ರಾಜಕೀಯ ಅಧಿಕಾರಸ್ಥರು ಭೂ ಕಬಳಿಕೆ ಮಾಡುವುದು ಆಡಳಿತದ ಮೇಲಿನ ನಂಬಿಕೆ ಸರ್ವನಾಶಕ್ಕೆ ಹಾದಿ: ಹೈಕೋರ್ಟ್‌

ಚಿಂತಾಮಣಿ ತಾಲ್ಲೂಕು ಕನ್ನಂಪಲಿ ಗ್ರಾಮದ ಸರ್ವೇ ನಂಬರ್‌ 11ರಲ್ಲಿನ 1.19 ಗುಂಟೆ  ಖರಾಬು ಜಮೀನನ್ನು ಚೌಡರೆಡ್ಡಿ‌ ಅವರು ಒತ್ತುವರಿ ಮಾಡಿ‌ ಬಾಲಾಜಿ ರೆಡ್ಡಿ ಇವರಿಗೆ ನಿಯಮಬಾಹಿರವಾಗಿ ಖಾತೆ ಮಾಡಿಸಿಕೊಡಲಾಗಿದೆ ಎಂದು ಆರೋಪಿಸಲಾಗಿದೆ.
Justice M Nagaprasanna and Karnataka HC
Justice M Nagaprasanna and Karnataka HC
Published on

“ರಾಜಕೀಯ ಅಧಿಕಾರಸ್ಥರು ಭೂ ಕಬಳಿಕೆ ಮಾಡುವುದು ಆಡಳಿತದ ಮೇಲಿನ ಸಾರ್ವಜನಿಕ ನಂಬಿಕೆಯನ್ನೇ ಸರ್ವನಾಶ ಮಾಡುತ್ತದೆ” ಎಂದಿರುವ ಕರ್ನಾಟಕ ಹೈಕೋರ್ಟ್‌, ಚಿಂತಾಮಣಿ ಶಾಸಕರೂ ಆದ ಮಾಜಿ ಸಚಿವ ಡಾ. ಎಂ ಸಿ ಸುಧಾಕರ್ ಅವರ ತಂದೆ ಚೌಡಾರೆಡ್ಡಿ ವಿರುದ್ಧ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದ ತನಿಖೆ ಮುಂದುವರಿಸಲು ಲೋಕಾಯುಕ್ತರ ಪೊಲೀಸರಿಗೆ ಅನುಮತಿಸಿದೆ.

ಸರ್ಕಾರಿ ಜಮೀನು ಒತ್ತುವರಿ ಆರೋಪ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ‌ಕೋರಿ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಚೌಡರೆಡ್ಡಿ‌ ಹಾಗೂ  ಚಿಂತಾಮಣಿಯ ಈ ಹಿಂದಿನ ಪೌರಾಯುಕ್ತರಾಗಿದ್ದ ಬಿ ಎಚ್‌ ನಾರಾಯಣಪ್ಪ ಸಲ್ಲಿಸಿದ್ದ‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.

ಚಿಂತಾಮಣಿ ತಾಲ್ಲೂಕು ಕನ್ನಂಪಲಿ ಗ್ರಾಮದ ಸರ್ವೇ ನಂಬರ್‌ 11ರಲ್ಲಿನ 1.19 ಗುಂಟೆ ಸರ್ಕಾರಿ ಖರಾಬು ಜಮೀನನ್ನು ಚೌಡರೆಡ್ಡಿ‌ ಅವರು ಒತ್ತುವರಿ ಮಾಡಿ‌ ಬೇರೆಯವರಿಗೆ ಮಾರಾಟ ಮಾಡಿದ್ದಾರೆ‌ ಎಂಬ ಆರೋಪವಿದೆ.‌ ಚೌಡರೆಡ್ಡಿ ಪುತ್ರರಾದ ಎಂ ಸಿ ಬಾಲಾಜಿ ಮತ್ತು ಎಂ ಸಿ ಸುಧಾಕರ (ಹಾಲಿ ಚಿಂತಾಮಣಿ ಶಾಸಕ) ಪ್ರಕರಣದ ನೇರ ಫಲಾನುಭವಿಗಳಾಗಿದ್ದರೂ, ಅವರು ಆರೋಪಿಗಳಾಗಿಲ್ಲ. ಅಪರಾಧದ ಜಾಲದಿಂದ ಹೇಗೆ ಹೊರಗಿದ್ದಾರೆ ಎಂಬುದೇ ‌ಆಶ್ವರ್ಯಕರವಾಗಿದೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೇ, ಸಾರ್ವಜನಿಕರ ನಂಬಿಕೆಗಳನ್ನು ಪೋಷಿಸಬೇಕಾದ ಸರ್ಕಾರಿ ಸೇವಕರೇ ತಪ್ಪು ಮಾಡಿರುವುದು ಹಾಗೂ ಆ ತಪ್ಪುಗಳ ಫಲಾನುಭವಿಗಳಾಗಿರುವುದು ಆಘಾತಕಾರಿ. ‌ಸಾರ್ವಜನಿಕರು ಸರ್ಕಾರಿ‌ ಜಮೀನು ಒತ್ತುವರಿ ಮಾಡುವುದು ಗಂಭೀರ ಅಪರಾಧ. ಅದರಲ್ಲೂ ರಾಜಕೀಯ ಅಧಿಕಾರಸ್ಥರು ಭೂ ಕಬಳಿಕೆ ಮಾಡುವುದು ಇನ್ನೂ ದೊಡ್ಡ ಅಪರಾಧ.‌ ಈ ಕೃತ್ಯ ಆಡಳಿತದ ಮೇಲಿನ ಸಾರ್ವಜನಿಕ ನಂಬಿಕೆಯನ್ನೇ ಸರ್ವನಾಶ ಮಾಡುತ್ತದೆ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ತನಿಖೆ ನಡೆಸಲು ಅನಿವಾರ್ಯ ಇದಾಗಿದೆ. ಆದ್ದರಿಂದ, ಆರಂಭಿಕ ಹಂತದಲ್ಲಿ ತನಿಖೆಯನ್ನು ತಡೆಯುವುದು ಸತ್ಯವು ಕೋಣೆಯನ್ನು ಪ್ರವೇಶಿಸುವ ಮೊದಲೇ ಬಾಗಿಲು ಮುಚ್ಚಿದಂತಾಗುತ್ತದೆ. 2016ರಲ್ಲಿ ಪ್ರಕರಣ ಸಂಬಂಧ ಲೋಕಾಯುಕ್ತ ಪೋಲೀಸರಿಗೆ ದೂರು ದಾಖಲಾಗಿದೆ. 2017ರಲ್ಲಿ ಎಫ್ಐಆರ್ ದಾಖಲಾಗಿದೆ. ಈಗಾಗಾಲೇ ಸಾಕಷ್ಟು ಸಮಯ ಕಳೆದಿರುವುದರಿಂದ ಲೋಕಾಯುಕ್ತರ ಪೊಲೀಸರು ಗರಿಷ್ಠ ಆರು ತಿಂಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದೆ/

ಪ್ರಕರಣದ ಹಿನ್ನೆಲೆ: ಚಿಂತಾಮಣಿ ತಾಲ್ಲೂಕು ಕನ್ನಂಪಲಿ ಗ್ರಾಮದ ಸರ್ವೇ ನಂಬರ್‌ 11ರಲ್ಲಿನ 1.19 ಗುಂಟೆ  ಖರಾಬು ಜಮೀನನ್ನು ಚೌಡರೆಡ್ಡಿ‌ ಅವರು ಒತ್ತುವರಿ ಮಾಡಿ‌ ಬಾಲಾಜಿ ರೆಡ್ಡಿ ಇವರಿಗೆ ನಿಯಮಬಾಹಿರವಾಗಿ ಖಾತೆ ಮಾಡಿಸಿಕೊಡಲಾಗಿದೆ. ಒತ್ತುವರಿ ಮಾಡಲಾದ ಈ ಸರ್ಕಾರಿ ಜಮೀನನ್ನು ನಿವೇಶನಗಳಾಗಿ ವಿಂಗಡಿಸಿ ಬೇರೆವರಿಗೆ ಮಾರಾಟ ಮಾಡಲಾಗಿದೆ ಎಂಬುದಾಗಿ  ಆರೋಪಿಸಿ ಸೊನ್ನಶೆಟ್ಟಿಹಳ್ಳಿಯ ಆರ್ ವೆಂಕಟರಮಣ ಅವರು ಚೌಡರೆಡ್ಡಿ, ವಿರುದ್ಧ 2016ರ ಏಪ್ರಿಲ್‌ 24ರಂದು ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಸಲ್ಲಿಸಿದ್ದರು.

ಅಕ್ರಮ ಎಸಗಲು ಚೌಡಾರೆಡ್ಡಿಗೆ ಚಿಂತಾಮಣಿ ಪೌರಾಯುಕ್ತರಾಗಿದ್ದ ಬಿ ಎಚ್‌ ನಾರಾಯಣಪ್ಪ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ನೆರವು ನೀಡಿ‌ ಅಧಿಕಾರ ದುರುಪಯೋಗ ಮಾಡಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.‌‌‌‌ ಅದರಂತೆ ಲೋಕಾಯುಕ್ತ ಪೊಲೀಸರು, ಚೌಡರೆಡ್ಡಿ ಮತ್ತು ಬಿ ಎಚ್‌ ನಾರಾಯಣಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಅಡಿಯಲ್ಲಿ 2017ರ ಮಾರ್ಚ್ 11ರಂದು ಎಫ್‌ಐಆರ್‌ ದಾಖಲಿಸಿದ್ದರು.‌‌ ಅದನ್ನು ರದ್ದುಪಡಿಸಲು ಕೋರಿ ಅರ್ಜಿದಾರರು, 2017ರಲ್ಲಿ ಹೈಕೋರ್ಟ್ಗೆ ಅರ್ಜಿ‌ ಸಲ್ಲಿಸಿದ್ದರು. ಆಗ ಎಫ್ಐಆರ್ ಗೆ ಹೈಕೋರ್ಟ್ ತಡೆ ನೀಡಿತ್ತು. ‌ಇದೀಗ ಆ ತಡೆ  ತೆರವುಗೊಳಿಸಿರುವ ಹೈಕೋರ್ಟ್, ತನಿಖೆಗೆ ಅನುಮತಿಸಿದೆ.

Attachment
PDF
BH Narayanappa Vs State of Karnataka & ors
Preview
Kannada Bar & Bench
kannada.barandbench.com