ನೂರು ವರ್ಷವಾದರೂ ಪೋಷಕರ ಋಣ ತೀರಿಸಲಾಗದು ಎಂದ ನ್ಯಾಯಾಲಯ; ತಂದೆಯ ಹೇಬಿಯಸ್‌ ಕಾರ್ಪಸ್‌ ಮನವಿ ವಜಾ ಮಾಡಿದ ಹೈಕೋರ್ಟ್‌

ಹಾಸ್ಟಲ್‌ನಲ್ಲಿದ್ದುಕೊಂಡು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಪುತ್ರಿಯು ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೇಮ ವಿವಾಹವಾದ ಪ್ರಕರಣದಲ್ಲಿ ಆಕೆಯನ್ನು ವಶಕ್ಕೆ ಒಪ್ಪಿಸುವಂತೆ ಕೋರಿ ತಂದೆ ಹೇಬಿಯಸ್ ಕಾರ್ಪಸ್ ಮನವಿ ಸಲ್ಲಿಸಿದ್ದರು.
Karntaka HC and Justices B Verappa and K S Hemalekha
Karntaka HC and Justices B Verappa and K S Hemalekha

“ಪೋಷಕರಿಗಿಂತ ದೊಡ್ಡ ದೇವರಿಲ್ಲ, ಕರುಣೆಗಿಂತ ದೊಡ್ಡ ಧರ್ಮವಿಲ್ಲ, ಕೋಪಕ್ಕಿಂತ ದೊಡ್ಡ ಶತ್ರು ಬೇರೆ ಇಲ್ಲ, ಉತ್ತಮ ವರ್ಚಸ್ಸಿಗಿಂತ ಬೇರೆಯ ಸಂಪತ್ತು ಇಲ್ಲ, ಕೆಟ್ಟ ವರ್ಚಸ್ಸೇ ಸಾವು. ಮನುಸ್ಮೃತಿಯ ಪ್ರಕಾರ ಮಗ ಅಥವಾ ಮಗಳಿಗೆ ಜನ್ಮನೀಡಿ ಅವರನ್ನು ದೊಡ್ಡವರನ್ನಾಗಿಸುವಾಗ ಪೋಷಕರ ಋಣವನ್ನು 100 ವರ್ಷವಾದರೂ ತೀರಿಸಲಾಗದು” ಎಂದು ಹೇಬಿಯಸ್‌ ಕಾರ್ಪಸ್‌ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ ಮೇಲಿನಂತೆ ಹೇಳಿದೆ.

ಹಾಸ್ಟಲ್‌ನಲ್ಲಿದ್ದುಕೊಂಡು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೇಮ ವಿವಾಹವಾದ ಪ್ರಕರಣದಲ್ಲಿ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಮೇಲಿನಂತೆ ಹೇಳಿದೆ.

ವಿದ್ಯಾರ್ಥಿನಿಗೆ 19 ವರ್ಷವಾಗಿದ್ದು, ವಯಸ್ಕರು ತಾವು ಬಯಸಿದ ವ್ಯಕ್ತಿಯೊಂದಿಗೆ ಜೀವಿಸುವ ಹಕ್ಕನ್ನು ಸಂವಿಧಾನ ಕಲ್ಪಿಸಿರುವುದರಿಂದ ಮತ್ತು ಪತಿಯೊಂದಿಗೆ ಜೀವಿಸುವುದಾಗಿ ವಿದ್ಯಾರ್ಥಿನಿ ಹೇಳಿದ ಹಿನ್ನೆಲೆಯಲ್ಲಿ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ಪತಿಯ ಜೊತೆ ತೆರಳಲು ವಿದ್ಯಾರ್ಥಿನಿಗೆ ಅನುಮತಿಸಿತು.

ಮಳವಳ್ಳಿ ತಾಲ್ಲೂಕಿನ ನಿವಾಸಿ ನಾಗರಾಜು ಅವರ ಪುತ್ರಿ ಮಂಡ್ಯದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್‌ನಲ್ಲಿ ತಂಗಿದ್ದ ಆಕೆ ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೀತಿಸಿ ಪೋಷಕರಿಗೆ ತಿಳಿಯದಂತೆ ಮದುವೆಯಾಗಿದ್ದರು. ಇದರಿಂದ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ತಂದೆ ನಾಗರಾಜ್ ಅವರು, ಮಗಳಿಗೆ ಸ್ವಂತ ನಿರ್ಧಾರ ಕೈಗೊಳ್ಳುವ ತಿಳಿವಳಿಕೆ ಇಲ್ಲ. ಆಕೆಯನ್ನು ಪುಸಲಾಯಿಸಿ ವ್ಯಾನ್ ಚಾಲಕ ಮದುವೆಯಾಗಿದ್ದಾನೆ. ಆತನ ಅಕ್ರಮ ಬಂಧನದಲ್ಲಿರುವ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸಿ ಆದೇಶಿಸುವಂತೆ ಕೋರಿದ್ದರು. ನ್ಯಾಯಾಲಯದ ನಿರ್ದೇಶನದಂತೆ ವಿದ್ಯಾರ್ಥಿನಿ ಮತ್ತು ಆಕೆಯ ಪತಿ ಪೀಠದ ಮುಂದೆ ಹಾಜರಾಗಿದ್ದರು.

ತಾನು ವಯಸ್ಕಳಾಗಿದ್ದು, ಪ್ರೀತಿಸಿ ಮದುವೆಯಾಗಿದ್ದೇನೆ. ಪತಿಯೊಂದಿಗೆ ಜೀವಿಸಲು ಬಯಸಿದ್ದೇನೆ ಎಂದು ಯುವತಿ ಹೇಳಿಕೆ ನೀಡಿದಳು. ಪತಿಯೂ ಪತ್ನಿಯನ್ನು ಎಂಜಿನಿಯರಿಂಗ್‌ ಓದಿಸುತ್ತೇನೆ. ತನ್ನ ಜೀವನ ಇರುವವರೆಗೂ ಆಕೆ ಕಣ್ಣೀರು ಹಾಕದಂತೆ ನೋಡಿಕೊಳ್ಳುತ್ತೇನೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಇದನ್ನು ಪರಿಗಣಿಸಿದ ಪೀಠವು ಇಲ್ಲಿ ಅಕ್ರಮ ಬಂಧನ ಇಲ್ಲ ಎಂದು ಹೇಳಿ, ಅರ್ಜಿ ವಜಾಗೊಳಿಸಿತು.

ಪೋಷಕರು-ಮಕ್ಕಳ ಬಾಂಧವ್ಯ, ಪ್ರೀತಿ ಬಗ್ಗೆ ಪೀಠ ಹೇಳಿದ್ದೇನು?

  • ಮಕ್ಕಳು ದೇಶದ ಸಂಪತ್ತು ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಕೌಶಲ ಅಭಿವೃದ್ಧಿ, ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಯು ಮಕ್ಕಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಮಕ್ಕಳಿಗಾಗಿ ಪೋಷಕರು ತಮ್ಮ ಬದುಕು ತ್ಯಾಗ ಮಾಡಿದ್ದು, ಮಕ್ಕಳು ತಮ್ಮ ಪೋಷಕರಿಗಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದ್ದಾರೆ ಎಂಬುದನ್ನು ನಮ್ಮ ಇತಿಹಾಸ ತಿಳಿಸುತ್ತದೆ.

  • ಪ್ರಸಕ್ತ ಪ್ರಕರಣದಲ್ಲಿ ಪ್ರೇಮ ಕುರುಡು. ಪ್ರೀತಿಯು ಪೋಷಕರು, ಕುಟುಂಬ ಸದಸ್ಯರು ಮತ್ತು ವಿಸ್ತೃತ ನೆಲೆಯಲ್ಲಿ ಸಮಾಜಕ್ಕಿಂತ ಶಕ್ತಿಯುತ ಅಸ್ತ್ರ.

  • ಬದುಕು ಪ್ರತಿಕ್ರಿಯೆ, ಪ್ರತಿಧ್ವನಿ ಮತ್ತು ಪ್ರತಿಬಿಂಬದಿಂದ ಕೂಡಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಮಕ್ಕಳಿಗೆ ಇದು ಸುಸಂದರ್ಭ. ಇಂದು ಪೋಷಕರಿಗೆ ಏನು ಮಾಡುತ್ತಾರೋ ಅದು ಮುಂದೊಂದು ದಿನ ತಮಗೆ ಮರಳಿ ಬರುತ್ತದೆ. ತಮ್ಮ ಭವಿಷ್ಯವನ್ನು ಬದಲಿಸಿಕೊಳ್ಳುವುದಕ್ಕೆ ಸಹಾಯ ಮಾಡದಿದ್ದ ಮೇಲೆ ಅವರ ಶಿಕ್ಷಣ, ಅಧಿಕಾರ-ಸ್ಥಾನಮಾನ ಮತ್ತು ಸಂಪತ್ತು ಏತಕ್ಕಾಗಿಬೇಕು. ಕೆಟ್ಟ ಯೋಚನೆ ಮನದಲ್ಲಿ ನುಸುಳಿದ ಮೇಲೆ ಅವರ ಶಿಕ್ಷಣ, ಬುದ್ದಿಮತ್ತೆ, ಅಧಿಕಾರ ಮತ್ತು ಸಂಪತ್ತು ಅರ್ಥಹೀನ.

  • ಫಲಿತಾಂಶವನ್ನು ಎದುರಿಸದವರ ಸಲಹೆ ಆಧರಿಸಿ ನಿಮ್ಮ ಸಂಬಂಧ ಸೌಧ ಕಟ್ಟಬೇಡಿ.

  • ಪ್ರೀತಿಯು ಹೃದಯದಿಂದ ಹೃದಯಕ್ಕೆ ಸೇರಿದ್ದಾಗಿದ್ದು, ಅದು ಬಾಹ್ಯ ಆಕರ್ಷಣೆಯಲ್ಲ.

Related Stories

No stories found.
Kannada Bar & Bench
kannada.barandbench.com