ಮನೆಕೆಲಸ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣ: ಪ್ರಜ್ವಲ್‌ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಕಾಯ್ದಿರಿಸಿದ ಹೈಕೋರ್ಟ್‌

ಇದರೊಂದಿಗೆ ಪ್ರಜ್ವಲ್‌ ವಿರುದ್ಧ ಎಸ್‌ಐಟಿ ವ್ಯಾಪ್ತಿಯಲ್ಲಿರುವ ಎಲ್ಲಾ ನಾಲ್ಕು ಪ್ರಕರಣಗಳ ಜಾಮೀನು ಆದೇಶ ಕಾಯ್ದಿರಿಸಿದಂತಾಗಿದ್ದು, ಒಂದೇ ಬಾರಿಗೆ ಆದೇಶ ಪ್ರಕಟಿಸುವುದಾಗಿಯೂ ನ್ಯಾಯಾಲಯ ಹೇಳಿದೆ.
Prajwal Revanna & Karnataka HC
Prajwal Revanna & Karnataka HC
Published on

ತೋಟದ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಕಾಯ್ದಿರಿಸಿದೆ.

ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದದ ವೇಳೆ ಪ್ರಕರಣದಲ್ಲಿನ ವಿಚಾರಗಳು ಘೋರವಾಗಿವೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಹೇಳಿದೆ.

ವಿಚಾರಣೆಯ ವೇಳೆ ಪ್ರಜ್ವಲ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಮಾಜಿ ಕಾರು ಚಾಲಕ ಕಾರ್ತಿಕ್‌ ಎಂಬಾತನ ಪಿತೂರಿಯಿಂದ ಇದೆಲ್ಲವೂ ನಡೆದಿದೆ. ವಾಸ್ತವಿಕ ನೆಲೆಗಟ್ಟಿನಲ್ಲಿ ವಿಚಾರಣಾಧೀನ ನ್ಯಾಯಾಲಯವು ಎಲ್ಲವನ್ನೂ ಪರಿಶೀಲಿಸಬೇಕು. ಮಸಾಲೆರಹಿತವಾಗಿ ಪ್ರಕರಣವನ್ನು ನೋಡಬೇಕಿದೆ. ಸಂತ್ರಸ್ತೆ ಎನ್ನಲಾದ ಮಹಿಳೆಯು ಅತ್ಯಾಚಾರ ನಡೆದ ಐದು ವರ್ಷಗಳ ಬಳಿಕ ದೂರು ನೀಡಿದ್ದಾಳೆ” ಎಂದರು. ಆಗ ಪೀಠವು “ಆಕೆಗೆ ಆ ಸಂದರ್ಭದಲ್ಲಿ ಆಯ್ಕೆ ಏನಿತ್ತು?” ಎಂದಿತು.

ಇದಕ್ಕೆ ನಾವದಗಿ ಅವರು “ವಿಚಾರಣೆಗೆ (ಟ್ರಯಲ್‌) ಸಾಕಷ್ಟು ಪ್ರಶ್ನೆಗಳಿರಲಿವೆ. ಅತ್ಯಾಚಾರ ನಡೆದಿದೆಯೇ ಇಲ್ಲವೇ ಎಂಬ ವಿಚಾರದಲ್ಲಿ ಮುಂದುವರಿದು ವಾದಿಸಲು ನಾನು ಬಯಸುವುದಿಲ್ಲ. ಅತ್ಯಂತ ಜವಾಬ್ದಾರಿಯುತವಾಗಿ ವಾದ ಮಂಡಿಸಿದ್ದು, ಆ ಹಂತದಲ್ಲಿ ದೂರಿನಲ್ಲಿ ಆ ಹೇಳಿಕೆಗಳನ್ನು ನೀಡಿರುವುದನ್ನು ನೋಡಿದರೆ ಇದು ಅತ್ಯಾಚಾರವಾಗದು” ಎಂದರು.

ಇದಕ್ಕೆ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್‌ ಅವರು “ಕಾಮಾಂಧತೆ ಎನ್ನುವುದಕ್ಕೆ ಏನಾದರೂ ವ್ಯಾಖ್ಯಾನ ಇದ್ದರೆ ಅದನ್ನೂ ಈ ಪ್ರಕರಣ ಮೀರುತ್ತದೆ. ಈ ಪ್ರಕರಣದಲ್ಲಿನ ದೂರುದಾರೆಯು ಪ್ರಜ್ವಲ್‌ ನಿಯಂತ್ರಣದಲ್ಲಿದ್ದಿದ್ದು ಅಲ್ಲದೇ ಆಕೆಯು ಪ್ರಜ್ವಲ್‌ಗಿಂತ ಎರಡು ಪಟ್ಟು ವಯಸ್ಸಿನಲ್ಲಿ ಹಿರಿಯಳಾಗಿದ್ದಾರೆ. ಇಂಥ ಮಹಿಳೆ ಪ್ರಜ್ವಲ್‌ನ ಕಾಲು ಹಿಡಿಯುತ್ತಾಳೆ. ಮುಂದಿನ ವಿಚಾರಗಳನ್ನು ನನಗೆ ವಿವರಿಸಲಾಗುತ್ತಿಲ್ಲ” ಎಂದು ಬೇಸರಿಸಿದರು.

“ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಪ್ರಜ್ವಲ್‌ ಚಿತ್ರ, ಧ್ವನಿ, ಮಾತುಗಳು ಹೊಂದಾಣಿಕೆಯಾಗಿವೆ. ವಿಡಿಯೋದಲ್ಲಿ ಸಂತ್ರಸ್ತೆ ಪರಿಪರಿಯಾಗಿ ಅತ್ಯಾಚಾರ ಮಾಡದಂತೆ ಪ್ರಜ್ವಲ್‌ಗೆ ಕೋರಿದ್ದಾಳೆ. ಇದರ ಅರ್ಥ ಇದು ಸಮ್ಮತಿ ಎಂತಲೇ? ಪ್ರಜ್ವಲ್‌ ಕುಟುಂಬ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಾಢ್ಯವಾದ ಕುಟುಂಬವಾಗಿದೆ. ಆಕೆಯನ್ನು ದೂರು ನೀಡದಂತೆ ಅಕ್ಷರಶಃ ಬೆದರಿಸಲಾಗಿದೆ. ಅಪಹರಣದ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವುದು ಇದೇ ಮಹಿಳೆಯೇ.. ಲೋಕಸಭಾ ಚುನಾವಣೆಗೆ ಮತ್ತು ಆನಂತರ ಎರಡು ಬಾರಿ ಆಕೆಯನ್ನು ಅಪಹರಿಸಲಾಗಿದೆ” ಎಂದರು.

“ತನಗೆ ಇಬ್ಬರು ಪುತ್ರಿಯರಿದ್ದು, ಮೊದಲನೆಯವಳಿಗೆ ಮದುವೆಯಾಗಿದ್ದು, ಎರಡನೇ ಮಗಳಿಗೆ ಮದುವೆಯಾಗಬೇಕಾಗಿದ್ದರಿಂದ ದೂರು ನೀಡಿಲ್ಲ ಎಂದು ಹೇಳಿದ್ದಾಳೆ. ಆನಂತರ ಇಡೀ ಕುಟುಂಬ ಬೆಂಬಲ ನೀಡಿರುವುದರಿಂದ ಆಕೆ ದೂರು ನೀಡಿದ್ದಾಳೆ. ಆರೋಪ ಪಟ್ಟಿಯಲ್ಲಿನ ಸಾಕಷ್ಟು ವಿಚಾರಗಳನ್ನು ಓದಲು ನನಗೆ ಕಷ್ಟವಾಗುತ್ತದೆ. ಇದಕ್ಕಾಗಿಯೇ ಸರ್ಕಾರಕ್ಕೆ ನನಗೆ ಬಿಡುಗಡೆ ಮಾಡುವಂತೆಯೂ ಕೋರಿದ್ದೇನೆ” ಎಂದು ಘಟನೆಯನ್ನು ಪ್ರೊ. ರವಿವರ್ಮ ಕುಮಾರ್‌ ವಿವರಿಸಿದರು.

ಅಂತಿಮವಾಗಿ ಪೀಠವು ಆದೇಶ ಕಾಯ್ದಿರಿಸಿತು. ಇದರೊಂದಿಗೆ ಪ್ರಜ್ವಲ್‌ ವಿರುದ್ಧ ಎಸ್‌ಐಟಿ ವ್ಯಾಪ್ತಿಯಲ್ಲಿರುವ ಎಲ್ಲಾ ನಾಲ್ಕು ಪ್ರಕರಣಗಳ ಜಾಮೀನು ಆದೇಶ ಕಾಯ್ದಿರಿಸಿದಂತಾಗಿದ್ದು, ಒಂದೇ ಬಾರಿಗೆ ಆದೇಶ ಪ್ರಕಟಿಸುವುದಾಗಿಯೂ ನ್ಯಾಯಾಲಯ ಹೇಳಿದೆ.

Also Read
ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿಗಳ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ನಾಲ್ಕು ಪ್ರಕರಣಗಳ ಪೈಕಿ ಒಂದು ನಿಯತ ಜಾಮೀನು ಮತ್ತು ಮೂರು ನಿರೀಕ್ಷಣಾ ಜಾಮೀನು ಅರ್ಜಿಗಳು ಸೇರಿವೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಶಾಸಕ ಎಚ್‌ ಡಿ ರೇವಣ್ಣ ಅವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿದ ದೂರಿನ ಅನ್ವಯ ಪ್ರಜ್ವಲ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಆನಂತರ ಅತ್ಯಾಚಾರ ಆರೋಪ ಹೊರಿಸಲಾಗಿದೆ. ಈ ಪ್ರಕರಣದಲ್ಲಿ ಜಾಮೀನು ಕೋರಿದ್ದಾರೆ.

ಇನ್ನು, ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೊಬ್ಬರು ನೀಡಿದ ದೂರಿನ ಅನ್ವಯ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅಶ್ಲೀಲ ವಿಡಿಯೋಗಳ ಹಂಚಿಕೆ ಆರೋಪದ ಮೇಲೆಯೂ ಪ್ರಜ್ವಲ್‌ ವಿರುದ್ಧ ಪ್ರತ್ಯೇಕವಾಗಿ ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣದಲ್ಲಿ ಅವರು ನಿರೀಕ್ಷಣಾ ಜಾಮೀನು ಕೋರಿದ್ದಾರೆ.

Kannada Bar & Bench
kannada.barandbench.com