ನಕಲಿ ಜಾತಿ ಪ್ರಮಾಣ ಪತ್ರದಿಂದ ಉದ್ಯೋಗ ಪಡೆದು ನಿವೃತ್ತಿ: ವ್ಯಕ್ತಿ ವಿರುದ್ಧ ಕ್ರಿಮಿನಲ್‌ ಪ್ರಕರಣ ರದ್ದತಿಗೆ ನಕಾರ

Karnataka HC, Kalburgi Bench
Karnataka HC, Kalburgi Bench
Published on

ನಕಲಿ ಜಾತಿ ಪ್ರಮಾಣಪತ್ರದ ಪ್ರಯೋಜನದಿಂದ ಭಾರತ ಸಂಚಾರ ನಿಗಮ ನಿಯಮಿತದಲ್ಲಿ (ಬಿಎಸ್‌ಎನ್‌ಎಲ್‌) ಆಪರೇಟರ್‌ ಉದ್ಯೋಗ ಗಿಟ್ಟಿಸಿಕೊಂಡು, ನಿವೃತ್ತಿ ಹೊಂದಿರುವ ವ್ಯಕ್ತಿಯೊಬ್ಬರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಈಚೆಗೆ ನಿರಾಕರಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಕಲಬುರ್ಗಿಯ ಶ್ರೀಮಂತ ಬಿನ್‌ ಅರ್ಜುನ್‌ ನಾಟೀಕರ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

ಅರ್ಜಿದಾರರು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿದ ಕಬ್ಬಲಿಗ ಜಾತಿಯವರು. ಆದರೆ, ಇವರು ಪರಿಶಿಷ್ಟ ಪಂಗಡದ (ಎಸ್‌ಟಿ) ಕೋಲಿ ಡೋರ್ ಜಾತಿಯ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ ಪಡೆದು ಅದರಿಂದ ಲಾಭ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ನಾಗರಿಕ ಹಕ್ಕುಗಳ ಜಾರಿ (ಸಿಆರ್‌ಇ) ನಿರ್ದೇಶನಾಲಯಕ್ಕೆ ಪೀಠ ನಿರ್ದೇಶಿಸಿದೆ.

ವಿಚಾರಣೆ ವೇಳೆ ಸಿಆರ್‌ಇ ಪರ ವಿಶೇಷ ವಕೀಲರಾದ ಸಿ ಜಗದೀಶ್‌ ಅವರು ಅರ್ಜಿದಾರರು ನಕಲಿ ಜಾತಿ ಪ್ರಮಾಣಪತ್ರ ಪಡೆದು, ಅದರ ಲಾಭ ಮಾಡಿಕೊಂಡು ವಂಚನೆ ಎಸಗಿದ್ದಾರೆ. ಆ ಮೂಲಕ ಎಸ್‌ಟಿ ವರ್ಗದವರಿಗೆ ನ್ಯಾಯಯುತವಾಗಿ ದಕ್ಕಬೇಕಿದ್ದ ಹಕ್ಕನ್ನು ಕಸಿದುಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ತನಿಖೆ ನಡೆಯಲೇಬೇಕು ಎಂದು ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌‌ಗಳು ಹೇಳಿವೆ. ಆದ್ದರಿಂದ, ಅರ್ಜಿ ವಜಾಗೊಳಿಸಿ, ತನಿಖೆಗೆ ಆದೇಶಿಸಬೇಕು ಎಂದು ಕೋರಿದ್ದರು.

ಇದನ್ನು ಪುರಸ್ಕರಿಸಿರುವ ಪೀಠವು ಅರ್ಜಿದಾರರು ಕಬ್ಬಲಿಗ ಜಾತಿಗೆ ಸೇರಿದವರಾಗಿದ್ದು, ಅವರು ಸುಳ್ಳು ಮಾಹಿತಿ ನೀಡಿ 1978ರಲ್ಲಿ ಬಿಎಸ್‌ಎನ್‌ಎಲ್‌‌ನಲ್ಲಿ ಉದ್ಯೋಗ ಪಡೆದಿದ್ದಾರೆ. ಆದರೆ, ನಂತರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ) ಅವರ ಪ್ರಮಾಣ ಪತ್ರವನ್ನು ರದ್ದುಪಡಿಸಿದೆ. ಆದ್ದರಿಂದ, ಪ್ರಕರಣದ ಬಗ್ಗೆ ತನಿಖೆ ಆಗಬೇಕಿದೆ ಎಂದು ಹೇಳಿದೆ.

Kannada Bar & Bench
kannada.barandbench.com