
ಬಹುಭಾಷಾ ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಚಿತ್ರ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ “ಇನ್ನೂ ಕ್ಷಮೆ ಕೇಳಿಲ್ಲವೇ? ವಿವೇಕವು ಶೌರ್ಯದ ಶ್ರೇಷ್ಠ ಭಾಗ ಎಂಬುದನ್ನು ಮತ್ತೊಮ್ಮೆ ನೆನಪಿಸಲಾಗುತ್ತಿದೆ” ಎಂದಿತು.
ʼಥಗ್ ಲೈಫ್ʼ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ನಾರಾಯಣ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಕರಣದಲ್ಲಿ ಮಧ್ಯಪ್ರವೇಶಿಕೆ ಕೋರಿರುವ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಹಿರಿಯ ವಕೀಲ ಎಸ್ ಬಸವರಾಜ್ ಅವರು “ಕಾನೂನು ದುರ್ಬಳಕೆ ಮಾಡಿಕೊಂಡು ಆನಂತರ ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿದ್ದಾರೆ. ನೋಂದಾಯಿತ ಪಾಲುದಾರ ಸಂಸ್ಥೆಯಾಗಿರುವ ರಾಜ್‌ಕಮಲ್ ಸಂಸ್ಥೆಯು ಸಲ್ಲಿಸಿರುವ ಅರ್ಜಿ ಊರ್ಜಿತವಾಗುವುದಿಲ್ಲ” ಎಂದರು.
ಮುಂದುವರಿದು, “ಮನೆಗೆ ಬೆಂಕಿ ಹಾಕಿ, ಅದನ್ನು ನಂದಿಸಲು ಸಹಾಯ ಮಾಡಿ ಎಂದು ಅರ್ಜಿದಾರರು ಕೇಳಲಾಗದು. 12ನೇ ಶತಮಾನದಲ್ಲಿ ಬಸವಣ್ಣನವರು ಮನೆಯೊಳಗಣ ಕಿಚ್ಚು ಮನೆಯ ಸುಡದಲ್ಲದೇ, ನೆರೆ ಮನೆಯ ಸುಡದು ಕೂಡಲಸಂಗಮದೇವಾ... ಎಂದಿದ್ದಾರೆ. ಕಮಲ್ ತಮ್ಮ ನಡತೆಯ ಮೂಲಕ ಮನೆಗೆ ಬೆಂಕಿ ಹಚ್ಚಿಕೊಂಡಿದ್ದಾರೆ. ಕಮಲ್ ಹಾಸನ್ ಅವರು ಸಂವಿಧಾನದ ಮತ್ತೊಂದು ಭಾಗಕ್ಕೂ ಒಂದೇ ತೆರನಾದ ಗೌರವ ನೀಡಬೇಕು. ಪ್ರತಿಯೊಬ್ಬರು ಇನ್ನೊಂದು ಭಾಷೆ, ಸಂಸ್ಕೃತಿ ಇತ್ಯಾದಿಯನ್ನು ಗೌರವಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಇದರಿಂದ ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಸಾಧ್ಯ” ಎಂದರು.
ಅಲ್ಲದೇ, “ಭಾರತದಲ್ಲಿ ಮೂರ್ಖನಾಗುವುದು ಅಪರಾಧವೇನಲ್ಲ. ಕಮಲ್ ಹಾಸನ್ ನೀಡಿರುವುದು ಮೂರ್ಖ ಹೇಳಿಕೆ ಎನ್ನುವುದನ್ನು ಸಾಬೀತುಪಡಿಸುತ್ತೇನೆ. ಪಾರ್ಥಸಾರಥಿ ಶ್ರೀನಿವಾಸ್ ಅಲಿಯಾಸ್ ಕಮಲ್ ಹಾಸನ್ ಅವರು “ತಮಿಳಿನಿಂದ ಕನ್ನಡ ಹುಟ್ಟಿದೆ” ಎಂದಿದ್ದಾರೆ. ಕನ್ನಡವನ್ನು ʼಹಲೋ ಮಗನೇʼ ಎನ್ನುವುದು ತಪ್ಪು. ಇದನ್ನೇ ಕಮಲ್ ಹಾಸನ್ ಹೇಳಿದ್ದಾರೆ. ಪ್ರೀತಿಯಿಂದ ಯಾರು ಇನ್ನೊಬ್ಬರನ್ನು ಮಗನೇ ಎಂದು ಕರೆಯುವುದಿಲ್ಲ. ಮೂರ್ಖ ಎಂಬ ಹೇಳಿಕೆಯನ್ನು ಪ್ರತಿಕ್ರಿಯೆಗಾಗಿ ಹೇಳಿದ್ದೇನೆಯೇ ವಿನಾ ಹಿರಿಯ ಕಲಾವಿದ ಕಮಲ್ ಬಗ್ಗೆ ದುರುದ್ದೇಶದಿಂದ ಅಲ್ಲ” ಎಂದು ಸ್ಪಷ್ಟಪಡಿಸಿದರು.
ಅಂತಿಮವಾಗಿ ಕನ್ನಡದ ಭಾಷಾ ಇತಿಹಾಸ ಉಲ್ಲೇಖಿಸಿದ ಬಸವರಾಜ್ ಅವರು “ಕಮಲ್ ಹಾಸನ್ ತಾನು ಭಾಷಾ ಅಥವಾ ಇತಿಹಾಸಕಾರನಲ್ಲ ಎಂದಿದ್ದಾರೆ. ವಿದ್ಯಾವಂತನಾದ ವ್ಯಕ್ತಿ ಈ ರೀತಿ ಹೇಳಿಕೆ ನೀಡುವುದಿಲ್ಲ. ಕನ್ನಡ ಲಿಪಿಯ ಉಗಮ ಮತ್ತು ವಿಕಾಸ ಎಂಬ ಪುಸ್ತಕವಿದೆ. ಮಹಾ ಭಾರತದಲ್ಲಿ ಕರ್ನಾಟಕ ಎಂಬ ಶಬ್ದವಿದೆ. ಕ್ರಿ.ಶ ಒಂದನೇ ಶತಮಾನದ್ದು ಎನ್ನಲಾದ ಮಾರ್ಕಂಡೇಯ ಪುರಾಣದಲ್ಲಿ ಕರ್ನಾಟಕ ಎಂದಿದೆ. ಸೋಮದೇವನ ಕತಾ ಸರಿಸಾಗರ ಮತ್ತು ವರಹಮೀರನ ಬೃಹತ್ ಸಂಹಿತೆಯಲ್ಲಿ ಕರ್ನಾಟಕ ಎಂದಿದೆ. ಶೂದ್ರ ಕಲಾ ಮೃಚ್ಛಕಟಿಕ ನಾಟಕದಲ್ಲಿ ಒಂದು ಪಾತ್ರ ಕರ್ನಾಟಕದ ಪ್ರಸ್ತಾಪ ಮಾಡುತ್ತದೆ. ಗಂಗ ವಿಕ್ರಮನ ಎಡಕೂರು ಶಾಸನದಲ್ಲಿ ಅಸಮಸೀಮ ಕರ್ನಾಟಕ ಎಂದಿದೆ. ಸಂಸ್ಕೃತದಲ್ಲಿ ಕರ್ನಾಟ, ಕರ್ನಾಟಕ ಎಂಬ ಎರಡು ರೂಪಗಳಿವೆ. ಸ್ಕಂದ ಪುರಾಣದ ಕರ್ನಾಟಕ ರಾಕ್ಷಸರಿಂದ ಈ ಹೆಸರು ಬಂದಿದೆ ಎನ್ನಲಾಗಿದೆ. ಪಾಕೃತದಲ್ಲಿ ಕರ್ನಾಟಕ, ಕನ್ನಾಡ ಎಂಬ ರೂಪ ಬಳಕೆಯಾಗಿದೆ. ಇದೆಲ್ಲವನ್ನೂ ಕಮಲ್ ಹಾಸನ್ ಅವರಿಗೆ ತಿಳಿಸಿ ಹೇಳುವ ಮೂಲಕ, ಮುಂದಿನ ವಿಚಾರಣೆ ವೇಳೆಗೆ ಮತ್ತಷ್ಟು ವಿವೇಕದಿಂದ ವಿಚಾರಣೆಗೆ ಹಾಜರಾಗಲಿ ಎಂದು ಹೇಳಿದ್ದೇನೆ” ಎಂದರು.
ವಿಚಾರಣೆಗೂ ಮುನ್ನ ಪೀಠವು “ಇನ್ನೂ ಕ್ಷಮೆ ಕೇಳಿಲ್ಲವೇ?” ಎಂದಿತು. ಬಸವರಾಜು ʼಮೂರ್ಖ ಹೇಳಿಕೆʼ ಎಂದಾಗ “ಇಂಥ ಹೇಳಿಕೆ ಬಳಕೆ ಮಾಡಬಾರದು. ನ್ಯಾಯಾಲಯದಲ್ಲಿ ಯಾರನ್ನೂ ಮೂರ್ಖ ಎಂದು ಕರೆಯುವುದು ಸರಿಯಲ್ಲ. ತಮ್ಮ ಹೇಳಿಕೆಗೆ ಕಮಲ್ ವಿವರಣೆ ನೀಡಿದ್ದಾರೆ” ಎಂದು ಮೌಖಿಕವಾಗಿ ಹೇಳಿದರು. ಅಂತಿಮವಾಗಿ ಕಮಲ್ ಪರ ವಕೀಲರನ್ನು ಕುರಿತು “ವಿವೇಕವು ಶೌರ್ಯದ ಶ್ರೇಷ್ಠ ಭಾಗ ಎಂಬುದನ್ನು ಮತ್ತೊಮ್ಮೆ ನೆನಪಿಸಲು ಬಯಸುತ್ತೇನೆ” ಎಂದಿತು. ಇದನ್ನು, ಕಮಲ್ ಹಾಸನ್‌ಗೆ ಮತ್ತೊಮ್ಮೆ ತಿಳಿಸುವುದಾಗಿ ಅವರ ವಕೀಲರು ಪೀಠಕ್ಕೆ ಹೇಳಿದರು.
ಕೊನೆಗೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಕೀಲ ಎನ್ ಪಿ ಅಮೃತೇಶ್ ಅವರು ಸಲ್ಲಿಸಿರುವ ಮಧ್ಯಪ್ರವೇಶಿಕೆ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಿತು.