ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿನ (ಬಿಟಿಸಿ) ಕುದುರೆ ರೇಸ್ ಬೆಟ್ಟಿಂಗ್‌ನಲ್ಲಿ ಭಾಗಿಯಾದ ಆರೋಪದಲ್ಲಿ 26 ಸಂಸ್ಥೆಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಈಚೆಗೆ ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ಸೂರ್ಯ ಅಂಡ್ ಕಂಪೆನಿ ಮತ್ತಿತರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ವಜಾ ಮಾಡಿದೆ.
“ಎಫ್‌ಐಆರ್‌ನಲ್ಲಿನ ಆರೋಪ ಮತ್ತು ತನಿಖಾಧಿಕಾರಿ ಸಂಗ್ರಹಿಸಿರುವ ಅಂಶಗಳು ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ಸಂಜ್ಞೇ ಸ್ವೀಕರಿಸಬಹುದಾದ ಅಪರಾಧವಿದೆ. ಹೈಕೋರ್ಟ್ ಮಧ್ಯಂತರ ಆದೇಶ ಮಾಡುವ ಮೂಲಕ ತನಿಖೆಗೆ ತಡೆ ನೀಡಿದೆ. ಆರೋಪಿಗಳ ವಿರುದ್ಧದ ಆರೋಪವು ಗಂಭೀರ ಸ್ವರೂಪದಿಂದ ಕೂಡಿದ್ದು, ಜಿಎಸ್‌ಟಿ ಮತ್ತು ಟಿಡಿಎಸ್ ಮೂಲಕ ಸ್ವೀಕರಿಸಿದ ಕೋಟ್ಯಂತರ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಅರ್ಜಿದಾರರು “ಪರವಾನಗಿ ಹೊಂದಿರುವ ಬುಕ್ಕಿಗಳಾಗಿದ್ದು, ಜೂಜುಕೋರರಿಂದ ಬೆಟ್ಟಿಂಗ್ ಹಣ ಸ್ವೀಕರಿಸುವ ಅಧಿಕಾರವಿದೆ. ತೆರಿಗೆ ಉಲ್ಲಂಘನೆ ಕಂಡುಬಂದರೆ ಜಿಎಸ್‌ಟಿ ಪ್ರಾಧಿಕಾರ ಮಾತ್ರ ಪ್ರಕರಣದ ತನಿಖೆ ನಡೆಸಬಹುದಾಗಿದೆ. ಅಲ್ಲದೇ, ಸಿಸಿಬಿಯು ಪೊಲೀಸ್ ಠಾಣೆಯಲ್ಲ. ಹೀಗಾಗಿ, ಸಿಸಿಬಿ ತನಿಖೆ ನಡೆಸಲಾಗದು” ಎಂದು ಆಕ್ಷೇಪಿಸಿದ್ದರು.
ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಮತ್ತು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಅನುಮತಿ ಇಲ್ಲದೇ ಬುಕ್ಕಿಗಳು ಕಾರ್ಯನಿರ್ವಹಿಸುತ್ತಿದ್ದರೆ ಅವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆ ಅನ್ವಯಿಸಬಹುದಾಗಿದೆ” ಎಂದರು.
ಜೂಜುಕೋರರ ಪರ ವಕೀಲರು “ಬುಕ್ಕಿಗಳು ಶೇ. 25ರಷ್ಟು ಜಿಎಸ್‌ಟಿ ಸಂಗ್ರಹಿಸಿದ್ದು, ಔಪಚಾರಿಕವಾಗಿ ಬೆಟ್ಟಿಂಗ್ ಪಡೆದಿರುವುದಕ್ಕೆ ಯಾವುದೇ ರಶೀದಿ ನೀಡಿಲ್ಲ” ಎಂದು ವಾದಿಸಿದ್ದರು.
ಪ್ರಕರಣ ಹಿನ್ನೆಲೆ: ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ 2024ರ ಜನವರಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ಕೇಂದ್ರೀಯ ಅಪರಾಧ ದಳವು (ಸಿಸಿಬಿ) ತನಿಖೆ ಮಾಡುತ್ತಿದೆ. ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್ 78(1)(ಎ)(ಐ), ಕರ್ನಾಟಕ ರೇಸ್ ಬೆಟ್ಟಿಂಗ್ ಕಾಯಿದೆ ಸೆಕ್ಷನ್ 12, ಐಪಿಸಿ 420 ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು 3.45 ಕೋಟಿ ಜಪ್ತಿ ಮಾಡಿದ್ದರು.