ಕರ್ನಾಟಕ ರಾಜ್ಯ ಹಜ್‌ ಸಮಿತಿಯ ಅಧ್ಯಕ್ಷರು, ಸದಸ್ಯರ ಅವಧಿ ಹೆಚ್ಚಳ ಕೋರಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಸಭೆ ಕರೆಯಲು ವಿಳಂಬವಾಗಿದೆ ಎನ್ನುವ ಕಾರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ಅವಧಿ ವಿಸ್ತರಿಸಲಾಗದು. ಅಧ್ಯಕ್ಷರ ಅವಧಿ ಸದಸ್ಯತ್ವದೊಂದಿಗೆ ಸೇರಿರುತ್ತದೆ. ಒಮ್ಮೆ ಸದಸ್ಯತ್ವದ ಅವಧಿ ಮುಗಿದರೆ ಅಧ್ಯಕ್ಷರ ಅವಧಿಯೂ ಮುಕ್ತಾಯವಾಗುತ್ತದೆ ಎಂದಿರುವ ಪೀಠ.
Karnataka High Court
Karnataka High Court

ಕರ್ನಾಟಕ ರಾಜ್ಯ ಹಜ್‌ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ.

ಕರ್ನಾಟಕ ರಾಜ್ಯ ಹಜ್‌ ಸಮಿತಿಯ ಅಧ್ಯಕ್ಷ ರೌಫುದ್ದೀನ್‌ ಕಚೇರಿವಾಲೆ ಸೇರಿದಂತೆ ಹಲವು ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

“ಅಧ್ಯಕ್ಷರ ಹುದ್ದೆಗೆ ನಿರ್ದಿಷ್ಟ ಅವಧಿ ನಿಗದಿಪಡಿಸಲಾಗಿರುತ್ತದೆ. ಆ ಅವಧಿ ಸಮಿತಿ ಅಧಿಕಾರವಹಿಸಿಕೊಂಡ ದಿನದಿಂದ ಲೆಕ್ಕಕ್ಕೆ ಬರುತ್ತದೆ. ಹಜ್‌ ಸಮಿತಿ ಕಾಯಿದೆ ಸೆಕ್ಷನ್‌ 21(1) ಪ್ರಕಾರ, ಸಮಿತಿಗೆ ಹೊಸದಾಗಿ ಅಧ್ಯಕ್ಷರು ಮತ್ತು ಸದಸ್ಯರು ಆಯ್ಕೆಯಾದ ನಂತರ 45 ದಿನಗಳಲ್ಲಿ ಸರ್ಕಾರ ಮೊದಲ ಸಭೆ ಕರೆಯಬೇಕು. ಆ ಸಭೆ ಕರೆಯಲು ವಿಳಂಬವಾಗಿದೆ ಎನ್ನುವ ಕಾರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು ವಿಸ್ತರಿಸಲಾಗದು. ಅಧ್ಯಕ್ಷರ ಅವಧಿ ಸದಸ್ಯತ್ವದೊಂದಿಗೆ ಸೇರಿರುತ್ತದೆ. ಒಮ್ಮೆ ಅವರ ಸದಸ್ಯತ್ವದ ಅವಧಿ ಮುಗಿದರೆ ಅದರ ಜೊತೆ ಅಧ್ಯಕ್ಷರ ಅವಧಿಯೂ ಮುಕ್ತಾಯವಾಗುತ್ತದೆ” ಎಂದು ಪೀಠ ಹೇಳಿದೆ.

“ಅಧ್ಯಕ್ಷರ ಅವಧಿ ಮೂರು ವರ್ಷ, ಆದರೆ ಅಧ್ಯಕ್ಷರ ನೇಮಕಕ್ಕೆ ಒಂದು ವರ್ಷ ತಡವಾಗಿ ಚುನಾವಣೆ ನಡೆದಿದೆ. ಹೀಗಾಗಿ, ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಲಾಗಿದೆ. ಆದರೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ಅಧ್ಯಕ್ಷರ ಹುದ್ದೆಗೆ ನಿಗದಿಪಡಿಸಿರುವ ಅವಧಿಯೇ ಮೂರು ವರ್ಷ, ಸಮಿತಿ ರಚನೆ ನಂತರ ಒಂದು ವರ್ಷದ ಬಳಿಕ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದೆ ಎಂಬ ಕಾರಣಕ್ಕೆ ಅವಧಿಯನ್ನು ನಿರ್ದಿಷ್ಟಪಡಿಸಿದ ದಿನಾಂಕದ ನಂತರವೂ ವಿಸ್ತರಣೆಗೆ ಅವಕಾಶವಿಲ್ಲ” ಎಂದು ಅರ್ಜಿ ವಜಾಗೊಳಿಸಿದೆ.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಹಜ್‌ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗೆ ಮೂರು ವರ್ಷದ ಅವಧಿ ನಿಗದಿಪಡಿಸಲಾಗಿದ್ದು, ಅದರ ವಿಸ್ತರಣೆಗೆ ಅವಕಾಶವಿಲ್ಲ. ಅರ್ಜಿದಾರರ ಮನವಿ ಕಾನೂನುಬಾಹಿರವಾಗಿದೆ ಮತ್ತು ವಿಸ್ತರಣೆಗೆ ನಿಯಮಗಳಲ್ಲಿ ಅವಕಾಶವೇ ಇಲ್ಲ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಕರ್ನಾಟಕ ರಾಜ್ಯ ಹಜ್‌ ಸಮಿತಿಗೆ 2020ರ ಜನವರಿ 20ರಂದು ಮೂರು ವರ್ಷಗಳ ಅವಧಿಗೆ  ನಾಮನಿರ್ದೇಶನಗೊಂಡಿದ್ದರು. ನಂತರ ಹೈಕೋರ್ಟ್‌ ಖುಸ್ರು ಖುರೇಶಿ ಮತ್ತು ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ 2021ರ ಜುಲೈ 7ಕ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ತಡವಾಗಿ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆದ ಹಿನ್ನೆಲೆಯಲ್ಲಿಅವರ ಅವಧಿಯನ್ನೂ ಸಹ 2024ರ ಜುಲೈ 6ರವರೆಗೆ ವಿಸ್ತರಣೆ ಮಾಡಬೇಕು ಎಂದು ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

Attachment
PDF
Raufuddin Kacheriwalay Vs State of Karnataka.pdf
Preview
Kannada Bar & Bench
kannada.barandbench.com