ಕೋವಿಡ್‌-19 ಪರಿಸ್ಥಿತಿ ನಿಭಾವಣೆ ಟೀಕಿಸಿ ಆಡಿಯೊ ಕ್ಲಿಪ್‌ ಹರಿಯಬಿಟ್ಟಿದ್ದವನ ವಿರುದ್ಧದ ಪ್ರಕರಣ ರದ್ದತಿಗೆ ನಕಾರ

ಮಂಗಳೂರಿನ ಉಲ್ಲಾಳ ಗ್ರಾಮದ ಅಲ್ತಾಫ್‌ ಹುಸೇನ್‌ ಯಾನೆ ಅಲ್ತಾಫ್‌ ಮೂಸಾ ವಿರುದ್ಧದ ಐಪಿಸಿ ಸೆಕ್ಷನ್‌153A ಮತ್ತು 505(2) ಅಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್‌.
Karnataka HC, COVID-19
Karnataka HC, COVID-19
Published on

ಕೋವಿಡ್‌-19 ಸಾಂಕ್ರಾಮಿಕ ಹರಡಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಸ್ಥಳೀಯ ಶಾಸಕರನ್ನು ಟೀಕಿಸಿ ವಾಟ್ಸಾಪ್‌ನಲ್ಲಿ ಆಡಿಯೋ ಕ್ಲಿಪ್‌ ಹಂಚಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಐಪಿಸಿ ಸೆಕ್ಷನ್‌153A ಮತ್ತು 505(2) ಅಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಮಂಗಳೂರಿನ ಉಲ್ಲಾಳ ಗ್ರಾಮದ ಅಲ್ತಾಫ್‌ ಹುಸೇನ್‌ ಯಾನೆ ಅಲ್ತಾಫ್‌ ಮೂಸಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice Sachin Shankar Magadum
Justice Sachin Shankar Magadum

“ಈ ಹಂತದಲ್ಲಿ ಅರ್ಜಿದಾರರ ವಿರುದ್ಧ ವಿಚಾರಣೆ ಮುಂದುವರಿಸಲು ಸೂಕ್ತ ಆಧಾರಗಳು ಇವೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಲು ಯಾವುದೇ ವ್ಯಕ್ತಿಯು ಸಾಮರಸ್ಯವನ್ನು ಕದಡುವಂತಹ, ಶತೃತ್ವವನ್ನು ಉದ್ದೀಪಿಸುವಂತಹ ಪದ ಬಳಕೆ ಮಾಡಿದರೆ ಅಥವಾ ಬರಹ ಅಥವಾ ಸಂಜ್ಞೆ ಮಾಡಿದರೆ ಸೆಕ್ಷನ್‌ 153A ಅನ್ವಯಿಸುತ್ತದೆ. ಕೋವಿಡ್‌-19 ಮೊದಲನೇ ಅಲೆಯ ಅವಧಿಯ ಬಗ್ಗೆ ನ್ಯಾಯಾಲಯ ಕುರುಡುತನ ವ್ಯಕ್ತಪಡಿಸಲಾಗದು. ಅರ್ಜಿದಾರರು ಬಿಡುಗಡೆ ಮಾಡಿರುವ ಆಡಿಯೊ ಕ್ಲಿಪ್‌ ಬೇಜವಾಬ್ದಾರಿ ಅಥವಾ ದುರುದ್ದೇಶದಿಂದ ಮಾಡಿರುವುದೋ ಎಂಬುದು ಸಂಪೂರ್ಣ ವಿಚಾರಣೆಯಿಂದ ತಿಳಿದುಬರಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

“ಆಡಿಯೊ ಕ್ಲಿಪ್‌ನಲ್ಲಿ ಹೇಳಿಕೆಗಳನ್ನು ಸಂಪೂರ್ಣವಾಗಿ ಓದಲಾಗಿದ್ದು, ಅರ್ಜಿದಾರರ ಹೇಳಿಕೆಗಳು ಜನರಲ್ಲಿ ಭಯ ಸೃಷ್ಟಿಸಿ, ಕೋಮು ಶಾಂತಿ ಕದಡುವ ಸಾಧ್ಯತೆ ಇದೆ ಎಂಬ ಪ್ರಾಸಿಕ್ಯೂಷನ್‌ ವಾದಕ್ಕೆ ಇಂಬು ನೀಡುವಂತಿದೆ. ಆರೋಪ ಪಟ್ಟಿಯಲ್ಲಿ ಅಪರಾಧವನ್ನು ಬಹಿರಂಗಗೊಳಿಸಿಲ್ಲ ಎಂಬ ಅರ್ಜಿದಾರರ ವಾದವನ್ನು ಈ ಹಂತದಲ್ಲಿ ಒಪ್ಪಲಾಗದು. ಆಡಿಯೊ ಕ್ಲಿಪ್‌ನಲ್ಲಿನ ವಿಚಾರಗಳು ಆರೋಪ ಪಟ್ಟಿಯ ಭಾಗವಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಆಡಿಯೊ ಕ್ಲಿಪ್‌ನಲ್ಲಿನ ಧ್ವನಿ ಅರ್ಜಿದಾರರದ್ದೇ ಎಂಬುದು ಖಾತರಿಯಾಗಿದೆ. ಇದು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾದ ಪ್ರಕರಣವಾಗಿದೆ. ಹೀಗಾಗಿ, ಅರ್ಜಿದಾರರಿಗೆ ಈ ಹಂತದಲ್ಲಿ ನೆರವಾಗಲಾಗದು” ಎಂದು ಹೇಳಿದೆ.

ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ರಶ್ಮಿ ಜಾಧವ್‌ ಅವರು “ಅರ್ಜಿದಾರರು ಸರ್ಕಾರದ ವಿರುದ್ಧ ಮಾತ್ರವಲ್ಲದೇ ಸ್ಥಳೀಯ ಶಾಸಕರ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಕೋವಿಡ್‌-19 ಪರಿಸ್ಥಿತಿಯನ್ನು ಶಾಸಕರು ಹಣ ಸಂಪಾದನೆಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಡಿಯೊ ಕ್ಲಿಪ್‌ನಲ್ಲಿ ಹೇಳುವ ಮೂಲಕ ಜನರಲ್ಲಿ ಭಯಕ್ಕೆ ಕಾರಣರಾಗಿದ್ದಾರೆ. ಪರಿಶೀಲನೆ ನಡೆಸದೇ ಜನರಿಗೆ ಬಲವಂತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, 40,000 ಸಾವಿರ ರೂಪಾಯಿ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ” ಎಂದಿದ್ದರು.

“ಕೋವಿಡ್‌-19 ಮೊದಲನೇ ಅಲೆಯ ಸಂದರ್ಭದಲ್ಲಿ ಅರ್ಜಿದಾರರು ಉದ್ದೇಶಪೂರ್ವಕವಾಗಿ ಅದಕ್ಕೆ ಕೋಮು ಬಣ್ಣ ಹಚ್ಚಿ, ಪ್ರಚೋದನಾಕಾರಿ ಹೇಳಿಕಗಳನ್ನು ನೀಡಿದ್ದಾರೆ. ರಾಜ್ಯವು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಇಂಥ ಹೇಳಿಕೆಗಳು ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಹಾನಿ ಮಾಡುವಂತವಾಗಿವೆ. ಅರ್ಜಿದಾರರ ವಿರುದ್ಧ ಬೇರೆಯ ಕ್ರಿಮಿನಲ್‌ ಪ್ರಕರಣಗಳೂ ಬಾಕಿ ಇವೆ” ಎಂದು ವಾದಿಸಿತ್ತು.

ಅರ್ಜಿದಾರರ ಪರ ವಕೀಲ ತಲ್ಹಾ ಇಸ್ಮಾಯಿಲ್‌ ಬೆಂಗ್ರೆ “ಆಡಿಯೊ ಕ್ಲಿಪ್‌ ಅನ್ನು ಪರಿಗಣಿಸಿದರೂ ಅದು ಆರೋಪಿತ ಅಪರಾಧವಾಗುವುದಿಲ್ಲ. ಇದನ್ನು ಬಳಕೆ ಮಾಡಿ ಪ್ರಾಸಿಕ್ಯೂಷನ್‌ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಲಿದೆ” ಎಂದು ವಾದಿಸಿದ್ದರು.

Attachment
PDF
Althaf Hussain Yane Althaf Moosa Vs State of Karnataka
Preview
Kannada Bar & Bench
kannada.barandbench.com