ಚುನಾವಣೆಯಲ್ಲಿ ಅಕ್ರಮ ನಡೆಸುವ ಮೂಲಕ ಆಯ್ಕೆಯಾಗಿರುವ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಡಿ ಸಿ ಗೌರಿಶಂಕರ್ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ ಸುರೇಶ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶ ಕಾಯ್ದಿರಿಸಿದೆ.
ಸುದೀರ್ಘವಾಗಿ ವಾದ–ಪ್ರತಿವಾದ ಆಲಿಸಿ, ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿರುವ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತು.
ಮತದಾರರಿಗೆ ಆಮಿಷವವೊಡ್ಡಿ ಮತ ಪಡೆಯುವ ಮೂಲಕ ಗೌರಿಶಂಕರ್ ಅವರು ಪ್ರಜಾ ಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 123 ಉಲ್ಲಂಘಿಸಿದ್ದಾರೆ. ಹೀಗಾಗಿ, ಅವರನ್ನು ಅನರ್ಹಗೊಳಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ.
ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌರಿಶಂಕರ್ ವ್ಯಾಪಕ ಚುನಾವಣಾ ಅಕ್ರಮ ಎಸಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮತದಾರರಿಗೆ ಮತಯಾಚನೆ ಪತ್ರದ ಜೊತೆ ಗುಂಪು ಆರೋಗ್ಯ ವಿಮಾ ಪಾಲಿಸಿಯ ಆಮಿಷವೊಡ್ಡಿ ಅವರಿಂದ ಮತಗಳನ್ನು ಪಡೆದು ಆರಿಸಿ ಬಂದಿದ್ದಾರೆ ಎಂಬುದು ಅರ್ಜಿದಾರ ಸುರೇಶ್‌ಗೌಡ ಅವರ ಆಕ್ಷೇಪವಾಗಿದೆ.