ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ವಿರುದ್ದದ ಇಲಾಖಾ ತನಿಖೆ ರದ್ದು ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

ಇಲಾಖಾವಾರು ತನಿಖೆ ಕೈಗೊಳ್ಳುವಂತೆ ಸಿಬಿಐ ಸಲ್ಲಿಸಿರುವ ವರದಿ ಮತ್ತು ತಮ್ಮ ವಿರುದ್ಧದ ಇಲಾಖಾವಾರು ತನಿಖೆಗೆ ಆದೇಶಿಸಿರುವ ಸರ್ಕಾರದ ಕ್ರಮ ರದ್ದುಪಡಿಸಬೇಕು ಎಂದು ಅಲೋಕ್‌ ಕುಮಾರ್‌ ಮನವಿ ಮಾಡಿದ್ದರು.
ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ವಿರುದ್ದದ ಇಲಾಖಾ ತನಿಖೆ ರದ್ದು ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ
Published on

ಟೆಲಿಫೋನ್‌ ಕದ್ದಾಲಿಕೆ ಆರೋಪ ಸಂಬಂಧ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ವಿರುದ್ಧ ಇಲಾಖಾವಾರು ತನಿಖೆ ರದ್ದುಗೊಳಿಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ(ಸಿಎಟಿ) ಆದೇಶಕ್ಕೆ ತಡೆ ನೀಡಲು ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ.

ಸಿಎಟಿ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ ಪ್ರಸಾದ್‌ ಮತ್ತು ಟಿ ಎಂ ನದಾಫ್‌ ಅವರ ವಿಭಾಗೀಯ ಪೀಠ ವಿಚಾರಣೆಗೆ ನಡೆಸಿತು.

ಸಿಎಟಿ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್‌ 4ಕ್ಕೆ ಮುಂದೂಡಿತು.

ಅಲೋಕ್‌ ಕುಮಾರ್‌ ವಿರುದ್ಧ 2019ರಲ್ಲಿ ಟೆಲಿಫೋನ್‌ ಕದ್ದಾಲಿಕೆ ನಡೆಸಿದ ಆರೋಪ ಕೇಳಿ ಬಂದಿತ್ತು. ಈ ಆರೋಪ ಸಂಬಂಧ ತನಿಖೆ ನಡೆಸಿದ್ದ ಸಿಬಿಐ, ಅಲೋಕ್‌ ಕುಮಾರ್‌ ವಿರುದ್ಧ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿತ್ತು. ಅಲ್ಲದೆ, ಹೆಚ್ಚುವರಿ ಅಂತಿಮ ವರದಿ ಪಟ್ಟಿ ಸಲ್ಲಿಸಿದ್ದು ಇಲಾಖೆಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿತ್ತು. ಈ ವರದಿ ಅನ್ವಯ ರಾಜ್ಯ ಸರ್ಕಾರ ಇಲಾಖಾವಾರು ತನಿಖೆಗೆ ಆದೇಶಿಸಿತ್ತು. ಅಲ್ಲದೆ, ಅರ್ಜಿದಾರರಿಗೆ ಸಿಗಬೇಕಾದ ಬಡ್ತಿ ಸೇರಿದಂತೆ ಇತರೆ ಸೌಲಭ್ಯಗಳಿಗೆ ತಡೆ ನೀಡಿತ್ತು.

ಇದನ್ನು ಕೆಎಟಿಯಲ್ಲಿ ಪ್ರಶ್ನಿಸಿದ್ದ ಅರ್ಜಿದಾರ ಆಲೋಕ್‌ ಕುಮಾರ್‌ ಅವರು ತಮ್ಮ ವಿರುದ್ದ ಇಲಾಖಾವಾರು ತನಿಖೆ ಕೈಗೊಳ್ಳುವಂತೆ ಸಿಬಿಐ ಸಲ್ಲಿಸಿರುವ ವರದಿ ಮತ್ತು ತಮ್ಮ ವಿರುದ್ಧದ ಇಲಾಖಾವಾರು ತನಿಖೆಗೆ ಆದೇಶಿಸಿರುವ ಸರ್ಕಾರದ ಕ್ರಮ ರದ್ದುಪಡಿಸಬೇಕು ಎಂದು ಕೋರಿದ್ದರು.

ಅರ್ಜಿಯ ಕುರಿತಂತೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ ಕೆ ಶ್ರೀವಾಸ್ತವ ಮತ್ತು ಸಂತೋಷ್‌ ಮೆಹ್ರಾ ಅವರ ಪೀಠವು ವಿಭಿನ್ನ ತೀರ್ಪು ನೀಡಿತ್ತು. ಬಳಿಕ ಪ್ರಕರಣವನ್ನು ಮೂರನೇ ನ್ಯಾಯಾಧೀಶರಿಗೆ ವರ್ಗಾವಣೆ ಮಾಡಲಾಗಿತ್ತು. ಸಿಎಟಿಯ ಅಧ್ಯಕ್ಷರಾದ ನ್ಯಾಯಮೂರ್ತಿ ರಂಜಿತ್ ವಸಂತರಾವ್‌ ಮೊರೆ ಅವರ ಪೀಠವು ಇಲಾಖಾವಾರು ತನಿಖೆ ಆದೇಶ ರದ್ದುಗೊಳಿಸಿತ್ತು. ಅಲ್ಲದೆ, ಅರ್ಜಿದಾರ ಅಲೋಕ್‌ ಕುಮಾರ್‌ಗೆ ಗೆ ಸಲ್ಲಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿತ್ತು.

Kannada Bar & Bench
kannada.barandbench.com