[ಶೇ. 40 ಕಮಿಷನ್ ಸರ್ಕಾರ] ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿಯಿಂದ ಮಾನಹಾನಿ ದಾವೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ಸಿಎಂ, ಮಂತ್ರಿಗಳು ಬಂದು ಹೋಗುತ್ತಾರೆ. ಆದರೆ, ಸರ್ಕಾರ ಯಾವಾಗಲೂ ಇರುತ್ತದೆ. ಸರ್ಕಾರವನ್ನು ವಿರೋಧಿಸಿದ ಮಾತ್ರಕ್ಕೆ ರಾಜಕೀಯ ಪಕ್ಷವೊಂದು ದಾವೆ ಹೂಡಲಾಗದು. ಹೀಗಾದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದು ಅಪರಾಧವಾಗಲಿದೆ” ಎಂದ ಶಶಿಕಿರಣ್‌.
Karnataka HC & Rahul Gandhi
Karnataka HC & Rahul Gandhi
Published on

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯ ವಾಹಿನಿಯ ಆಂಗ್ಲ ಮತ್ತು ಕನ್ನಡ ದಿನ ಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್‌ ಜಾಹೀರಾತು ನೀಡಿದ್ದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಆರೋಪದ ಕುರಿತು ಬಿಜೆಪಿ ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶ ಕಾಯ್ದಿರಿಸಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವ ಆದೇಶ ರದ್ದತಿ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠವು ನಡೆಸಿತು.

ಬಿಜೆಪಿ ಪ್ರತಿನಿಧಿಸಿದ್ದ ವಕೀಲ ಎಂ ವಿನೋದ್‌ ಕುಮಾರ್‌ ಅವರು “ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹೊರಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ರಾಹುಲ್‌ ಗಾಂಧಿ ಅವರ ಹೆಸರಿತ್ತು. ಆಕ್ಷೇಪಾರ್ಹವಾದ ಜಾಹೀರಾತಿಗೂ ರಾಹುಲ್‌ ಗಾಂಧಿಗೂ ಸಂಬಂಧವಿದೆಯೇ ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಬೇಕಿದೆ. ಜಾಹೀರಾತು ಓದಿದ ಯಾರಿಗಾದರೂ ಅದು ಬಿಜೆಪಿ ವಿರುದ್ಧವೇ ನೀಡಿರುವುದು ಎಂದರ್ಥವಾಗುತ್ತದೆ” ಎಂದರು.

ಆಗ ಪೀಠವು “ರಾಹುಲ್‌ ಮಾಡಿರುವ ರೀಟ್ವೀಟ್‌ ಅನ್ನು ಮಾರ್ಕ್‌ ಮಾಡಿಲ್ಲ ಎಂಬುದು ನಿಜವೇ?” ಎಂದಿತು.

ಅದಕ್ಕೆ ವಿನೋದ್‌ ಕುಮಾರ್‌ ಅವರು “ರೀಟ್ವೀಟ್‌ ಮಾಡಿರುವುದು ಕಡತದಲ್ಲಿದೆ. ಇದನ್ನು ವಿಚಾರಣೆಯ ಸಂದರ್ಭದಲ್ಲಿ ಸಲ್ಲಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ. ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ಟ್ವಿಟರ್‌ನಿಂದ ಕೆಲವು ದಾಖಲೆಗಳನ್ನು ತರಿಸಿಕೊಳ್ಳಬಹುದು ಮತ್ತು ಮಾರ್ಕ್‌ ಮಾಡಬಹುದು. ರಾಹುಲ್‌ ಅರ್ಜಿಯಲ್ಲಿ ರೀಟ್ವೀಟ್‌ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅದು ಅಪರಾಧವಲ್ಲ ಎನ್ನುತ್ತಿದ್ದಾರೆ. ಇದನ್ನು ವಿಚಾರಣೆಯಲ್ಲಿ ಸಾಬೀತುಪಡಿಸಬೇಕಿದೆಯಷ್ಟೆ” ಎಂದರು.

ಮುಂದುವರಿದು, “ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತನ್ನು ರೀಟ್ವೀಟ್‌ ಮಾಡಲಾಗಿದೆ ಎಂದು ರಾಹುಲ್‌ ಹೇಳಿದ್ದಾರೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಮಾನಹಾನಿ ಮಾಡುವುದೂ ಅಪರಾಧ. ಸಂಜ್ಞೇ ಪರಿಗಣಿಸುವಾಗ ನ್ಯಾಯಾಲಯವು ಮೇಲ್ನೋಟಕ್ಕೆ ಪ್ರಕರಣ ಇದೆ ಎಂದು ಪರಿಶೀಲಿಸಿ, ಸಮನ್ಸ್‌ ಜಾರಿ ಮಾಡಿದೆ. ಆಗ ನ್ಯಾಯಾಲಯವು ವಿವೇಚನ ಬಳಸಿದೆ” ಎಂದರು.

“ಸ್ವತಂತ್ರ ಸಾಕ್ಷಿಯೂ ಸೇರಿ ಐವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ. ಈ ಹೇಳಿಕೆಗಳು ಮತ್ತು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ನ್ಯಾಯಾಲಯವು ಮೇಲ್ನೋಟಕ್ಕೆ ಸಂಜ್ಞೇ ತೆಗೆದುಕೊಂಡಿದೆ. ಪತ್ರಿಕೆ ಖರೀದಿಸಿದವರು ಮಾತ್ರ ಜಾಹೀರಾತು ನೋಡಬಹುದು. ಆದರೆ, ಎಕ್ಸ್‌ನಲ್ಲಿ ಪ್ರತಿದಿನವೂ ನೋಡಬಹುದಾಗಿದೆ. ಹಂಚಿಕೊಳ್ಳಬಹುದಾಗಿದೆ. ಪತ್ರಿಕೆ ಬರುವ ವೇಳೆಗೆ ರಾಹುಲ್‌ ಗಾಂಧಿ ಅವರು ಆಕ್ಷೇಪಾರ್ಹವಾದ ಜಾಹೀರಾತನ್ನು ಟ್ವೀಟ್‌ ಮಾಡಿದ್ದಾರೆ. ಹೀಗಾಗಿ, ಅದು ಸಾರ್ವಜನಿಕಗೊಂಡಿತ್ತು ಎಂದು ಹೇಳಲಾಗದು” ಎಂದರು.

ರಾಹುಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಶಶಿಕಿರಣ್‌ ಶೆಟ್ಟಿ ಅವರು “ರಾಹುಲ್‌ ರೀಟ್ವೀಟ್‌ ಮಾಡಿರುವುದಕ್ಕೆ ಯಾವುದೇ ದಾಖಲೆಯನ್ನು ಬಿಜೆಪಿ ಸಲ್ಲಿಸಿಲ್ಲ. ಅದನ್ನು ಎಷ್ಟು ಜನ ನೋಡಿದ್ದಾರೆ ಮತ್ತು ಅದರಿಂದ ಮಾನಹಾನಿಯಾಗಿದೆಯೇ ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ತಾರಾ ಪ್ರಚಾರಕರ ಪಟ್ಟಿಯಲ್ಲಿ 40 ಮಂದಿ ಇದ್ದರು ಎಂದು ಹೇಳುವ ಬಿಜೆಪಿಯು ಅವರನ್ನೆಲ್ಲಾ ದಾವೆಯಲ್ಲಿ ಪ್ರತಿವಾದಿಗಳನ್ನಾಗಿ ಏಕೆ ಮಾಡಿಲ್ಲ? ರಾಹುಲ್‌ ಉಪಾಧ್ಯಕ್ಷರಾಗಿದ್ದಾರೆ ಎಂಬುದರ ಮೇಲೆ ಇಡೀ ದೂರು ನಿಂತಿದೆ. ಆದರೆ, ಆ ಸಂದರ್ಭದಲ್ಲಿ ರಾಹುಲ್‌ ಉಪಾಧ್ಯಕ್ಷರಾಗಿರಲೇ ಇಲ್ಲ. ರೀಟ್ವೀಟ್‌ ಮಾಡುವುದು ಮಾನಹಾನಿಯಾಗುತ್ತದೆಯೇ ಎಂಬ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಹಾಲಿ ಪ್ರಕರಣದಲ್ಲಿ ರಾಹುಲ್‌ ಅವರು ರೀಟ್ವೀಟ್‌ ಮಾಡಿಲ್ಲ” ಎಂದರು.

“ಜಾಹೀರಾತಿನಲ್ಲಿ ಬಿಜೆಪಿಯ ಹೆಸರನ್ನೇ ಉಲ್ಲೇಖಿಸಿಲ್ಲ. ಸರ್ಕಾರವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ, ಮಂತ್ರಿ ಆಗಿ ಹೋಗುತ್ತಾರೆ. ಆದರೆ, ಸರ್ಕಾರ ಯಾವಾಗಲೂ ಇರುತ್ತದೆ. ಸರ್ಕಾರವನ್ನು ವಿರೋಧಿಸಿದ ಮಾತ್ರಕ್ಕೆ ರಾಜಕೀಯ ಪಕ್ಷವೊಂದು ದಾವೆ ಹೂಡಲಾಗದು. ಹೀಗಾದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದು ಅಪರಾಧವಾಗಲಿದೆ” ಎಂದರು.

ಪ್ರಕರಣದ ಹಿನ್ನೆಲೆ: ಬಿಜೆಪಿಯ ವಿರುದ್ಧ ಆಧಾರರಹಿತ, ಅತಾರ್ಕಿಕ ಮತ್ತು ಸುಳ್ಳು ಜಾಹೀರಾತನ್ನು ಪತ್ರಿಕೆಗಳ ಮುಖಪುಟದಲ್ಲಿ ನೀಡುವ ಮೂಲಕ ಆರೋಪಿಗಳು ಮಾನಹಾನಿ ಮಾಡಿರುವುದಲ್ಲದೇ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆಕ್ಷೇಪಾರ್ಹ ಜಾಹೀರಾತಿನಲ್ಲಿ “ಭ್ರಷ್ಟಾಚಾರ ದರ ಪಟ್ಟಿ” ಅಡಿಯಲ್ಲಿ ಹಲವು ಸುಳ್ಳುಗಳನ್ನು ಸೇರಿಸಲಾಗಿದೆ. ಆರೋಪಿಗಳು ತಮಗೆ ಸರಿ ಎನಿಸಿದ್ದನ್ನು ರಂಜಕವಾಗಿ ಜಾಹೀರಾತಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಎಂದು ರಾಜ್ಯ ಬಿಜೆಪಿ ಘಟಕವು ಮಾನಹಾನಿ ದಾವೆಯಲ್ಲಿ ಆಕ್ಷೇಪಿಸಿತ್ತು.

ಕೆಎಸ್‌ಡಿಎಲ್‌ನಲ್ಲಿ ಹುದ್ದೆಗೆ 5-15 ಕೋಟಿ ರೂಪಾಯಿ, ಎಂಜಿನಿಯರ್‌ ಹುದ್ದೆಗೆ ರೂ. 1-5 ಕೋಟಿ, ಉಪ ನೋಂದಣಾಧಿಕಾರಿ ಹುದ್ದೆಗೆ ರೂ. 50 ಲಕ್ಷದಿಂದ- 5 ಕೋಟಿ, ಬೆಸ್ಕಾಂನಲ್ಲಿನ ಹುದ್ದೆಗೆ ರೂ. 1 ಕೋಟಿ, ಪಿಎಸ್‌ ಹುದ್ದೆಗೆ ರೂ. 80 ಲಕ್ಷ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ರೂ. 50-70 ಲಕ್ಷ, ಪ್ರಾಧ್ಯಾಪಕರ ಹುದ್ದೆಗೆ ರೂ. 30-50  ಲಕ್ಷ, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ರೂ. 30 ಲಕ್ಷ, ಅಂತೆಯೇ ಕಿರಿಯ ಎಂಜಿನಿಯರ್‌, ಬಮೂಲ್‌, ಲೋಕೋಪಯೋಗಿ ಕಿರಿಯ ಎಂಜಿನಿಯರ್‌, ಪೇದೆಗಳ ಹುದ್ದೆಗೆ ಲಂಚ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ಮಾನಹಾನಿ ಪ್ರಕರಣದ ಸಂಬಂಧ ದಾಖಲಿಸಿರುವ ಅರ್ಜಿಯಲ್ಲಿ ಹೇಳಿತ್ತು.

ಬಿಡಿಎ ಆಯುಕ್ತರು, ಕೆಪಿಎಸ್‌ಸಿ ಅಧ್ಯಕ್ಷರು, ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ, ಕುಲಪತಿ, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ ಹುದ್ದೆಗಳಿಗೂ ಲಂಚದ ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆರೋಪಿಗಳು ಬಹಿರಂಗವಾಗಿ ಹೇಳಿರುವುದರಿಂದ ಇದು ಕ್ರಿಮಿನಲ್‌ ಮಾನಹಾನಿಯಾಗಿದೆ ಎಂದು ವಿವರಿಸಿತ್ತು.

ಕೋವಿಡ್‌ ಸಂಬಂಧಿತ ಸಾಮಗ್ರಿಗಳ ಪೂರೈಕೆ ಮತ್ತು ಖರೀದಿಯಲ್ಲಿ ಶೇ. 70ರಷ್ಟು ಕಮಿಷನ್‌ ಪಡೆಯಲಾಗಿದೆ. ಲೋಕೋಪಯೋಗಿ ಇಲಾಖೆಯ ಗುತ್ತಿಗೆ, ರಸ್ತೆ ನಿರ್ಮಾಣದಲ್ಲಿ 70:30ರಷ್ಟು ಲಂಚ ಪಡೆಯಲಾಗಿದೆ ಎಂದು ದೂರಿದ್ದಾರೆ. ಅಲ್ಲದೇ, ಶೇ 40ರ ಸರ್ಕಾರವು 1.50 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಬಿಜೆಪಿಯ ವಿರುದ್ಧ ಮಾನಹಾನಿ ಮಾಡಲಾಗಿದೆ ಎಂದು ಆಕ್ಷೇಪಿಸಿತ್ತು.

Also Read
ಬಿಜೆಪಿ ಕುರಿತ ಮಾನಹಾನಿ ಜಾಹೀರಾತು ನೀಡುವಲ್ಲಿ ರಾಹುಲ್‌ ಗಾಂಧಿ ಪಾತ್ರವಿಲ್ಲ: ಶಶಿಕಿರಣ್‌ ಶೆಟ್ಟಿ ವಾದ

ಜನಪ್ರಿಯ ʼಡಬಲ್‌ ಎಂಜಿನ್‌ ಸರ್ಕಾರʼಕ್ಕೆ ಪರ್ಯಾಯವಾಗಿ ʼಟ್ರಬಲ್‌ ಎಂಜಿನ್‌ ಸರ್ಕಾರʼ ಎಂಬ ಪದ ಬಳಕೆ ಮಾಡಲಾಗಿದ್ದು, ಈ ಮೂಲಕ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಸಾಧ್ಯತೆಯನ್ನು ಕುಸಿಯುವಂತೆ ಮಾಡಲಾಗಿದೆ. ಈ ಜಾಹೀರಾತಿನಲ್ಲಿ ಡಿ ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಫೋಟೊಗಳನ್ನು ಬಳಕೆ ಮಾಡಲಾಗಿದ್ದು, ಈ ಇಬ್ಬರೂ ನಕಲಿ ಮತ್ತು ಸಳ್ಳು ಹೇಳಿಕೆಗಳಿಗೆ ನೇರವಾಗಿ ಕಾರಣವಾಗಿದ್ದಾರೆ. ಈ ಜಾಹೀರಾತು ಪ್ರಕಟವಾದ ತಕ್ಷಣ ರಾಹುಲ್‌ ಗಾಂಧಿ ಅವರು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿದ್ದರು. ನಕಲಿ ಮತ್ತು ಪೂರ್ವಾಗ್ರಹ ಪೀಡಿತ ಜಾಹೀರಾತು ನೀಡಲು ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ ಎಂದು ವಾದಿಸಲಾಗಿತ್ತು.

Kannada Bar & Bench
kannada.barandbench.com