ಅಪಘಾತಕ್ಕೆ ವೇಗ, ನಿರ್ಲಕ್ಷ್ಯವಲ್ಲದೇ ರಸ್ತೆ ಗುಂಡಿಯೂ ಕಾರಣ: ವಿಮಾ ಕಂಪನಿ ವಾದ ತಿರಸ್ಕರಿಸಿದ ಹೈಕೋರ್ಟ್‌

“ಅಪಘಾತಕ್ಕೆ ರಸ್ತೆಯಲ್ಲಿ ಗುಂಡಿಗಳು ಇದ್ದದ್ದೂ ಕಾರಣ. ಗುತ್ತಿಗೆದಾರರು ರಸ್ತೆಗೆ ಡಾಂಬರು ಹಾಕುವಾಗ ಕಳಪೆ ಕಾಮಗಾರಿ ಮಾಡಿದ ಪರಿಣಾಮ ಗುಂಡಿಗಳು ಬಿದ್ದು, ಇದೇ ಅಪಘಾತಕ್ಕೆ ಕಾರಣವಾಗಿದೆ” ಎಂದು ವಿಮಾ ಕಂಪನಿ ವಾದಿಸಿತ್ತು.
Justice M Nagaprasanna
Justice M Nagaprasanna
Published on

ರಸ್ತೆ ಅಪಘಾತಕ್ಕೆ ಚಾಲಕನ ವೇಗ ಮತ್ತು ನಿರ್ಲಕ್ಷ್ಯ ಮಾತ್ರವಲ್ಲ, ರಸ್ತೆ ಗುಂಡಿಯೂ ಕಾರಣವಾಗಿದೆ. ಹೀಗಾಗಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿ ಮತ್ತು ಬಿಬಿಎಂಪಿ ಗುತ್ತಿಗೆದಾರನನ್ನೂ ಪ್ರಕರಣದಲ್ಲಿ ಪಕ್ಷಗಾರರನ್ನಾಗಿ ಮಾಡಬೇಕು ಎಂಬ ಐಸಿಐಸಿಐ ಲೊಂಬಾರ್ಡ್‌ ಜನರಲ್‌ ಇನ್ಶೂರೆನ್ಸ್ ಕಂಪನಿ ಕೋರಿಕೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ತಿರಸ್ಕರಿಸಿದೆ.

ನಿರ್ಲಕ್ಷ್ಯ ಮಾತ್ರವಲ್ಲದೇ ಅದರ ಪಾಲುದಾರರೂ ಆದ ಇತರರನ್ನೂ ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಬೇಕು ಎಂದು ಕೋರಿ ವಿಮಾ ಕಂಪನಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಅಪಘಾತಕ್ಕೆ ರಸ್ತೆಯಲ್ಲಿ ಗುಂಡಿಗಳು ಇದ್ದದ್ದೂ ಕಾರಣ. ಗುತ್ತಿಗೆದಾರರು ರಸ್ತೆಗೆ ಡಾಂಬರು ಹಾಕುವಾಗ ಕಳಪೆ ಕಾಮಗಾರಿ ಮಾಡಿದ ಪರಿಣಾಮ ಗುಂಡಿಗಳು ಬಿದ್ದು, ಇದೇ ಅಪಘಾತಕ್ಕೆ ಕಾರಣವಾಗಿದೆ” ಎಂಬ ವಿಮಾ ಕಂಪನಿಯ ವಾದವನ್ನು ತಳ್ಳಿ ಹಾಕಿರುವ ನ್ಯಾಯಾಲಯವು “ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಕಾರು ಚಾಲಕನ ವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಅಪಘಾತ ನಡೆದ ಕೂಡಲೇ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಪ್ರಕರಣ ಸಮಗ್ರ ನಿರ್ಲಕ್ಷ್ಯದ ಪ್ರಕರಣವೇ ಹೊರತು, ಪೂರಕ ನಿರ್ಲಕ್ಷ್ಯದ ಪ್ರಕರಣವಲ್ಲ” ಎಂದು ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಕೇರಳದ ಪಟ್ಟಣಂತಿಟ್ಟ ನಿವಾಸಿ ಆರ್ ಎಂ ರಾಹುಲ್‌ 2022ರ ಅಕ್ಟೋಬರ್ 19ರಂದು ಬೆಂಗಳೂರಿನಲ್ಲಿ ಮೋಟಾರ್ ಸೈಕಲ್ ಓಡಿಸುತ್ತಿದ್ದಾಗ ಅವರ ಬೈಕಿಗೆ ಕಾರು ಡಿಕ್ಕಿ ಹೊಡೆದಿತ್ತು. ರಾಹುಲ್ ಹಾಗೂ ಹಿಂಬದಿ ಸವಾರ ಅಲಪ್ಪುಳ ನಿವಾಸಿ ಎ ಅಜಿಶದ್ ಅ‍ಪಘಾತದಲ್ಲಿ ಗಾಯಗೊಂಡಿದ್ದರು. ನಂತರದಲ್ಲಿ ಅಜಿಶದ್ ಸಾವನ್ನಪ್ಪಿದ್ದರು.

ಕಾರು ಚಾಲಕ ಎಲ್‌ ಪವನ್ ಕುಮಾರ್, ಬಿಬಿಎಂಪಿ ಗುತ್ತಿಗೆದಾರ ಮತ್ತು ಬೈಕ್ ಮಾಲೀಕ ರಾಹುಲ್‌ ಅವರನ್ನು ಆರೋಪಿಗಳು ಎಂದು ಪೊಲೀಸರು ಅವರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. “ಅಪಘಾತಕ್ಕೆ ಕೇವಲ ಕಾರಿನ ಅಜಾಗರೂಕ ಚಾಲನೆ ಮಾತ್ರವಲ್ಲ ರಸ್ತೆ ಗುಂಡಿಯೂ ಕಾರಣವಾಗಿದೆ” ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಅಜಿಶದ್ ಕುಟುಂಬದವರು ₹20 ಲಕ್ಷ ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ನ್ಯಾಯಾಧಿಕರಣಕ್ಕೆ (ಎಂಎಸಿಸಿ) ಅರ್ಜಿ ಸಲ್ಲಿಸಿದ್ದರು. ಕಾರಿಗೆ ವಿಮೆ ಮಾಡಿಸಿದ್ದ ಐಸಿಐಸಿಐ ಲೊಂಬಾರ್ಡ್‌ ಜನರಲ್‌ ಇನ್ಶೂರೆನ್ಸ್ ಕಂಪನಿಯು “ಪ್ರಕರಣದಲ್ಲಿ ನಿರ್ಲಕ್ಷ್ಯಕ್ಕೆ ಯಾರೆಲ್ಲಾ ಎಷ್ಟು ಪ್ರಮಾಣದಲ್ಲಿ ಹೊಣೆಗಾರರಾಗಿದ್ದಾರೆ ಎಂಬುದನ್ನು ನಿರ್ಧರಿಸಲು ಬೈಕ್ ಮಾಲೀಕ, ಬೈಕ್ ವಿಮಾದಾರರು, ಬಿಬಿಎಂಪಿ ಗುತ್ತಿಗೆದಾರರು ಮತ್ತು ಬಿಬಿಎಂಪಿ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಬೇಕು” ಎಂದು ಕೋರಿತ್ತು.

Attachment
PDF
ICICI Lombard General insurance company Ltd Vs Rahul R M & others
Preview
Kannada Bar & Bench
kannada.barandbench.com