ಎರಡನೇ ಪತಿ ಜೊತೆ ಸೇರಿ ಮಕ್ಕಳಿಗೆ ಚಾಕು ಕಾಯಿಸಿ ಸುಟ್ಟ ಆರೋಪ: ತಾಯಿ ಸೇರಿ ನಾಲ್ವರಿಗೆ ನಿರೀಕ್ಷಣಾ ಜಾಮೀನು ಮಂಜೂರು

ಅರ್ಜಿದಾರ ಆರೋಪಿಗಳು ತನಿಖೆಗೆ ಸಹಕರಿಸಿದ್ದು, ಆರೋಪವು ವಿಚಾರಣೆಯಲ್ಲಿ ಸಾಬೀತಾಗಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
High Court of Karnataka
High Court of Karnataka
Published on

ಎರಡನೇ ಪತಿ, ಅತ್ತೆ ಮಾವನ ಜೊತೆ ಸೇರಿಕೊಂಡು ತನ್ನದೇ ಮಕ್ಕಳಿಗೆ ಚಾಕು ಕಾಯಿಸಿ ಸುಡುವುದು ಮತ್ತು ಕಡ್ಡಿಯಿಂದ ಹೊಡೆದ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಮಕ್ಕಳ ಹೆತ್ತ ತಾಯಿ, ಎರಡನೇ ಪತಿ ಹಾಗೂ ಆತನ ತಂದೆ-ತಾಯಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಳ್ಳೀಪುರ ಗ್ರಾಮದ ಕೆಂಡಗಣ್ಣಸ್ವಾಮಿ ಆತನ ಪತ್ನಿ ರಂಜಿತಾ, ಕೆಂಡಗಣ್ಣಸ್ವಾಮಿ ತಂದೆ ಸ್ವಾಮಿ ಹಾಗೂ ತಾಯಿ ಮಹದೇವಮ್ಮ ಅವರಿಗೆ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ರಜಾಕಾಲೀನ ಏಕಸದಸ್ಯ ಪೀಠವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅರ್ಜಿದಾರ ಆರೋಪಿಗಳು ತನಿಖೆಗೆ ಸಹಕರಿಸಿದ್ದು, ಆರೋಪವು ವಿಚಾರಣೆಯಲ್ಲಿ ಸಾಬೀತಾಗಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ತಲಾ ಐವತ್ತು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ಒಬ್ಬರ ಭದ್ರತೆ ಒದಗಿಸಬೇಕು. ಅರ್ಜಿದಾರರು ವಿಚಾರಣೆಗೆ ಹಾಜರಾಗಬೇಕು. ಯಾವುದೇ ರೀತಿಯಲ್ಲೂ ಸಾಕ್ಷಿ ತಿರುಚಬಾರದು ಮತ್ತು ಅನುಮತಿ ಇಲ್ಲದೇ ಚಾಮರಾಜನಗರ ಜಿಲ್ಲೆ ತೊರೆಯಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ರಂಜಿತಾ ತಮ್ಮ ಮೊದಲ ಪತಿ ನಂಜೇಗೌಡ ಅವರಿಂದ  ಒಂದು ಗಂಡು (ಸದ್ಯ 6 ವರ್ಷ), ಒಂದು ಹೆಣ್ಣು (4 ವರ್ಷ) ಮಗುವನ್ನು ಪಡೆದಿದ್ದರು. ಮೊದಲ ಪತಿ 2024ರ ಮಾರ್ಚ್ ನಲ್ಲಿ ನಿಧನರಾದ ನಂತರ ಕಳ್ಳೀಪುರದ ಗ್ರಾಮದ ಕೆಂಡಗಣ್ಣ ಸ್ವಾಮಿ ಅವರನ್ನು ರಂಜಿತಾ ಎರಡನೇ ಮದುವೆಯಾಗಿದ್ದರು. ದಂಪತಿ ಕಳ್ಳೀಪುರದಲ್ಲೇ ಮಕ್ಕಳೊಂದಿಗೆ ನೆಲೆಸಿದ್ದರು. ಕೆಂಡಗಣ್ಣ ಸ್ವಾಮಿ 2025ರ ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 2ರವರ ನಡುವೆ ಮದ್ಯ ಸೇವಿಸಿ ಬಂದು ಮಕ್ಕಳಿಗೆ ಹೊಡೆಯುತ್ತಿದ್ದರು. ಕೈ- ಕಾಲು, ಬೆನ್ನು  ಮೇಲೆ ಚಾಕು ಬಿಸಿ ಮಾಡಿ ಬರೆ ಇಟ್ಟಿದ್ದರು. ತಲೆಗೆ ಹೊಡೆದಿದ್ದರು. ಕಾಲಿನಿಂದ ಒದಿದ್ದರು. ಮೇಲಕ್ಕೆ ಎತ್ತಿ  ಕುಕ್ಕಿದ್ದರು. ಬೆನ್ನಿಗೆ ಬಾಸುಂಡೆ ಬರುವಂತೆ ಕಡ್ಡಿಯಿಂದ ಹೊಡೆದಿದ್ದಾರೆ. .ಕೆಂಡಗಣ್ಣನ ತಂದೆ ಸ್ವಾಮಿ ಮದ್ಯಪಾನ ಮಾಡಿ ಬಂದು ಮಕ್ಕಳನ್ನು ಬಲವಂತವಾಗಿ ತಮ್ಮ ಬಳಿ ಮಲಗಿಸಿಕೊಳ್ಳುತ್ತಿದ್ದರು. ಸ್ವಾಮಿ ಅವರ ಪತ್ನಿ ಮಹದೇವಮ್ಮ, ಮಕ್ಕಳನ್ನು ತಾಯಿ ರಂಜಿತಾ ಅವರೊಂದಿಗೆ ಇರಲು ಬಿಡದೆ, ಹೊಡೆದು ಬಲವಂತವಾಗಿ ತಮ್ಮ ಬಳಿ ಮಲಗಿಸಿಕೊಳ್ಳುತ್ತಿದ್ದರು ಎಂದು ನಂಜೇಗೌಡರ ತಂದೆ ಮಾದೇಗೌಡ ಸಲ್ಲಿಸಿದ್ದ ದೂರು ಆಧರಿಸಿ ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಸೆಕ್ಷನ್‌ 75; ಬಿಎನ್‌ಎಸ್‌ ಸೆಕ್ಷನ್‌ಗಳಾದ 115(2),118(1) ಅಡಿ ಎಫ್ಐಆರ್‌ ದಾಖಲಿಸಲಾಗಿದೆ.

ಆರೋಪಿಗಳಿಗೆ ಚಾಮರಾಜನಗರದ ಜಿಲ್ಲಾ ಪ್ರಧಾನ ಸಿವಿಲ್ (ಹಿರಿಯ) ಮತ್ತು ಸಿಜೆಎಂ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿ 2026ರ ಜನವರಿ 12ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com