
ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆಯನ್ನು ಊಟ ಮಾಡುವಾಗ ಅಥವಾ ಮಲಗುವಾಗ ಬಂಧಿಸಿಲ್ಲ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಪಲಾಯಾನಗೈಯ್ಯಲು ಯತ್ನಿಸಿದಾಗ ಬಂಧಿಸಲಾಗಿದೆ. ಆದರೆ, ಈಗ ತನಿಖೆಯಲ್ಲಿ ದೋಷ ಹುಡುಕಲಾಗುತ್ತಿದೆ ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಬಂಧನವನ್ನು ಸಮರ್ಥಿಸಿತು.
ತಮ್ಮ ಬಂಧನ ಅಕ್ರಮವಾಗಿರುವುದರಿಂದ ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರಿ ನಿಖಿಲ್ ಸೋಸಲೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್‌ನ ನಿರ್ದೇಶಕ ಸುನೀಲ್ ಮ್ಯಾಥ್ಯೂ, ಡಿಎನ್‌ಎನ ಮ್ಯಾನೇಜರ್ ಕಿರಣ್ ಕುಮಾರ್ ಮತ್ತು ಸಮಂತ್ ಮಾವಿನಕೆರೆ ಅವರ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸುದೀರ್ಘ ಎರಡೂವರೆ ತಾಸು ವಾದ ಪ್ರತಿವಾದ ಆಲಿಸಿದ ಪೀಠವು ನಾಳೆ ಮಧ್ಯಾಹ್ನ ಮಧ್ಯಂತರ ಪರಿಹಾರದ (ಆರೋಪಿಗಳ ಬಿಡುಗಡೆ ಕುರಿತಾಗಿ) ಕುರಿತು ಆದೇಶ ಮಾಡಲಾಗುವುದು ಎಂದು ಆದೇಶ ಕಾಯ್ದಿರಿಸಿತು.
ಇದಕ್ಕೂ ಮುನ್ನ, ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ಕಾಲ್ತುಳಿತದಲ್ಲಿ 11 ಜನ ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಳ್ಳಲು ಆರ್‌ಸಿಬಿ ಮತ್ತು ಡಿಎನ್‌ಎ ಸೂಕ್ತ ರೀತಿಯಲ್ಲಿ ಜನ ಸಂದಣಿ ನಿರ್ವಹಣೆ ಮಾಡದಿರುವುದೇ ಕಾರಣ ಎಂದು ಆರೋಪಿಸಿದರು.
“ಆರ್‌ಸಿಬಿಯು ಜೂನ್ 3ರಂದು ಅಹಮದಾಬಾದ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಜಯಗಳಿಸುತ್ತಿದ್ದಂತೆ ರಾತ್ರಿ 11.30ಕ್ಕೆ ಜೂನ್ 4ರಂದು ಬೆಂಗಳೂರಿನಲ್ಲಿ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವ ಆಚರಿಸಲಾವುದು. ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಬೇಕು ಎಂದು ಟ್ವೀಟ್‌ಗಳನ್ನು ಮಾಡಿದೆ. ಆದರೆ, ಇದಕ್ಕೆ ಸೂಕ್ತವಾದ ಅನುಮತಿಯನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿಲ್ಲ. ಸುಮಾರು 4 ಲಕ್ಷ ಜನರು ಕ್ರೀಡಾಂಗಣದ ಮುಂಭಾಗ ನೆರೆದಿದ್ದರು ಡಿಎನ್‌ಎ ಈವೆಂಟ್ ಮ್ಯಾನೇಜ್‌ಮೆಂಟ್ ನೆಟ್‌ವರ್ಕ್ಸ್ ಆನ್‌ಲೈನ್‌ನಲ್ಲಿ ಉಚಿತ ಟಿಕೆಟ್ ಪಡೆಯುವಂತೆ ಸೂಚಿಸಿದೆ. 21 ಗೇಟ್‌ಗಳ ಪೈಕಿ 3 ಗೇಟ್‌ಗಳನ್ನು ಮಾತ್ರ ತೆರೆಯಲಾಗಿದೆ. ದುರ್ಘಟನೆಗೆ ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ಕಾರಣ” ಎಂದು ಬಲವಾಗಿ ಆಕ್ಷೇಪಿಸಿದರು.
ಇನ್ನು, “ಎಫ್‌ಐಆರ್ ದಾಖಲಾಗುತ್ತಿದ್ದ ಬೆನ್ನಿಗೇ ನಿಖಿಲ್ ಸೋಸಲೆ ಅವರು ಜೂನ್ 5ರ ರಾತ್ರಿ 10.56ಕ್ಕೆ ವಿಮಾನದ ಟಿಕೆಟ್ ಕಾಯ್ದಿರಿಸಿದ್ದು, ಬೆಳಗಿನ ಜಾವ 4.30ಕ್ಕೆ ವಿಮಾನ ನಿಲ್ದಾಣದಲ್ಲಿದ್ದಾಗ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಸ್ತುವಾರಿ ಡಿಸಿಪಿ ಅಕ್ಷಯ್ ಮಚೀಂದ್ರ ಸೂಚನೆಯ ಮೇರೆಗೆ ಸಿಸಿಬಿ ಪೊಲೀಸರು ಸೋಸಲೆಯನ್ನು ವಶಕ್ಕೆ ಪಡೆದು ಕಬ್ಬನ್ ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್‌ಸ್ಪೆಕ್ಟರ್ ರವಿ ಅವರು ಸೋಸಲೆಯನ್ನು ಬಂಧಿಸಿದ್ದಾರೆಯೇ ವಿನಾ ಸಿಸಿಬಿ ಅಧಿಕಾರಿಗಳಲ್ಲ” ಎಂದು ಸಮರ್ಥಿಸಿದರು.
“ಬಂಧಿತರೆಲ್ಲರಿಗೂ 10 ಗಂಟೆಯ ಒಳಗೆ ಬಂಧನ ಸೂಚನೆ, ಕಾರಣ, ಆಧಾರ ಸೇರಿ ಎಲ್ಲಾ ದಾಖಲೆಗಳನ್ನು ಒದಗಿಸುವ ಮೂಲಕ ಡಿ ಕೆ ಬಸು ಪ್ರಕರಣದಲ್ಲಿನ ನಿರ್ದೇಶನಗಳನ್ನು ಪಾಲಿಸಲಾಗಿದೆ. ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಐಡಿಗೆ ಜೂನ್ 5ರಂದು ವರ್ಗಾಯಿಸಲಾಗಿದೆ. ಆದರೆ, ಸಿಐಡಿ ತನಿಖೆ ಜವಾಬ್ದಾರಿ ತೆಗೆದುಕೊಂಡಿರುವುದು ಜೂನ್ 6ರಂದು. ಈ ನಡುವೆ, ಕಬ್ಬನ್ ಪಾರ್ಕ್ ಪೊಲೀಸರು ಕಾನೂನಿನ ಅನ್ವಯ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧನದಲ್ಲಿ ಯಾವುದೇ ತೆರನಾದ ಅಕ್ರಮ ನಡೆದಿಲ್ಲವಾದ್ದರಿಂದ ಅವರನ್ನು ಬಿಡುಗಡೆ ಮಾಡಬಾರದು” ಎಂದು ಕೋರಿದರು.
“ಸಾಕ್ಷ್ಯ ನಾಶ, ಅಭಿಮಾನಿಗಳಿಗೆ ಸರಿಯಾದ ರೀತಿಯಲ್ಲಿ ಉಚಿತ ಟಿಕೆಟ್ ಮಾಹಿತಿ ನೀಡದಿರುವುದು; ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ, ಅಗ್ನಿಶಾಮಕ ದಳದ ವ್ಯವಸ್ಥೆ, ಬೆಳವಣಿಗೆಗಳ ಕುರಿತು ಜನರಿಗೆ ನಿರಂತರ ಮಾಹಿತಿ ಕೊರತೆ ಸೇರಿದಂತೆ 12 ಕಾರಣಗಳ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಚಾರಕ್ಕಾಗಿ, ಬ್ರ್ಯಾಂಡ್ ಮೌಲ್ಯ ಹೆಚ್ಚಿಸಲು ಜನರ ಪ್ರಾಣಕ್ಕೆ ಕುತ್ತು ತಂದು, ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಲು ಆರೋಪಿಗಳು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ನಾಲ್ವರನ್ನು ಬಂಧಿಸಲಾಗಿದೆ” ಎಂದು ವಿವರಿಸಿದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದ ನಂತರ ಆರೋಪಿಗಳನ್ನು ಬಂಧಿಸಲಾಗಿದೆ. ಸರ್ಕಾರದ ಆಕ್ಷೇಪಣೆಯಲ್ಲಿ ಈ ಕುರಿತು ನಿರ್ದಿಷ್ಟವಾಗಿ ನಿರಾಕರಿಸಲಾಗಿಲ್ಲ. ದೀಪಕ್ ಮಹಾಜನ್ ವರ್ಸಸ್ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ವ್ಯಕ್ತಿ ಸ್ವಾತಂತ್ರ್ಯ ನಿರಾಕರಿಸುವುದು ಬಂಧನವಾಗುತ್ತದೆ. ಇಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದು ಬಂಧನವೇ ಆಗುತ್ತದೆ. ಆ ಸಂದರ್ಭದಲ್ಲಿ ಬಂಧನದ ಆಧಾರ ನೀಡಬೇಕಿತ್ತು. ಇದನ್ನು ನೀಡದಿರುವುದು ಬಂಧನವನ್ನು ಅಕ್ರಮವಾಗಿಸುತ್ತದೆ” ಎಂದರು.
“ಸಿಸಿಬಿ ಪೊಲೀಸರು ಸೋಸಲೆಯನ್ನು ವಶಕ್ಕೆ ಪಡೆದಾಗ ನೀಡಿದ ಸೂಚನೆಯಲ್ಲಿ ಸಮಯ ಉಲ್ಲೇಖಿಸಿಲ್ಲ. ಬಂಧನ ಸಮಯವನ್ನು ಉಲ್ಲೇಖಿಸಬೇಕಿರುವುದು ತನಿಖಾಧಿಕಾರಿಯೋ ಅಥವಾ ಆರೋಪಿಯೋ? ಇನ್‌ಸ್ಪೆಕ್ಷನ್ ಮೆಮೊದಲ್ಲಿಯೂ ಸಮಯ ಉಲ್ಲೇಖವಿಲ್ಲ. ಬಂಧನದ ಸಮಯದಲ್ಲಿ ಒದಗಿಸಬೇಕಾದ ದಾಖಲೆಗಳನ್ನು 10 ಗಂಟೆ ವಿಳಂಬವಾಗಿ ಒದಗಿಸಿದ್ದಾರೆ. ಕಡ್ಡಾಯವಾಗಿ ನೀಡಬೇಕಿರುವ ದಾಖಲೆಗಳನ್ನು ಒದಗಿಸದಿರುವುದು ಕಾನೂನಿಗೆ ವಿರುದ್ಧವಾದ ಕ್ರಮ” ಎಂದರು.
“ವಿಜಯೋತ್ಸವ ನಡೆಸಲು ಅನುಮತಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ ಹಾಕಿಲ್ಲ ಅಥವಾ ಅದಕ್ಕೆ ಅನುಮತಿಸಿಲ್ಲ ಎಂದು ಸರ್ಕಾರ ಹೇಳಿದೆ. ಅದಾಗ್ಯೂ, ವಿಜಯೋತ್ಸವಕ್ಕೆ ಸಂಬಂಧಿಸಿದಂತೆ ಕೆಎಸ್‌ಸಿಎ ದಾಖಲೆಯನ್ನು ಸರ್ಕಾರವೇ ನ್ಯಾಯಾಲಯದ ಮುಂದಿಟ್ಟಿದೆ. ಈ ಸಂಬಂಧ ಸರ್ಕಾರ ಏನು ಮಾಡುತ್ತಿತ್ತು? ಜೂನ್ 5ರಂದು ಸಿಐಡಿಗೆ ತನಿಖೆಗೆ ವರ್ಗಾಯಿಸಲಾಗಿದೆ. ಆದರೆ, ಜೂನ್ 6ರಂದು ಸಿಐಡಿ ತನಿಖೆ ಆರಂಭಿಸಿದೆ ಎಂದು ಸರ್ಕಾರ ಹೇಳುತ್ತಿದೆ. ಯಾವ ಆಧಾರದಲ್ಲಿ ಇದನ್ನು ಸರ್ಕಾರ ಹೇಳುತ್ತಿದೆ? ವಿಜಯೋತ್ಸವಕ್ಕೆ ಜನರನ್ನು ಆಹ್ವಾನಿಸಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವಾದಿಸಲಾಗಿದೆ. ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿಜಯೋತ್ಸವಕ್ಕೆ ಜನರನ್ನು ಆಹ್ವಾನಿಸಿದ್ದಾರೆ” ಎಂದು ಟಾಂಗ್ ನೀಡಿದರು.