದ್ಧದ ಆಪಾದನೆಗಳಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ ಎಂಬುದು ಕಂಡು ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಕರಣದ ತನಿಖಾಧಿಕಾರಿಯು ಪೆನ್ ಡ್ರೈವ್, ಪತ್ರ ಸೇರಿದಂತೆ ಅಮೂಲ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂಬುದು ಗಮನಾರ್ಹ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

“ವಿಸ್ತೃತ ತನಿಖೆಯಿಂದ ಮಾತ್ರವೇ ಗೋಪಾಲಕೃಷ್ಣ ವಿರುದ್ಧ ದೂರುದಾರ ವಿಶ್ವನಾಥ್‌ ಮಾಡಿರುವ ಆರೋಪಗಳ ಸತ್ಯಾಂಶ ಹೊರಬರಲು ಸಾಧ್ಯ. ಹೀಗಾಗಿ, ಈ ಹಂತದಲ್ಲಿ ಗೋಪಾಲಕೃಷ್ಣ ವಿರುದ್ಧದ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಎಂ ಎನ್‌ ಗೋಪಾಲಕೃಷ್ಣ ಹಾಗೂ ಮತ್ತೊಬ್ಬ ವ್ಯಕ್ತಿಯು ಶಾಸಕ ಎಸ್‌ ಆರ್‌ ವಿಶ್ವನಾಥ್‌ ಅವರನ್ನು ಮುಗಿಸುವುದಾಗಿ ಸಂಭಾಷಣೆ ನಡೆಸಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದನ್ನು ಆಧರಿಸಿ ವಿಶ್ವನಾಥ್‌ 2021ರ ಡಿಸೆಂಬರ್ 1ರಂದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 120ಬಿ ಮತ್ತು 506ರ ಅಡಿಯಲ್ಲಿ ದೂರು ದಾಖಲಿಸಿದ್ದರು.

ದೂರು ಸಲ್ಲಿಸಿದ ದಿನವೇ ಶಾಸಕರ ಕಚೇರಿಗೆ ಲಕೋಟೆಯೊಂದು ಬಂದಿತ್ತು. ಅದರಲ್ಲಿ ಪೆನ್‌ ಡ್ರೈವ್ ಹಾಗೂ ಬೆದರಿಕೆ ಪತ್ರವಿತ್ತು. ಪೊಲೀಸರು ಇದನ್ನು ವಶಕ್ಕೆ ಪಡೆದಿದ್ದರು. ತಮ್ಮ ವಿರುದ್ಧದ ದೂರನ್ನು ರದ್ದುಗೊಳಿಸುವಂತೆ ಕೋರಿ ಗೋಪಾಲಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.

Also Read
ಬಿಡಿಎ ಅಧ್ಯಕ್ಷ, ಶಾಸಕ ವಿಶ್ವನಾಥ್‌ ವಿರುದ್ಧದ ಲಾಭದಾಯಕ ಹುದ್ದೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಅರ್ಜಿ ವಿಚಾರಣೆ ನಡೆಸಿದ್ದ ಪೀಠವು ತಾಂತ್ರಿಕ ಕಾರಣಗಳಿಂದಾಗಿ ದೂರು ಸಲ್ಲಿಸಿರುವ ಪ್ರಕ್ರಿಯೆ ಸರಿಯಾಗಿಲ್ಲ. ಹೀಗಾಗಿ, ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ. ಆದರೆ, ಅರ್ಜಿದಾರರು ಹೊಸದಾಗಿ ದೂರು ಸಲ್ಲಿಸಲು ಸ್ವತಂತ್ರರು ಎಂದು ಆದೇಶಿಸಿತ್ತು.

ಈ ಆದೇಶ ಹೊರಬಂದ ನಂತರ ವಿಶ್ವನಾಥ್‌ ಅವರು ಗೋಪಾಲಕೃಷ್ಣ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಬಗ್ಗೆ ವಿಚಾರಣೆ ನಡೆಸಿದ್ದ ವಿಚಾರಣಾಧೀನ ನ್ಯಾಯಾಲಯವು ಆರೋಪಿ ವಿರುದ್ಧ ತನಿಖೆ ನಡೆಸುವಂತೆ ರಾಜಾನುಕುಂಟೆ ಪೊಲೀಸರಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಗೋಪಾಲಕೃಷ್ಣ ಅವರು ತನಿಖೆಗೆ ತಡೆ ನೀಡಬೇಕು ಮತ್ತು ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com